

ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಮಿತಿಮೀರುತ್ತಿದ್ದು, ಇದನ್ನು ನಿಯಂತ್ರಿಸಲು ಮತ್ತೊಮ್ಮೆ ಲಾಕ್ಡೌನ್ ಜಾರಿ ಅತ್ಯವಶ್ಯಕ ಎಂದು ತಜ್ಞರ ವರದಿ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿದ ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್, ತಜ್ಞರು ಮತ್ತೊಮ್ಮೆ ಲಾಕ್ಡೌನ್ ಮಾಡುವುದು ಅನಿವಾರ್ಯ ಎಂದಿದ್ದಾರೆ. ಲಾಕ್ಡೌನ್ ಜಾರಿಯ ಬಗ್ಗೆ ವಿಮರ್ಶಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ನೀಡಿರುವ ಡಾ.ಕೆ.ಸುಧಾಕರ್, ರೋಗಿಗಳಿಗೆ ಚಿಕಿತ್ಸೆ ನೀಡದಿದ್ದಲ್ಲಿ ಮಹಾರಾಷ್ಟ್ರದ ಮಾದರಿಯಲ್ಲಿ ಆಸ್ಪತ್ರೆಗಳನ್ನು ಸರ್ಕಾರ ವಶಕ್ಕೆ ಪಡೆಯಲಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿರಿ ಕರೊನಾ ಸೋಂಕಿತ ಮೃತದೇಹವನ್ನು ಎಳೆದಾಡಿದ ನಾಯಿಗಳು… ಬೆಚ್ಚಿಬಿದ್ದ ಸ್ಥಳೀಯರು!
ಕರೊನಾ ಸಂಕಷ್ಟ ಕಾಲದಲ್ಲೂ ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ಹರಿಯಾಯ್ದ ಸುಧಾಕರ್, ಮೊದಲು ತುರ್ತು ಹಿನ್ನೆಲೆಯಲ್ಲಿ ಹೆಚ್ಚಿನ ಬೆಲೆಗೆ ಕರೊನಾ ನಿಯಂತ್ರಕ ಪರಿಕರಗಳ ಖರೀದಿ ಅನಿವಾರ್ಯವಾಗಿತ್ತು. ಬೇಡಿಕೆ ಕುಸಿತ, ಪೂರೈಕೆ ಹೆಚ್ಚಳದಿಂದ ಪರಿಕರಗಳ ಬೆಲೆ ಈಗ ಕಡಿಮೆಯಾಗಿದೆ ಎನ್ನುವುದನ್ನು ಅರಿಯಬೇಕು.
ಪಾರದರ್ಶಕವಾಗಿಯೇ ಪರಿಕರಗಳನ್ನು ಆರೋಗ್ಯ ಇಲಾಖೆ ಖರೀದಿಸಿದೆ. ಹಗರಣಗಳಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಅವ್ಯವಹಾರದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಾದ್ಯಂತ ಸಂಡೇ ಲಾಕ್ಡೌನ್ ಜಾರಿಯಲ್ಲಿತ್ತು. ಇನ್ಮುಂದೆ ಶನಿವಾರ ಮತ್ತು ಭಾನುವಾರ ಎರಡೂ ದಿನ ಕಂಪ್ಲೀಟ್ ಲಾಕ್ಡೌನ್ ಜಾರಿ ಆಗಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ನಿಪ್ಪಾಣಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜನರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಮಾಡಲಾಗುತ್ತಿದೆ. ಆದರೆ ಈ ಕುರಿತು ಅಂತಿಮವಾಗಿ ಅಧಿಸೂಚನೆ ಹೊರಡಿಸುವ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.