ತಲೆಯಲ್ಲಿ ನಾಟಿದ ಚಾಕು ಸಮೇತ ಆಸ್ಪತ್ರೆಗೆ ತೆರಳಿದ ಯುವಕ: ಮುಂದೇನಾಯ್ತು!

China Man
Published on

ಬೀಜಿಂಗ್​: ಗಲಾಟೆಯೊಂದರಲ್ಲಿ ಯುವಕನೊಬ್ಬನ ತಲೆಗೆ ಚಾಕುವಿನಿಂದ ಇರಿಯಲಾಗಿದ್ದು, ತಲೆಯಲ್ಲೇ ಸಿಲುಕಿಕೊಂಡ ಚಾಕುವಿನ ಸಮೇತ ಸಂತ್ರಸ್ತ ಯುವಕ ಆಸ್ಪತ್ರಗೆ ದಾಖಲಾಗಿರುವ ಘಟನೆ ಚೀನಾದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ನೈರುತ್ಯ ಚೀನಾದ ಚಾಂಗ್ಕಿಂಗ್ ನಗರದಲ್ಲಿ ಶನಿವಾರ ಘಟನೆ ನಡೆದಿದ್ದು, ಆಪರೇಷನ್ ಮೂಲಕ ಯುವಕನ ತಲೆಗೆ ಹೊಕ್ಕಿದ್ದ ಚಾಕುವನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸ್​ ತನಿಖೆಯು ಸಹ ಆರಂಭವಾಗಿದೆ.

ದಾರಿಹೋಕರು ಮಾಡಿರುವ ವಿಡಿಯೋದಲ್ಲಿ ಯುವಕ ಆಂಬುಲೆನ್ಸ್​ ಸಹಾಯದೊಂದಿಗೆ ಆಸ್ಪತ್ರೆಗೆ ತೆರಳುತ್ತಿರುವ ದೃಶ್ಯವಿದೆ. ಈ ವೇಳೆ ಆತನ ತಲೆಯಲ್ಲಿ ಚಾಕು ಅಂಟಿಕೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಮತ್ತೊಂದು ಚಿತ್ರದಲ್ಲಿ ಯುವಕ ಆಸ್ಪತ್ರೆಯ ಬೆಡ್​ ಮೇಲೆ ಬೋರಲಾಗಿ ಮಲಗಿದ್ದು, ಆತನ ತಲೆ ಕೂದಲನ್ನು ಸಂಪೂರ್ಣ ತೆಗೆಯಲಾಗಿದೆ.

ಎತ್ತರ ಕಟ್ಟದಿಂದ ಬಿದ್ದ ಚಾಕು ಯುವಕನ ತಲೆಗೆ ನಾಟಿದೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಇದನ್ನು ಅಲ್ಲಗೆಳೆದಿರುವ ಪೊಲೀಸರು ಯುವಕರ ನಡುವಿನ ಗಲಾಟೆ ತಾರಕಕ್ಕೇರಿ ತಲೆಗೆ ಚಾಕು ಇರಿಯಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ತನಿಖೆಯನ್ನು ಆರಂಭಿಸಿದ್ದಾರೆ. ಯುವಕನು ಸಹ ಚೇತರಿಸಿಕೊಳ್ಳುತ್ತಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net