

ನವದೆಹಲಿ: ಚೀನಾ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಂತೆ ನಾಟಕವಾಡಿ, ನಾಲ್ಕಾರು ಹೆಜ್ಜೆ ಹಿಂದಕ್ಕೆ ಹೋದಂತೆ ಮಾಡಬಹುದು. ಆದರೆ, ಮರುಕ್ಷಣದಲ್ಲೇ ಅದು ಸುನಾಮಿಯಂತೆ ಎರಗುವುದು ಖಂಡಿತ. ಹಾಗಾಗಿ ಭಾರತೀಯ ಸೇನಾಪಡೆ ಸದಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಭಾರತೀಯ ಬೇಹುಗಾರಿಕಾ ಪಡೆ ರಾದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಜಯದೇವ ರಾನಡೆ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ. ಚೀನಾ ನಿಖರವಾದ ಒಂದು ಗುರಿ ಇಟ್ಟುಕೊಂಡು ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್ಎ) ಯೋಧರನ್ನು ಭಾರಿ ಸಂಖ್ಯೆಯಲ್ಲಿ ನಿಯೋಜನೆ ಮಾಡುತ್ತದೆ. ಬಳಿಕ ಯಾವುದೋ ಒತ್ತಡಕ್ಕೆ ಒಳಗಾಗಿ ಹಿಂದೆಸರಿದಂತೆ ನಾಟಕವಾಡುತ್ತದೆ. ಬಳಿಕ ಪ್ರಬಲವಾದ ದಾಳಿ ಕೈಗೊಂಡು ತನ್ನ ಗುರಿಯನ್ನು ಸಾಧಿಸುತ್ತದೆ ಎಂದು ಹೇಳಿದರು.
ಸದ್ಯಕ್ಕೆ ಚೀನಾ ನಮ್ಮನ್ನು ಪರೀಕ್ಷಿಸುತ್ತಿದೆ. ನಮ್ಮ ತಾಳ್ಮೆ, ಸಹಿಷ್ಣುತೆಗಳೆಲ್ಲವನ್ನೂ ಅದು ಒರೆಗಚ್ಚಿ ನೋಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಪರಿಸ್ಥಿತಿಯನ್ನು ನಿಭಾಯಿಸುವ ಭಾರತದ ರಾಜಕೀಯ ಸಾಮರ್ಥ್ಯವನ್ನೂ ಅದು ಒರೆಗಚ್ಚುತ್ತಿದೆ. ಈ ರೀತಿಯ ಕಾರ್ಯತಂತ್ರವನ್ನು ಅದು ಎಷ್ಟು ಕಾಲ ಮುಂದುವರಿಸುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಒಟ್ಟಾರೆ, ನಾವು ದಣಿಯುವಂತೆ ಮಾಡಿ, ರಕ್ಷಣೆ ದುರ್ಬಲವಾಗಿದೆ ಎಂಬುದು ಖಚಿತವಾದಾಗ ಸುನಾಮಿಯಂತೆ ಎರಗಲಿದೆ ಎಂದು ತಿಳಿಸಿದರು.
ಚೀನಾದಲ್ಲಿ ಆಂತರಿಕವಾಗಿ ಹಲವು ಸಮಸ್ಯೆಗಳು ಉದ್ಭವಿಸಿವೆ. ಜತೆಗೆ ಜೀವಂತವಾಗಿರುವವರೆಗೆ ಚೀನಾದ ಅಧ್ಯಕ್ಷರಾಗಿ ಮುಂದುವರಿಯುವ ಅಧಿಕಾರ ಹೊಂದಿರುವ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಜನಪ್ರಿಯತೆ ದಿನೇದಿನೆ ಕುಸಿಯುತ್ತಿದೆ. ಈ ಎಲ್ಲ ಪರಿಸ್ಥಿತಿಯನ್ನು ನಿಭಾಯಿಸುವ ಜತೆಗೆ ಕ್ಸಿ ಜಿನ್ಪಿಂಗ್ ಅವರ ಜನಪ್ರಿಯತೆ ಹೆಚ್ಚಾಗುವಂತೆ ಮಾಡುವ ನಿಟ್ಟಿನಲ್ಲಿ ಭಾರತದೊಂದಿಗೆ ಅದು ಕಾಲುಕೆರೆದು ಜಗಳಕ್ಕೆ ನಿಂತಿದೆ ಎಂದು ಹೇಳಿದರು.
ಒಟ್ಟಾರೆ, ದೇಶದ ಜನತೆಯ ಗಮನವನ್ನು ಬೇರೆ ದಿಕ್ಕಿನಡೆಗೆ ಕೊಂಡೊಯ್ದು, ತಮ್ಮ ಸ್ಥಾನವನ್ನು ಅಬಾಧಿತವಾಗಿ ಉಳಿಸಿಕೊಳ್ಳುವುದು ಕ್ಸಿ ಜಿನ್ಪಿಂಗ್ ಹುನ್ನಾರವಾಗಿದೆ ಎಂದು ತಿಳಿಸಿದರು.