

ವುಹಾನ್: ಕರೊನಾ ವೈರಸ್ ಪ್ರಪಂಚದ 170ಕ್ಕೂ ಹೆಚ್ಚು ದೇಶಗಳಿಗೆ ಹರಡಿಕೊಂಡಿದೆ. 2 ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿರುವ ಈ ಸೋಂಕಿನಿಂದ 8 ಸಾವಿರಕ್ಕೂ ಅಧಿಕ ಜನ ಮರಣ ಹೊಂದಿದ್ದಾರೆ. 60 ವರ್ಷ ಮೇಲ್ಪಟ್ಟವರು ಕರೊನಾದಿಂದಾಗಿ ಬೇಗ ಸಾಯುತ್ತಾರೆ, ಅದಕ್ಕಿಂತ ಚಿಕ್ಕವರಲ್ಲಿ ಸಾವು ಸಂಭವಿಸುವುದಿಲ್ಲ ಎನ್ನುವ ಸುದ್ದಿ ಹಲವೆಡೆ ಹರಿದಾಡುತ್ತಿದ್ದು ಅದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯರೊಬ್ಬರು ವಿವರಣೆ ನೀಡಿದ್ದಾರೆ.
ಕರೊನಾ ವೈರಸ್ ದಾಳಿಗೆ ಬಲಿಯಾಗುವವರಿಗೆ ವಯಸ್ಸಿನ ಇತಿ ಮಿತಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ಡಾಕ್ಟರ್ ಬ್ರೂಸ್ ಐಲ್ವರ್ಡ್ ತಿಳಿಸಿದ್ದಾರೆ. ಕರೊನಾ ವೈರಸ್ ಎಲ್ಲರನ್ನೂ ಒಂದೇ ರೀತಿಯಲ್ಲಿ ಪರಿಗಣಿಸುತ್ತದೆ. ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಈ ವೈರಸ್ ವಯಸ್ಸಿನ ಆಧಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಬ್ರೂಸ್ ಐಲ್ವರ್ಡ್ ಅವರು ಕರೊನಾ ವೈರಸ್ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದ್ದಾರೆ. 72,000 ರೋಗಿಗಳ ಸಮೀಕ್ಷೆ ನಡೆಸಿದ್ದು ಅದರಲ್ಲಿ ಯಾವ ವಯಸ್ಸಿನ ರೋಗಿಗಳು ಹೆಚ್ಚಾಗಿ ಸಾಯುತ್ತಿದ್ದಾರೆ ಎನ್ನುವುದನ್ನು ಗಮನಿಸಿದ್ದಾರೆ. ವರದಿಯ ಪ್ರಕಾರ ಈಗಾಗಲೇ ವೈರಸ್ಗೆ ಮೃತರಾಗಿರುವವರಲ್ಲಿ 60ಕ್ಕಿಂತ ಕಡಿಮೆ ವರ್ಷ ವಯಸ್ಸಾಗಿರುವವರು ಶೇ.19 ಇದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆ ಇರುವವರು ಮತ್ತು ಧೂಮಪಾನ ಮಾಡುವವರಿಗೆ ವೈರಸ್ ಬಹುಬೇಗ ಪರಿಣಾಮ ಬೀರುವುದರಿಂದ ಅಂತವರು ಹೆಚ್ಚಾಗಿ ಸಾಯುತ್ತಾರೆ. 60 ವರ್ಷದ ಮೇಲ್ಪಟ್ಟವರಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೆಚ್ಚಾಗಿರುವುದರಿಂದ ಅವರ ಸಾವಿನ ಸಂಖ್ಯೆ ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.
ಕರೊನಾ ವೈರಸ್ ಶ್ವಾಸಕೋಶದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಬ್ರೂಸ್ ಐಲ್ವರ್ಡ್ ಅವರು ಸೋಂಕಿತ ಯುವಕನೊಬ್ಬನ ಶ್ವಾಸಕೋಶದ ಸ್ಕ್ಯಾನಿಂಗ್ ರಿಪೋರ್ಟ್ ಮೂಲಕ ತೋರಿಸಿಕೊಟ್ಟಿದ್ದಾರೆ. ಮೊದಲಿಗೆ ಯುವಕನ ಶ್ವಾಸಕೋಶದಲ್ಲಿ ಉರಿಯೂತದ ದ್ರವದಿಂದ ತುಂಬಿದ ಗಾಳಿಚೀಲಗಳು ನಿರ್ಮಾಣವಾಗುತ್ತಾ ಹೋಗುತ್ತದೆ. ಕ್ರಮೇಣ ಅದು ಜಾಸ್ತಿಯಾಗಿ ಉಸಿರಾಟಕ್ಕೆ ತೊಂದರೆಯುಂಟಾಗುತ್ತದೆ ಎನ್ನುವುದು ರಿಪೋರ್ಟ್ನಲ್ಲಿ ಕಾಣಿಸಿದೆ. (ಏಜೆನ್ಸೀಸ್)