

ನವದೆಹಲಿ: ಭಾರತದಲ್ಲಿ ಇರುವ ತನ್ನ ಪ್ರಜೆಗಳನ್ನು ಚೀನಾಕ್ಕೆ ಕಳಿಸಲು ಇಲ್ಲಿನ ಚೀನಾ ರಾಯಭಾರ ಕಚೇರಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿದೆ! ಈ ಕುರಿತು ರಾಯಭಾರ ಕಚೇರಿ ತನ್ನ ವೆಬ್‌ಸೈಟ್‌ನಲ್ಲಿ ಸೋಮವಾರ ಹೇಳಿಕೆಯೊಂದನ್ನು ಪ್ರಕಟಿಸಿದೆ.
‘ಚೀನಾದ ವಿದ್ಯಾರ್ಥಿಗಳು, ಪ್ರವಾಸಿಗರು, ಉದ್ಯಮಿಗಳು ಯಾರಾದರೂ ಭಾರತದಲ್ಲಿ ಸಿಲುಕಿದ್ದರೆ ಅವರು ವಿಶೇಷ ವಿಮಾನದಲ್ಲಿ ಪ್ರಯಾಣಿಸಲು ಮೇ 27ರ ಒಳಗೆ ನೋಂದಾಯಿಸಿಕೊಳ್ಳಬಹುದು’ ಎಂದು ಹೇಳಿದೆ.
ಚೀನಾ ಏಕಾಏಕಿ ಇಂತಹ ಕ್ರಮಕ್ಕೆ ಮುಂದಾಗಲು ಏನು ಕಾರಣ ಎಂಬುದೀಗ ಚರ್ಚೆಯ ವಸ್ತುವಾಗಿದೆ. ಚೀನಾ ಮತ್ತು ಭಾರತದ ನಡುವೆ ಇತ್ತೀಚೆಗೆ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ತ್ವೇಷಮಯ ಪರಿಸ್ಥಿತಿ ತಲೆದೋರಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನೊಂದೆಡೆ, ಭಾರತದಲ್ಲಿ ದಿನೇದಿನೆ ಕರೊನಾ ವೈರಸ್‌ನ ಹಾವಳಿ ಹೆಚ್ಚಾಗುತ್ತಿರುವುದೇ ಚೀನಾ ತನ್ನ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಸದ್ಯಕ್ಕೆ ಎಷ್ಟು ಚೀನೀಯರು ಇದ್ದಾರೆ ಎಂಬ ನಿರ್ದಿಷ್ಟ ಅಂಕಿ ಅಂಶ ಲಭ್ಯವಿಲ್ಲ. ಯೋಗ ಕಲಿಯಲು, ಬೌದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಬಂದಿರುವ ಕೆಲವರು ಇದ್ದಾರೆ ಎನ್ನಲಾಗಿದೆ. ವಿಶೇಷ ವಿಮಾನ ಎಲ್ಲಿಂದ, ಯಾವಾಗ ಹೊರಡಲಿದೆ ಎಂಬ ವಿವರಗಳನ್ನು ರಾಯಭಾರ ಕಚೇರಿ ಇನ್ನೂ ಪ್ರಕಟಿಸಿಲ್ಲ.
ಇಲ್ಲಿಂದ ಚೀನಾಕ್ಕೆ ಹೋಗುವವರು ತಮ್ಮ ಪ್ರಯಾಣದ ಟಿಕೆಟ್ ವೆಚ್ಚವನ್ನು ಭರಿಸಬೇಕಲ್ಲದೆ, ಅಲ್ಲಿಗೆ ಹೋದ ಬಳಿಕ 14 ದಿನಗಳ ಕಾಲ ಕ್ವಾರಂಟೈನ್‌ನ ವೆಚ್ಚವನ್ನೂ ಭರಿಸಬೇಕು. ಜ್ವರ, ನೆಗಡಿ ಮತ್ತಿತರ ಕಾಯಿಲೆಗಳಿದ್ದವರಿಗೆ ಈ ಸೌಲಭ್ಯ ಸಿಗುವುದಿಲ್ಲ ಎಂದೂ ಸೂಚಿಸಲಾಗಿದೆ.