ಅಮೆರಿಕಕ್ಕೆ ಚೀನಾದ ‘ಪಾಂಡಾ ಗಿಫ್ಟ್’; ಸ್ನೇಹಕ್ಕೆ ಸೇತುವೆಯಾದ ಮುದ್ದು ಜೋಡಿ! | China Pandas

ಚೀನಾದಿಂದ ಕಳುಹಿಸಲಾದ ಪಿಂಗ್ ಪಿಂಗ್ ಮತ್ತು ಫು ಶುವಾಂಗ್ ಎಂಬ ಎರಡು ದೈತ್ಯ ಪಾಂಡಾಗಳು 16 ಗಂಟೆಗಳ ಪ್ರಯಾಣದ ಬಳಿಕ ಅಮೆರಿಕದ ಜಾರ್ಜಿಯಾ ರಾಜ್ಯದ ಅಟ್ಲಾಂಟಾಗೆ ತಲುಪಿವೆ.
China’s ‘Panda Gift’ to America
ಚೀನಾದಿಂದ ಅಮೆರಿಕದ ಅಟ್ಲಾಂಟಾಗೆ ಬಂದ ಪಾಂಡಾ ಜೋಡಿ
Published on: 

US Pandas: ಚೀನಾದಿಂದ ಕಳುಹಿಸಲಾದ ಎರಡು ದೈತ್ಯ ಪಾಂಡಾಗಳು 16 ಗಂಟೆಗಳ ಪ್ರಯಾಣದ ಬಳಿಕ ಅಮೆರಿಕದ ಜಾರ್ಜಿಯಾ ರಾಜ್ಯದ ಅಟ್ಲಾಂಟಾಗೆ ತಲುಪಿವೆ. ಚೀನಾ–ಅಮೆರಿಕ ನಾಯಕರ ಶೃಂಗಸಭೆಯ ಬೆನ್ನಲ್ಲೇ ಪಾಂಡಾಗಳ ವರ್ಗಾವಣೆ ನಡೆದಿರುವುದು ಗಮನ ಸೆಳೆದಿದೆ.

ಚೀನಾದ ‘ಪಾಂಡಾ ಡಿಪ್ಲೊಮಸಿ’ ಭಾಗವಾಗಿ ಪಿಂಗ್ ಪಿಂಗ್ ಮತ್ತು ಫು ಶುವಾಂಗ್ ಎಂಬ ಎರಡು ಪಾಂಡಾಗಳನ್ನು ಅಮೆರಿಕಕ್ಕೆ ಕಳುಹಿಸಲಾಗಿದೆ. ವಿದೇಶಿ ರಾಷ್ಟ್ರಗಳೊಂದಿಗಿನ ಬಾಂಧವ್ಯ ವೃದ್ಧಿಯ ಸಂಕೇತವಾಗಿ ಚೀನಾ ಹಲವು ವರ್ಷಗಳಿಂದ ದೈತ್ಯ ಪಾಂಡಾಗಳನ್ನು ಇತರ ದೇಶಗಳಿಗೆ ಸಾಲದ ರೂಪದಲ್ಲಿ ಕಳುಹಿಸುತ್ತಿದೆ.

16 ಗಂಟೆ ವಿಶೇಷ ವಿಮಾನದಲ್ಲಿ ಪಾಂಡಾಗಳ ಪ್ರಯಾಣ

ಪಿಂಗ್ ಪಿಂಗ್ ಮತ್ತು ಫು ಶುವಾಂಗ್ ಚೀನಾದ ಚೆಂಗ್ಡು ಶುವಾಂಗ್ಲಿಯು ವಿಮಾನ ನಿಲ್ದಾಣದಿಂದ ವಿಶೇಷ ಚಾರ್ಟರ್ ವಿಮಾನದಲ್ಲಿ ಹೊರಟವು. ಸುಮಾರು 16 ಗಂಟೆಗಳ ಪ್ರಯಾಣದ ಬಳಿಕ ಅಟ್ಲಾಂಟಾ ತಲುಪಿದವು. ಪ್ರಯಾಣದ ವೇಳೆ ಪಾಂಡಾಗಳಿಗೆ ಬೇಯಿಸಿದ ಜೋಳದ ಬನ್‌, ಬಿದಿರು ಮೊಗ್ಗು ಮತ್ತು ಕ್ಯಾರೆಟ್‌ಗಳನ್ನು ನೀಡಲಾಯಿತು. ಫೆಡ್ಎಕ್ಸ್‌ ನಿರ್ವಹಿಸಿದ ಬೋಯಿಂಗ್ 777 ವಿಮಾನಕ್ಕೆ ‘ಫೆಡ್ಎಕ್ಸ್ ಪಾಂಡಾ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿತ್ತು.

