2 ಕೋಟಿ ರೂ. ಆಫರ್​ ಕೊಟ್ರು ಒಪ್ಪಲಿಲ್ಲ: ಪ್ರಸ್ತುತ ಪರಿಸ್ಥಿತಿ ನೋಡಿ ಸರ್ಕಾರದ ಮುಂದೆ ಮಂಡಿಯೂರಿದ ವ್ಯಕ್ತಿ! Home Relocation

Home Relocation
Published on

Home Relocation : ಕೆಲವರಿಗೆ ತಮ್ಮ ಪೂರ್ವಿಕರ ಮನೆಯ ಮೇಲೆ ಭಾವನಾತ್ಮಕ ಬಂಧವನ್ನು ಬೆಳೆಸಿಕೊಂಡಿರುತ್ತಾರೆ. ಎಂಥದ್ದೇ ಪರಿಸ್ಥಿತಿ ಬರಲಿ ಮನೆಯನ್ನು ಮಾರುವುದಾಗಲಿ ಅಥವಾ ಡೆಮಾಲಿಶ್​ ಮಾಡುವುದಾಗಲಿ ಮಾಡುವುದಿಲ್ಲ. ಅದು ಎಷ್ಟೇ ಹಳೆದಾಗಿದ್ದರೂ ಸರಿ ಪೂರ್ವಿಕರ ಮನೆಗಾಗಿ ತಮ್ಮ ಪ್ರಾಣವನ್ನು ಕೊಡಲು ಸಹ ತಯಾರಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆಯೇ ಚೀನಾದ ವ್ಯಕ್ತಿ. ಆದರೆ, ಇದೇ ಭಾವನೆ ಆ ವ್ಯಕ್ತಿಯನ್ನು ಸಂಕಷ್ಟಕ್ಕೂ ನೂಕಿದೆ.

ಸರ್ಕಾರಕ್ಕೆ ಮನೆ ಮಾರಾಟ ಮಾಡಲು ನಿರಾಕರಿಸಿದ ಚೀನಾದ ವ್ಯಕ್ತಿಯ ಪರಿಸ್ಥಿತಿ ಇದೀಗ ಚಿಂತಾಜನಕವಾಗಿದೆ. ಚೀನಾದ ಜಿಂಕ್ಸಿ ಪ್ರದೇಶದಲ್ಲಿ ಹೆದ್ದಾರಿಯನ್ನು ನಿರ್ಮಾಣ ಮಾಡಲು ಚೀನಾ ಸರ್ಕಾರ ಯೋಜಿಸಿದೆ. ಅದಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಸರ್ಕಾರ ಭೂಮಿಯನ್ನು ಸ್ವಾಧೀನ ಪಡೆಸಿಕೊಳ್ಳುತ್ತಿರುವ ಸ್ಥಳದಲ್ಲಿ ವಾಸಿಸುವ ಜನರು, ಸರ್ಕಾರ ನೀಡಿದ ದೊಡ್ಡ ಮೊತ್ತದ ಹಣವನ್ನು ಸ್ವೀಕರಿಸಿ ಜಾಗ ಖಾಲಿ ಮಾಡಿದ್ದಾರೆ. ಆದರೆ ಹುವಾಂಗ್ ಬಿಂಗ್ ಎಂಬ ವೃದ್ಧ ಮಾತ್ರ ತನ್ನ 2 ಅಂತಸ್ತಿನ ಮನೆಯನ್ನು ಸರ್ಕಾರಕ್ಕೆ ಮಾರಾಟ ಮಾಡಲು ನಿರಾಕರಿಸಿದರು. ತಮ್ಮ 11 ವರ್ಷದ ಮೊಮ್ಮಗನೊಂದಿಗೆ ತಮ್ಮ ಕೊನೆಯ ದಿನಗಳನ್ನು ಅದೇ ಮನೆಯಲ್ಲಿಯೇ ಕಳೆಯಬೇಕೆಂದು ಬಯಸಿದ್ದಾರೆ.

ಚೀನಾದ ಸರ್ಕಾರಿ ಅಧಿಕಾರಿಗಳು ವೃದ್ಧನೊಂದಿಗೆ ಹಲವಾರು ಬಾರಿ ಮಾತುಕತೆ ನಡೆಸಿ, ಮನೆಗೆ 2 ಕೋಟಿ ರೂ.ಗಳವರೆಗೆ ಪರಿಹಾರ ನೀಡುವುದಾಗಿ ಮತ್ತು ಬೇರೆಡೆ ಮನೆ ಕಟ್ಟಲು ಭೂಮಿ ಮಂಜೂರು ಮಾಡುವುದಾಗಿ ಹೇಳಿದರೂ ವೃದ್ಧ ಮಾತ್ರ ಅದಕ್ಕೆ ಒಪ್ಪದೇ ಎಲ್ಲವನ್ನೂ ನಿರಾಕರಿಸಿದ್ದಾರೆ. ವೃದ್ಧನ ಮನವೊಲಿಸುವುದು ಕಷ್ಟ ಎಂಬ ನಿರ್ಧಾರಕ್ಕೆ ಬಂದ ಸರ್ಕಾರ ಮನೆಯನ್ನು ಮಧ್ಯದಲ್ಲಿಯೇ ಬಿಟ್ಟು ಎರಡೂ ಬದಿಗಳಲ್ಲಿ ಹೆದ್ದಾರಿ ನಿರ್ಮಾಣವನ್ನು ಪೂರ್ಣಗೊಳಿಸಿದ್ದಾರೆ.

ವೃದ್ಧನ ಮನೆ ಪ್ರಸ್ತುತ ಭಯಾನಕ ಸ್ಥಿತಿಯಲ್ಲಿದೆ. ನಿರಂತರವಾಗಿ ವಾಹನಗಳ ಕರ್ಕಶ ಶಬ್ಧ ಮತ್ತು ಯಾವುದೇ ಸಮದಲ್ಲಾದರೂ ಎದುರಾಗಬಹುದಾದ ವಿಪತ್ತನ್ನು ನೆನೆದು, ವೃದ್ಧ ಕೊನೆಯ ದಿನಗಳಲ್ಲಿ ಚಿಂತಿಸುತ್ತಾ ಕಾಲ ಕಳೆಯುವಂತಾಗಿದೆ. ಈ ಪರಿಸ್ಥಿತಿಯಲ್ಲಿ, ವೃದ್ಧನು ವಿಷಾದ ವ್ಯಕ್ತಪಡಿಸುತ್ತಾ, ಒಂದು ವೇಳೆ ಸರ್ಕಾರ ಈ ಮೊದಲೇ ನೀಡಿದ್ದ ಆಫರ್ ಅನ್ನು ಮತ್ತೆ ನೀಡಿದರೆ ನಾನು ಖಂಡಿತ ಒಪ್ಪಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ.

ಒಂದು ದೊಡ್ಡ ಓಟದಲ್ಲಿ ಸೋತಂತೆ ಭಾಸವಾಗುತ್ತಿದೆ. ವಾಹನಗಳ ಶಬ್ದ ಹಾಗೂ ಅತಿಯಾದ ಧೂಳಿನಿಂದಾಗಿ ಈ ಮನೆಯಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಹೆದ್ದಾರಿಯನ್ನು ಸಂಪೂರ್ಣ ತೆರೆದ ನಂತರ ನಾನು ಅದರಲ್ಲಿ ವಾಸಿಸಲು ಸಾಧ್ಯವಾಗುತ್ತದೆಯೇ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಬಿಡುಗಡೆಯಾಗಿದ್ದು, ಪ್ರಸ್ತುತ ವೈರಲ್ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net