ಸ್ಪರ್ಧಾ ಪರೀಕ್ಷೆಗೆ ಧೈರ್ಯವೇ ಕೀಲಿ ಕೈ; ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಚಿನ್ನಾ ವಿಶ್ವನಾಥ್ ​​ಭೂಸರಡ್ಡಿ

china vishwanath busradi india rank 14 in indian forest service examination 2021
Published on

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮುನ್ನ ಅದರ ಮಹತ್ವ ಮತ್ತು ನಾವು ಯಾವ ಕಾರಣಕ್ಕಾಗಿ ಪರೀಕ್ಷೆ ಬರೆಯುತ್ತಿದ್ದೇವೆ ಎನ್ನುವುದರ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ನಮ್ಮ ಗುರಿ ತಲುಪಲು ಸಾಧ್ಯ ಎನ್ನುತ್ತಲೇ ಮಾತು ಆರಂಭಿಸಿದ ಚಿನ್ನಾ ವಿಶ್ವನಾಥ್ ಭೂಸರಡ್ಡಿ  ಅವರು ತಮ್ಮ ಸಾಧನೆಯ ಹಾದಿಯನ್ನು ಮೆಲಕು ಹಾಕಿದ್ದಾರೆ.

ಚಿನ್ನಾ ವಿಶ್ವನಾಥ್ ಭೂಸರಡ್ಡಿ, ಪ್ರೋಬೆಷನರಿ ಆಫೀಸರ್ (ಭಾರತೀಯ ಅರಣ್ಯ ಸೇವೆ 2021, ಅಐ್ಕ 14ನೇ ಸ್ಥಾನ)

ಚಿನ್ನಾ ವಿಶ್ವನಾಥ್ ಭೂಸರಡ್ಡಿ ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿಯವರು. ತಂದೆ ವಿಶ್ವನಾಥ್ ಭೂಸರಡ್ಡಿ, ತಾಯಿ ರಾಜೇಶ್ವರಿ. ಜಮಖಂಡಿಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು, ತುಂಗಳ ಪಿ.ಯು. ಕಾಲೇಜಿನಲ್ಲಿ ಪಿಯುಸಿಯನ್ನೂ, ಬಿಎಂಸಿ ಕಾಲೇಜ್​​ನಲ್ಲಿ ಇಂಜಿನಿಯರಿಂಗ್, ಬೆಂಗಳೂರಿನಲ್ಲಿ ಪದವಿ ಶಿಕ್ಷಣವನ್ನು (2019) ಪೂರ್ಣಗೊಳಿಸಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ 98.24 % ಅಂಕ ಪಡೆದು ರಾಜ್ಯಕ್ಕೆ 8ನೇ ಸ್ಥಾನ ಪಡೆದಿದ್ದು, ಪಿಯುಸಿಯಲ್ಲಿ 95% ಅಂಕ ಗಳಿಸಿದ್ದಾರೆ.

2ನೇ ಪ್ರಯತ್ನದಲ್ಲಿ ಯಶಸ್ಸು : ಚಿಕ್ಕವಯಸ್ಸಿನಿಂದಲೇ ಯುಪಿಎಸ್ಸಿ ಪರೀಕ್ಷೆ ಬರೆಯಬೇಕು ಎಂಬ ಕನಸನ್ನು ಹೊತ್ತ ಇವರು ಇಂಜಿನಿಯರಿಂಗ್ ಪೂರ್ಣಗೂಳಿಸುತ್ತಿದ್ದಂತೆ ಪರೀಕ್ಷೆಗೆ ತಯಾರಿ ನಡೆಸಲು ಪ್ರಾರಂಭಿಸಿದ್ದಾರೆ. 2020ರಲ್ಲಿ ಮೊದಲ ಬಾರಿಗೆ ಪರೀಕ್ಷೆ ತೆಗೆದುಕೊಂಡಿದ್ದ ಇವರು, ಪ್ರಿಲಿಮ್ಸ್‌ನಲ್ಲಿ ತೇರ್ಗಡೆ ಹೊಂದುವಲ್ಲಿ ಸಲರಾಗಲಿಲ್ಲ. ನಂತರ 2021ರಲ್ಲಿ ಭಾರತೀಯ ಅರಣ್ಯ ಸೇವಾ ಪರೀಕ್ಷೆ ಎದುರಿಸಿ, AIR14 ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಇಂದು ಐಫ್​ಎಸ್​​ ಆಫೀಸರ್ ಆಗಿ ನಿಂತಿದ್ದಾರೆ.

