

ನವದೆಹಲಿ: ಅಮೆರಿಕ, ಭಾರತದ ಜತೆಗೆ ಉದ್ವಿಗ್ನ ಸಂಬಂಧ ಹೊಂದಿದ್ದಾಗ್ಯೂ "ಕ್ಯಾರಿಯರ್ ಕಿಲ್ಲರ್" ಎಂದು ಗುರುತಿಸಲ್ಪಟ್ಟಿರುವ ಖಂಡಾಂತರ ಕ್ಷಿಪಣಿಯ ಪರೀಕ್ಷೆಯನ್ನು ಚೀನಾ ನಡೆಸಿದೆ. ಪೀಪಲ್ಸ್ ಲಿಬರೇಷನ್ ಆರ್ಮಿ ರಾಕೆಟ್ ಫೋರ್ಸ್ (ಪಿಎಲ್ಎಆರ್ಎಫ್) ಇದನ್ನು ಖಚಿತಪಡಿಸಿದ್ದು, ಎರಡು ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ನಡೆಸಿರುವುದಾಗಿ ತಿಳಿಸಿದೆ. ಒಂದು ಶಾರ್ಟ್ ರೇಂಜ್ ಮತ್ತೊಂದು ಇಂಟರ್ಮೀಡಿಯೇಟ್ ರೇಂಜ್ನ ಕ್ಷಿಪಣಿಗಳವು ಎಂದು ಅದು ಸ್ಪಷ್ಟಪಡಿಸಿದೆ.
ಪರೀಕ್ಷೆ ನಡೆಸಿದ ಬ್ರಿಗೇಡ್ ಕಮಾಂಡರ್ ಲಿಯೂ ಯಾಂಗ್ ಈ ಬಗ್ಗೆ 81.cn ಎಂಬ ಸುದ್ದಿ ತಾಣಕ್ಕೆ ನೀಡಿರುವ ಹೇಳಿಕೆಯಲ್ಲಿ ಈ ವಿಷಯ ಖಾತ್ರಿಪಡಿಸಿದ್ದಾರೆ. 2,500 ಮೈಲ್ ರೇಂಜ್ನ ಏರ್ಕ್ರಾಫ್ಟ್ ಕ್ಯಾರಿಯರ್ ಕಿಲ್ಲರ್ ಇದಾಗಿದ್ದು, ಅಮೆರಿಕದ ನಿಮಿಟ್ಝ್ ಮತ್ತು ಅಮೆರಿಕದ ಇತರೆ ನೌಕೆಗಳನ್ನು ಟಾರ್ಗೆಟ್ ಮಾಡಲು ಇದನ್ನು ಬಳಸುವ ಚಿಂತನೆಯಲ್ಲಿದೆ ಚೀನಾ ಎಂದು ಆ ಸುದ್ದಿ ತಾಣ ವರದಿ ಮಾಡಿದೆ.
ಅಮೆರಿಕ ವಾಯುಪಡೆ ಗ್ಲೋಬಲ್ ಸ್ಟ್ರೈಕ್ ಕಮಾಂಡ್ ಇತ್ತೀಚೆಗಷ್ಟೇ ಎಲ್ಜಿಎಂ-30 ಮಿನಿಟ್ಮ್ಯಾನ್ lll ICB ಕ್ಷಿಪಣಿಯನ್ನು ಪರೀಕ್ಷೆ ಮಾಡಿತ್ತು. ಇದು 4,200 ಮೈಲಿ ರೇಂಜ್ದಾಗಿದ್ದು, ಆಗಸ್ಟ್ 4 ರಂದು ಮಧ್ಯರಾತ್ರಿ ಪರೀಕ್ಷೆ ನಡೆದಿತ್ತು. ಅಮೆರಿಕ, ಚೀನಾಗಳ ಕ್ಷಿಪಣಿ ಪರೀಕ್ಷೆ ಯುದ್ಧೋನ್ಮಾದವನ್ನು ಇನ್ನಷ್ಟು ಉದ್ದೀಪಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣ ಮಾಡಿದೆ. (ಏಜೆನ್ಸೀಸ್)