

ವುಹಾನ್: ಕರೊನಾ ವೈರಸ್ ವಿರುದ್ಧ 35 ದಿನಗಳಿಂದ ನಿರಂತರವಾಗಿ ಹೋರಾಡುತ್ತಿದ್ದ ಚೀನಾ ವೈದ್ಯರೊಬ್ಬರು ಪಾರ್ಶ್ವವಾಯುಗೆ ತುತ್ತಾಗಿ ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ.
ಡಾ. ಡಾಂಗ್ ತಿಯಾನ್(29) ಮೃತ ವೈದ್ಯ. ಅರಿವಳಿಕೆ ತಜ್ಞರಾಗಿದ್ದ ತಿಯಾನ್ ಹುಬೇನಲ್ಲಿರುವ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಇನ್ನೊಂದು ವಾರದಲ್ಲಿ ತಿಯಾನ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ, ಕರೊನಾ ಮಹಾಮಾರಿ ಪರೋಕ್ಷವಾಗಿ ಅವರನ್ನು ತನ್ನ ಮೃತ್ಯುಕೂಪಕ್ಕೆ ಬಲಿ ಪಡೆದುಕೊಂಡಿದೆ.
ಕಳೆದ ಒಂದು ತಿಂಗಳಿಂದ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರಲ್ಲಿ ತಿಯಾನ್ ಕೂಡ ಪ್ರಮುಖರಾಗಿದ್ದರು. ಮಾರ್ಚ್ 3ರಂದು ಕುಸಿದುಬಿದ್ದ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಐಸಿಯುನಲ್ಲಿ 19 ದಿನಗಳ ಕಾಲ ಚಿಕಿತ್ಸೆಯನ್ನು ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ. ಒಂದು ವಾರದ ಹಿಂದಷ್ಟೇ ತಿಯಾನ್ ಅವರು ಅನಾರೋಗ್ಯದಿಂದಾಗಿ ತಂದೆಯನ್ನು ಕಳೆದುಕೊಂಡಿದ್ದರು.
ಹುಬೇ ಪ್ರಾಂತ್ಯದ ದಂಗ್ಯಂಗ್ ಪ್ರದೇಶದಲ್ಲಿ ತಿಯಾನ್ ಅವರ ಅಂತ್ಯಕ್ರಿಯೆ ನೆರವೇರಿದೆ. ಈ ವೇಳೆ ಅನೇಕ ಮಂದಿ ವೈದ್ಯನ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದರು. "ಆ್ಯಂಟಿ ಕರೊನಾ ವೈರಸ್ ಹೀರೋ ಡಾಂಗ್ ತಿಯಾನ್ ತವರಿಗೆ ಮತ್ತೆ ಮರಳಲಿ" ಎಂಬ ಬ್ಯಾನರ್ಗಳನ್ನು ಹಿಡಿದು ಗೌರವ ಸೂಚಿಸಿದರು.
ಅನಾರೋಗ್ಯದಿಂದ ನರಳುತ್ತಿದ್ದ ತಮ್ಮ ತಂದೆಯನ್ನು ನೋಡಿಕೊಳ್ಳುತ್ತಿದ್ದ ತಿಯಾನ್, ಜನವರಿ ಅಂತ್ಯದಲ್ಲಿ ಸ್ವಯಂಪ್ರೇರಿತರಾಗಿ ವೈರಸ್ ವಿರುದ್ಧ ಹೋರಾಡಲು ಕೆಲಸಕ್ಕೆ ಮರಳಿದ್ದರು. ಅಂದಹಾಗೆ ಹುಬೇ ಕರೊನಾ ವೈರಸ್ ಸ್ಪೋಟಗೊಂಡ ಕೇಂದ್ರ ಭಾಗವಾಗಿದೆ.
ಸತತ 35 ದಿನಗಳಿಂದ ಒಮ್ಮೆ ವಿರಾಮವಿಲ್ಲದೇ ವೈರಸ್ ವಿರುದ್ಧ ಹೋರಾಡಿದ್ದ ತಿಯಾನ್ಗೆ ಫೆ. 29ರಂದು ಕೆಲಸಕ್ಕೆ ವಿರಾಮ ನೀಡಲಾಗಿತ್ತು. ಕ್ವಾರಂಟೈನ್ ಅವಶ್ಯಕತೆಯಿಂದ ಅವರು ಪ್ರತ್ಯೇಕವಾಗಿದ್ದರು. ಕ್ವಾರಂಟೈನ್ನಲ್ಲಿದ್ದ ಸಂದರ್ಭದಲ್ಲಿ ಇದ್ದಕ್ಕಿಂತ ತಲೆನೋವು ಕಾಣಿಸಿಕೊಂಡು, ಮಾತನಾಡುವ ಸಾಮರ್ಥ್ಯವನ್ನು ಕ್ಷೀಣಿಸಲು ಆರಂಭಿಸಿದಾಗ ಆಸ್ಪತ್ರೆಗೆ ದಾಖಲಾಗಿದ್ದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 21ರಂದು ತಿಯಾನ್ ಮೃತಪಟ್ಟರು ಎಂದು ಹುಬೇ ಪ್ರಾಂತ್ಯದ ಜಿಜಿಯಾಂಗ್ ಪೀಪಲ್ಸ್ ಹಾಸ್ಪಿಟಲ್ ಘೋಷಿಸಿದೆ. ಇದೇ ಆಸ್ಪತ್ರೆಯಲ್ಲಿ ತಿಯಾನ್ ಕೆಲಸ ಮಾಡುತ್ತಿದ್ದರು.
ತಿಯಾನ್ ಅವರು ಕೆಲಸದಲ್ಲಿ ತುಂಬಾ ಶ್ರದ್ಧೆಯನ್ನು ಹೊಂದಿದ್ದರು ಎಂದು ಆಸ್ಪತ್ರೆ ತಿಳಿಸಿದೆ. ಅವರ ಸಹದ್ಯೋಗಿಗಳು ಕೂಡ ತಿಯಾನ್ ಕಾರ್ಯವನ್ನು ಸ್ಮರಿಸಿ, ಅಗಲಿಕೆಯನ್ನು ನೆನೆದು ಕಣ್ಣೀರಿಟ್ಟರು. ಮಿಲಿಯನ್ ವೈದ್ಯರಲ್ಲಿ ತಿಯಾನ್ ಅತ್ಯುತ್ತಮ ಪ್ರತಿನಿಧಿ ಎಂದು ಹಾಸ್ಪಿಟಲ್ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿದೆ. (ಏಜೆನ್ಸೀಸ್)