china vishwanath busradi india rank 14 in indian forest service examination 2021

ಚಿನ್ನಾ ವಿಶ್ವನಾಥ್ ಮಾತನಾಡಿ, 2019ರಿಂದ ಪರೀಕ್ಷಾ ತಯಾರಿ ನಡೆಸಲು ಪ್ರಾರಂಭಿಸಿದೆ. ಬೆಂಗಳೂರಿನಲ್ಲಿರುವ ಕೋಚಿಂಗ್ ಸೆಂಟರ್‌ನಲ್ಲಿ 7ರಿಂದ 8 ತಿಂಗಳು ಕೋಚಿಂಗ್ ಪಡೆದುಕೊಂಡೆ. ಅಲ್ಲಿ ಹೇಳಿಕೊಟ್ಟ ವಿಷಯಗಳನ್ನು ಪುನರ್ ಮನನ ಮಾಡುತ್ತಿದ್ದೆ. ನಂತರ ಸ್ವಯಂ ತಯಾರಿ ನಡೆಸಲು ಪ್ರಾರಂಭಿಸಿದೆ. ಪ್ರತಿದಿನ 8 ಗಂಟೆ ಓದುತ್ತಿದ್ದೆ. ಆದಷ್ಟು ಶಾರ್ಟ್ ನೋಟ್ಸ್‌ಗಳನ್ನು ಮಾಡಿಟ್ಟುಕೊಂಡು, ಹಳೇ ಪ್ರಶ್ನೆ ಪತ್ರಿಕೆ ಬಿಡಿಸುವುದು, ನಿರ್ದಿಷ್ಟ ವಿಷಯಾಧಾರಿತ ಪುಸ್ತಕ ಓದುವುದು, ಪ್ರಚಲಿತ ವಿದ್ಯಮಾನಗಳ ಬಗ್ಗೆ ಪತ್ರಿಕೆ ಹಾಗೂ ಇಂಟರ್ನೆಟ್ ನೋಡಿ ನೋಟ್ಸ್ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾರೆ.

ಧೈರ್ಯಂ ಸರ್ವತ್ರ ಸಾಧನಂ : ಜಿಯೋಲಾಜಿ ಮತ್ತು ಫಾರೆಸ್ಟ್ರಿ ವಿಷಯಗಳನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ನಾಗರಿಕ ಸೇವೆ ಮತ್ತು ಅರಣ್ಯ ಸೇವೆ ಎರಡಕ್ಕೂ ಪ್ರಿಲಿಮ್ಸ್ ಪ್ರಶ್ನೆಪತ್ರಿಕೆ ಒಂದೇ ಆಗಿದ್ದು, ನಾಗರಿಕ ಸೇವಾ ಪರೀಕ್ಷೆಗಿಂತ ಅರಣ್ಯ ಸೇವಾ ಪರೀಕ್ಷೆಯಲ್ಲಿನ ಕಟ್ ಆಫ್​​ ಹೆಚ್ಚಾಗಿರುತ್ತದೆ. ಸಂದರ್ಶನದಲ್ಲಿ ಅರಣ್ಯ ಸೇವಾ ಪರೀಕ್ಷೆ ಬರೆದವರಿಗೆ ಅರಣ್ಯ ಸೇವೆ, ಪರಿಸರದ ಕುರಿತು ಪ್ರಶ್ನೆ ಕೇಳುತ್ತಾರೆ. ಯಾವುದೇ ಪ್ರಶ್ನೆ ಕೇಳಿದರು ಧೈರ್ಯವಾಗಿ ಉತ್ತರಿಸಬೇಕು. ನಮಗೆ ತಿಳಿದಿಲ್ಲ ಎಂದರೆ ಸುಳ್ಳು ಹೇಳಲು ಹೋಗಬಾರದು ಎನ್ನುತ್ತಾರೆ ಚಿನ್ನಾ ವಿಶ್ವನಾಥ್.

ಅಭ್ಯರ್ಥಿಗಳಿಗೆ ಸಲಹೆ:

*ಯಾವ ಕಾರಣಕ್ಕಾಗಿ ಪರೀಕ್ಷೆ ಬರೆಯುತ್ತಿದ್ದೇವೆ ಎನ್ನುವ ಸ್ಪಷ್ಟತೆ ಇರಬೇಕು.

* ಸಮಯ ಪ್ರಜ್ಞೆ ತುಂಬಾ ಮುಖ್ಯ

* ಮಾರ್ಗದರ್ಶನ ಮತ್ತು ಪಾಲಕರ ಬೆಂಬಲ ಅಗತ್ಯ.

* ತಾಳ್ಮೆ, ಆರೋಗ್ಯ ಕಾಪಾಡಿಕೊಳ್ಳಬೇಕು.

* ಶಾರ್ಟ್ ನೋಟ್ಸ್ ಮಾಡಿಕೊಂಡು, ಹಳೇ ಪ್ರಶ್ನೆ ಪತ್ರಿಕೆ ಬಿಡಿಸಬೇಕು.

* ಉತ್ತರ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

* ನಾಲ್ಕೈದು ಪುಸ್ತಕದ ಬದಲು ಒಂದೇ ಪುಸ್ತಕವನ್ನು, ಓದಿ ಮಾಡಿಟ್ಟುಕೊಂಡಿರುವ ನೋಟ್ಸ್‌ನ್ನು ಓದುತ್ತಿರಬೇಕು.

* ಟೆಸ್ಟ್ ಸಿರೀಸ್ ತೆಗೆದುಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net