ಮುಕೇಶ್ ಅಂಬಾನಿ ಹಿಂದಿಕ್ಕಿದ ಝಾಂಗ್: ವಾಟರ್ ಬಾಟಲ್ ಕಂಪನಿ ಮಾಲೀಕ ಏಷ್ಯಾದ ನಂ. 1 ಶ್ರೀಮಂತ!

Jhang
Published on

ಬೀಜಿಂಗ್: ಚೀನಾದ ಉದ್ಯಮಿ ಝಾಂಗ್ ಶನ್ಶನ್ ಈಗ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ರಿಲಯನ್ಸ್ ಸಮೂಹ ಸಂಸ್ಥೆ ಒಡೆಯ ಮುಕೇಶ್ ಅಂಬಾನಿ ಹಾಗೂ ಅಲಿಬಾಬಾ ಸಹಸಂಸ್ಥಾಪಕ ಜಾಕ್ ಮಾ ಅವರನ್ನು ಝಾಂಗ್ ಹಿಂದಿಕ್ಕಿದ್ದಾರೆ.

ಝಾಂಗ್ ಅವರ ನಿವ್ವಳ ಆಸ್ತಿ ಮೌಲ್ಯ ಈ ವರ್ಷ 70.9 ಬಿಲಿಯನ್ ಡಾಲರ್​ನಿಂದ (-ಠಿ;5.17 ಲಕ್ಷ ಕೋಟಿ) 77.8 ಬಿಲಿಯನ್ ಡಾಲರ್​ಗೆ (-ಠಿ;5.68 ಲಕ್ಷ ಕೋಟಿ)ಏರಿಕೆಯಾಗಿದೆ. ವಿಶ್ವದ 11ನೇ ಅತಿ ದೊಡ್ಡ ಶ್ರೀಮಂತ ಎಂಬ ಸ್ಥಾನವನ್ನೂ ಅವರು ಪಡೆದುಕೊಂಡಿದ್ದಾರೆ ಎಂದು ಬ್ಲೂಮ್​ಗ್ ಸೂಚ್ಯಂಕ ತಿಳಿಸಿದೆ.

ಝಾಂಗ್ ಅವರು ಕಳೆದ ವರ್ಷ ಏಪ್ರಿಲ್​ನಲ್ಲಿ ಬೀಜಿಂಗ್​ನ ಲಸಿಕೆ ತಯಾರಿಕೆ ಸಂಸ್ಥೆ ವಾಂಟೈ ಬಯೋಲಾಜಿಕಲ್ ಫಾರ್ಮಸಿ ಎಂಟರ್​ಪ್ರೖೆಸ್ ಖರೀದಿಸಿದ್ದರು. ಬಳಿಕ ನೀರಿನ ಬಾಟಲ್ ಕಂಪನಿ ನಾಂಗ್​ಫು ಸ್ಟ್ರಿಂಗ್​ನ್ನು ಖರೀದಿಸಿದ್ದರು. ನಾಂಗ್​ಫು ಷೇರು ಮೌಲ್ಯ ಶೇಕಡ 155 ಏರಿಕೆ ಕಂಡಿದ್ದು, ವಾಂಟೈ ಷೇರುಮೌಲ್ಯ ಶೇಕಡ 2 ಸಾವಿರಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಝಾಂಗ್ ಅವರ ಸಂಪತ್ತು ಕೆಲವೇ ತಿಂಗಳಲ್ಲಿ ಭಾರಿ ಏರಿಕೆ ಕಂಡಿದೆ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಷೇರು ಮೌಲ್ಯ ಪ್ರಸಕ್ತ ವರ್ಷ ಭಾರಿ ಏರಿಕೆ ಕಂಡಿತ್ತಾದರೂ ವರ್ಷಾಂತ್ಯಕ್ಕೆ ಅವರ ಲಾಭ ಇಳಿಕೆ ಕಂಡಿದೆ. ಅಂಬಾನಿಯ ಒಟ್ಟು ನಿವ್ವಳ ಆಸ್ತಿ ಮೌಲ್ಯ 76.9 ಬಿಲಿಯನ್ ಡಾಲರ್ (-ಠಿ;5.61 ಲಕ್ಷ ಕೋಟಿ) ಆಗಿದ್ದು, ಜಾಕ್ ಮಾ ಅವರ ಒಟ್ಟು ನಿವ್ವಳ ಮೌಲ್ಯ 61.7 ಬಿಲಿಯನ್ ಡಾಲರ್​ಗೆ (-ಠಿ;4.50 ಲಕ್ಷ ಕೋಟಿ) ಇಳಿದಿದೆ.

ಒಂಟಿ ತೋಳ!

ಕುಡಿಯುವ ನೀರಿನ ಬಾಟಲ್ ತಯಾರಿಕೆ ಉದ್ಯಮದ ಮೂಲಕ ಬೆಳೆದ ಝಾಂಗ್ ಅವರನ್ನು ಚೀನಾದಲ್ಲಿ ಒಂಟಿ ತೋಳ (ಲೋನ್ ವೂಲ್ಪ) ಎಂದೇ ಕರೆಯಲಾಗುತ್ತದೆ. ಅವರು ಯಾವುದೇ ರಾಜಕೀಯ ಪಕ್ಷ, ಸಂಘಟನೆ, ಗುಂಪಿನ ಜತೆ ಗುರುತಿಸಿಕೊಂಡಿಲ್ಲ. ಉದ್ಯಮ ಕ್ಷೇತ್ರದಲ್ಲೂ ಅವರು ಯಾರ ಜತೆಗೂ ತೀವ್ರ ಪ್ರತಿಸ್ಪರ್ಧೆ ನಡೆಸಲಿಲ್ಲ. ಹೀಗಾಗಿ ಅವರನ್ನು ಈ ಹೆಸರಿನಿಂದ ಕರೆಯಲಾಗುತ್ತದೆ.

ಜಾಕ್ ಮಾ ಆಸ್ತಿ ಇಳಿಕೆ

ಚೀನಾದ ಅತಿದೊಡ್ಡ ಇ ಕಾಮರ್ಸ್ ಕಂಪನಿ ಅಲಿಬಾಬಾ ಮಾಲೀಕ ಜಾಕ್ ಮಾ ಆಸ್ತಿ ಮೌಲ್ಯದಲ್ಲಿ ಇಳಿಕೆ ಕಂಡುಬಂದಿದೆ. ಅಲಿಬಾಬಾ ಮಾತೃಸಂಸ್ಥೆ ಆಂಟ್ ಕಂಪನಿಯ ಐಪಿಒ ಸಂಬಂಧ ಚೀನಾ ಸರ್ಕಾರ ಹಲವು ನಿರ್ಬಂಧಗಳನ್ನು ವಿಧಿಸಿದೆ. ಹೀಗಾಗಿ ಅವರ ಕಂಪನಿಯ ಷೇರುಗಳ ಮೌಲ್ಯ ಇಳಿಕೆ ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net