

ವಾಷಿಂಗ್ಟನ್: ಅಣ್ವಸ್ತ್ರ ಸಾಮರ್ಥ್ಯದ ಹೈಪರ್ಸಾನಿಕ್ ಕ್ಷಿಪಣಿಯ ಪರೀಕ್ಷೆಯನ್ನು ಚೀನಾ ಅತ್ಯಂತ ರಹಸ್ಯವಾಗಿ ಆಗಸ್ಟ್ ತಿಂಗಳಲ್ಲಿ ನಡೆಸಿತ್ತು ಎಂಬ ಅಂಶ ಅಮೆರಿಕದ ರಕ್ಷಣಾ ವಲಯವನ್ನು ಅಚ್ಚರಿಗೆ ತಳ್ಳಿದೆ ಎಂದು ಫೈನಾನ್ಶಿಯಲ್ ಟೈಮ್್ಸ ವರದಿ ಮಾಡಿದೆ.
ಈ ಪರೀಕ್ಷೆಯಲ್ಲಿ ಕ್ಷಿಪಣಿ ತನ್ನ ಗುರಿಯನ್ನು 24 ಮೈಲಿ ಅಂತರದಲ್ಲಿ ತಪ್ಪಿಸಿಕೊಂಡಿತ್ತು. ಇದು ಗುರಿ ತಲುಪುವ ಮುನ್ನ ಗಗನ ನೌಕೆಯಂತೆ ಇಡೀ ಭೂಮಿಗೆ ಒಂದು ಸುತ್ತು ಹೊಡೆದಿತ್ತು. ಬಾಹ್ಯಾಕಾಶದ ಕೆಳ ಹಂತದ ಕಕ್ಷೆಯಲ್ಲಿ ಸಾಗಿತ್ತು ಎಂಬ ಅಂಶವನ್ನು ಈ ಪರೀಕ್ಷೆ ಅರಿವಿದ್ದ ಐವರು ತಿಳಿಸಿದ್ದಾರೆ. ಇದರೊಂದಿಗೆ ಹೈಪರ್ಸಾನಿಕ್ ಶಸ್ತ್ರಾಸ್ತ್ರ ತಯಾರಿಯಲ್ಲಿ ಅಮೆರಿಕಕ್ಕಿಂತ ಚೀನಾ ಸಾಕಷ್ಟು ಮುಂದೆ ಇದೆ ಎಂಬುದನ್ನು ಈ ಪರೀಕ್ಷೆ ತೋರಿಸಿದೆ. ಇದೇ ಕಾರಣಕ್ಕೆ ಅಮೆರಿಕ ರಕ್ಷಣಾ ವಲಯ ಅಚ್ಚರಿಗೀಡಾಗಿರುವುದು ಎಂದು ವರದಿ ಹೇಳಿದೆ.
ಹೈಪರ್ಸಾನಿಕ್ ಕ್ಷಿಪಣಿಯು ಶಬ್ದಕ್ಕಿಂತ ಐದು ಪಟ್ಟು ವೇಗದಲ್ಲಿ ಸಂಚರಿಸುತ್ತದೆ. ಅವುಗಳನ್ನು ಹೊಡೆದುರುಳಿಸುವುದು ಕಷ್ಟ. ಖಂಡಾಂತರ ಕ್ಷಿಪಣಿಗಿಂತ ಕಡಿಮೆ ವೇಗ ಹೊಂದದಿದ್ದರೂ ಅವುಗಳಂತೆ ಪ್ಯಾರಾಬೊಲಿಕ್ ಪಥವನ್ನು ಅನುಸರಿಸದ ಕಾರಣ ಅವುಗಳನ್ನು ಕುಶಲತೆಯಿಂದ ನಿರ್ವಹಿಸಲಾಗದು. ಅಮೆರಿಕ, ರಷ್ಯಾ ಮತ್ತು ಚೀನಾ ಸೇರಿ ಹಲವು ರಾಷ್ಟ್ರಗಳು ಇಂತಹ ಸೂಪರ್ಸಾನಿಕ್ ಶಸ್ತ್ರಾಸ್ತ್ರಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿವೆ.