

ನವದೆಹಲಿ: ಸೆಪ್ಟೆಂಬರ್ನಲ್ಲಿ ಉತ್ತರಾಖಂಡದ ಬರಹೋತಿ ಉತ್ತರ ಭಾಗದ ನಂದಾದೇವಿ ಜೀವವೈವಿಧ್ಯ ಮೀಸಲು ಪ್ರದೇಶದೊಳಗೆ ಕುದುರೆಯನ್ನೇರಿ ಬಂದಿದ್ದ ಚೀನಾ ಸೈನಿಕರು, ಕಳೆದ ವಾರ ಅರುಣಾಚಲ ಪ್ರದೇಶದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ದಾಟಿ ಭಾರತ ಪ್ರವೇಶಿಸಿದ್ದರು . ಉಭಯ ಸೇನೆಗಳು ಮುಖಾಮುಖಿಯಾಗಿದ್ದರಿಂದ ಕೆಲವು ತಾಸು ಉದ್ವಿಗ್ನ ಸನ್ನಿವೇಶ ಉಂಟಾಗಿತ್ತು. ಗಡಿ ರಕ್ಷಣೆ ಮಾಡುತ್ತಿರುವ ಭಾರತ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆ, ಚೀನಿ ಯೋಧರನ್ನು ಕೆಲವು ಕಾಲ ತಡೆಹಿಡಿದು, ಗಡಿಯ ಗೊಂದಲದಿಂದಾಗಿ ಎಲ್ಎಸಿ ಉಲ್ಲಂಘಿಸಿರುವುದನ್ನು ಮನವರಿಕೆ ಮಾಡಿಕೊಟ್ಟು ವಾಪಸ್ ಕಳುಹಿಸಿವೆ. ಈ ಘಟನೆ ನಂತರ ಉಭಯ ಸೇನೆಗಳು ಗಡಿಯಲ್ಲಿ ಗಸ್ತು ಹೆಚ್ಚಿಸಿವೆ ಎಂದು ಮೂಲಗಳು ಹೇಳಿವೆ.
ಬಮ್ ಲಾ ಮತ್ತು ಯಾಂಗಸ್ಟೆ ಪಾಸ್ನಲ್ಲಿ ಚೀನಾ ಪೀಪಲ್ಸ್ ಲಿಬರೇಷನ್ ಆರ್ವಿುಯ 100 ಯೋಧರು ಭಾರತದ ಗಡಿಯೊಳಕ್ಕೆ ಐದು ಕಿ.ಮೀ.ವರೆಗೂ ಬಂದಿದ್ದರು. ಕೆಲವು ತಾಸಿನ ನಂತರ ವಾಪಸು ಹೋದರು. ಈ ಭಾಗದಲ್ಲಿ ಹಿಂದೆ ಕೂಡ ಅನೇಕ ಸಲ ಚೀನಾ ಸೈನಿಕರು ಬಂದು ಹೋಗಿದ್ದಾರೆ. 2016ರಲ್ಲಿ ಯಾಂಗಸ್ಟೆ ಪಾಸ್ನಲ್ಲಿ 200ಕ್ಕೂ ಹೆಚ್ಚು ಯೋಧರ ಚೀನಾ ತುಕಡಿ ಭಾರತದಲ್ಲಿ ಕಾಣಿಸಿತ್ತು. 2011ರಲ್ಲಿ ಗಡಿ ಅತಿಕ್ರಮಿಸಿದ್ದು ಮಾತ್ರವಲ್ಲದೆ 250 ಮೀಟರ್ ಉದ್ದದ ಗೋಡೆ ನಿರ್ವಣಕ್ಕೂ ಮುಂದಾಗಿತ್ತು. ಇದನ್ನು ತಡೆದ ಭಾರತದ ಪಡೆಗಳು, ಬೀಜಿಂಗ್ ವಿರುದ್ಧ ಪ್ರತಿಭಟನೆ ದಾಖಲು ಮಾಡಿದ್ದವು.
ಕಳೆದ ವಾರ ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಪಡೆಗಳು ಅತಿಕ್ರಮಿಸಿದ್ದು ನಿಜ. ಇದನ್ನು ಸ್ಥಳೀಯ ಹಂತದಲ್ಲೇ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಕೂಡ ಹೇಳಿದೆ. ಎಲ್ಎಸಿಯನ್ನು ನಿಖರವಾಗಿ ಗುರುತಿಸಿಲ್ಲ ಅಥವಾ ಮಾರ್ಕ್ ಮಾಡಿಲ್ಲದ ಕಾರಣ ಈ ಭಾಗದಲ್ಲಿ ಗೊಂದಲ ಮೊದಲಿನಿಂದಲೂ ಇದೆ ಎಂದು ತಿಳಿಸಿದೆ. ಆದರೆ, ಚೀನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅರುಣಾಚಲ ಪ್ರದೇಶದ ತವಾಂಗ್ ಅನ್ನು ಚೀನಾ 1962ರಲ್ಲಿ ಕೆಲವು ದಿನ ಅತಿಕ್ರಮಿಸಿತ್ತು. ಈ ಸಂದರ್ಭದಲ್ಲಿ ನಡೆದ ಯುದ್ಧದಲ್ಲಿ ಭಾರತಕ್ಕೆ ಹಿನ್ನೆಡೆ ಆಗಿದೆ. 2020ರ ಮೇ ತಿಂಗಳಲ್ಲಿ ಲಡಾಖ್ನ ಪ್ಯಾಂಗಾಂಗ್ ತ್ಸೊ ಸರೋವರ ಗಡಿಯಲ್ಲಿ ಚೀನಾ ಪಡೆಗಳು ಕ್ಯಾತೆ ತೆಗೆದಿದ್ದವು. ಅವುಗಳನ್ನು ಹಿಮ್ಮೆಟ್ಟಿಸಲು ಭಾರತ ಕೂಡ ಸಜ್ಜಾಗಿತ್ತು. ಆದರೆ, ಜೂನ್ 15ರ ರಾತ್ರಿ ಗಲ್ವಾನ್ ಕಣಿವೆಯಲ್ಲಿ ಉಭಯ ಸೇನೆಗಳ ಮಧ್ಯೆ ಘರ್ಷಣೆ ನಡೆಯಿತು. ಇದರಿಂದ ಭಾರತದ 20 ಯೋಧರು ಹುತಾತ್ಮರಾದರು. ಅಮೆರಿಕ ಬೇಹುಗಾರಿಕಾ ವರದಿ ಪ್ರಕಾರ ಚೀನಾದ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.