10 ವರ್ಷ ಅಟ್ಲಾಂಟಾ ಮೃಗಾಲಯದಲ್ಲಿ ವಾಸ

ಅಟ್ಲಾಂಟಾದ ಅಟ್ಲಾಂಟಾ ಮೃಗಾಲಯ ಈ ಪಾಂಡಾ ಜೋಡಿಯನ್ನು ಮುಂದಿನ 10 ವರ್ಷಗಳ ಕಾಲ ನೋಡಿಕೊಳ್ಳಲಿದೆ. ಅವುಗಳಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಆರೈಕೆ ಸಿಬ್ಬಂದಿಯ ತಂಡವನ್ನೂ ಸಿದ್ಧಪಡಿಸಲಾಗಿದೆ. ಪಾಂಡಾಗಳಿಗೆ ಅಟ್ಲಾಂಟಾದಲ್ಲೇ ಬೆಳೆದ ಬಿದಿರು ನಿರಂತರವಾಗಿ ಪೂರೈಸಲಾಗುತ್ತದೆ. ಸದ್ಯ ಪಾಂಡಾಗಳನ್ನು ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗುವುದಿಲ್ಲ. ಸುರಕ್ಷಿತ ಪ್ರದೇಶದಲ್ಲಿರಿಸಿ ಸುಮಾರು ಒಂದು ತಿಂಗಳ ಕಾಲ ಕ್ವಾರಂಟೈನ್‌ ಮಾಡಲಾಗುತ್ತದೆ.

2024ರಿಂದ ಅಟ್ಲಾಂಟಾದಲ್ಲಿ ಪಾಂಡಾಗಳಿರಲಿಲ್ಲ

ಅಟ್ಲಾಂಟಾ ಮೃಗಾಲಯವು 1999ರಿಂದ ಚೀನಾದಿಂದ ಪಾಂಡಾಗಳನ್ನು ಸಾಲದ ರೂಪದಲ್ಲಿ ಹೊಂದಿತ್ತು. ಈ ಅವಧಿಯಲ್ಲಿ ಏಳು ಪಾಂಡಾ ಮರಿಗಳು ಜನಿಸಿದ್ದರೂ, ಅವೆಲ್ಲವೂ ಬಳಿಕ ಚೆಂಗ್ಡುಗೆ ಮರಳಿವೆ. 2024ರಿಂದ ಮೃಗಾಲಯದಲ್ಲಿ ಯಾವುದೇ ಪಾಂಡಾ ಇರಲಿಲ್ಲ. ಹೊಸದಾಗಿ ಬಂದಿರುವ ಪಿಂಗ್ ಪಿಂಗ್ ಮತ್ತು ಫು ಶುವಾಂಗ್ 2020ರಲ್ಲಿ ಜನಿಸಿವೆ. ಪಿಂಗ್ ಪಿಂಗ್‌ಗೆ ಈಗ ಆರು ವರ್ಷವಾಗಿದ್ದು, ಫು ಶುವಾಂಗ್ ಅಕ್ಟೋಬರ್‌ನಲ್ಲಿ ಆರು ವರ್ಷ ಪೂರೈಸಲಿದೆ. ಸೆರೆಯಲ್ಲಿರುವ ಪಾಂಡಾಗಳು ಸಾಮಾನ್ಯವಾಗಿ ಸುಮಾರು 30 ವರ್ಷ ಬದುಕುತ್ತವೆ.

ದಶಕಗಳಿಂದ ಚೀನಾದ ‘ಪಾಂಡಾ ಡಿಪ್ಲೊಮಸಿ’

ಚೀನಾ ಹಲವು ದಶಕಗಳಿಂದ ದೈತ್ಯ ಪಾಂಡಾಗಳನ್ನು ‘ಸಾಫ್ಟ್ ಪವರ್’ ಸಂಕೇತವಾಗಿ ಬಳಸಿಕೊಂಡು ಬಂದಿದೆ. 1972ರಲ್ಲಿ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಚೀನಾಗೆ ಭೇಟಿ ನೀಡಿದ ಬಳಿಕ, ಚೀನಾ ಅಮೆರಿಕಕ್ಕೆ ಒಂದು ಜೋಡಿ ಪಾಂಡಾಗಳನ್ನು ಉಡುಗೊರೆಯಾಗಿ ನೀಡಿತ್ತು.

ಇದನ್ನೂ ಓದಿ: ಲಾಲ್‌ಬಾಗ್‌ಚಾ ರಾಜಾ ವಿಸರ್ಜನೆ ವೇಳೆ ಕಳ್ಳರ ಕೈಚಳಕ; 192 ಮೊಬೈಲ್‌ ಕಳ್ಳತನ, 18 ಮಂದಿ ಲಾಕ್​! | Lalbaugcha Raja Visarjan

ಈ ಬಾರಿಯ ಪಾಂಡಾಗಳ ಅಮೆರಿಕ ಪ್ರವಾಸವೂ ಉಭಯ ದೇಶಗಳ ನಡುವಿನ ಸಂಬಂಧದ ಸಂಕೇತವಾಗಿ ಗಮನ ಸೆಳೆದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net