

ನವದೆಹಲಿ: ಪೂರ್ವ ಲಡಾಖ್ನ ಪ್ಯಾಂಗೊಂಗ್ ತ್ಸೊ ಸರೋವರ ಮತ್ತು ಗೋಗ್ರಾದ 17ಎ ಗಸ್ತು ಪಾಯಿಂಟ್ನಿಂದ ಹಿಂದೆ ಸರಿಯಲು ಚೀನಾ ಸೇನೆ ಹಿಂದೇಟು ಹಾಕುತ್ತಿದೆ. ಮುಂದಿನ ವಾರ ನಡೆಯುವ ಉಭಯ ಸೇನೆಗಳ ಕಮಾಂಡರ್ ಹಂತದ ಮಾತುಕತೆ ವೇಳೆ ಈ ಕುರಿತು ರ್ಚಚಿಸಲಾಗುವುದು ಎಂದು ಭಾರತ ಹೇಳಿದೆ.
ಪ್ಯಾಂಗೊಂಗ್ ತ್ಸೊ ಸರೋವರ ಮತ್ತು ಗೋಗ್ರಾದಲ್ಲಿ ಯಥಾಸ್ಥಿತಿ ಮತ್ತು ಹಕ್ಕು ಪ್ರತಿಪಾದನೆಯಲ್ಲಿ ಕೆಲ ಭಿನ್ನಾಭಿಪ್ರಾಯ ಉಂಟಾಗಿದೆ. ಇದನ್ನು ಮುಂದಿನ ಮಾತುಕತೆಯಲ್ಲಿ ಬಗೆಹರಿಸಿಕೊಳ್ಳುವುದಾಗಿ ಭಾರತೀಯ ಸೇನೆ ಹೇಳಿದೆ ಎಂದು ಮೂಲಗಳು ತಿಳಿಸಿವೆ.
ಪ್ಯಾಂಗೊಂಗ್ ಸರೋವರದ ಫಿಂಗರ್ ಪಾಯಿಂಟ್ 4ರವರೆಗೆ ಚೀನಾ ಸೇನೆ ಅತಿಕ್ರಮಿಸಿಕೊಂಡಿದೆ. ಇಲ್ಲಿಂದ ಸೇನೆಯನ್ನು ಹಿಂಪಡೆದಿಲ್ಲ. ಈ ಪಾಯಿಂಟ್ನಿಂದ 8 ಕಿ.ಮೀ. ದೂರದಲ್ಲಿರುವ ಫಿಂಗರ್ 8ರವರೆಗಿನ ಗಡಿ ತನ್ನದೆಂಬುದು ಭಾರತದ ವಾದ. ಗೋಗ್ರಾದ 17ಎ ಗಸ್ತು ಪಾಯಿಂಟ್ನಲ್ಲಿ ಚೀನಾ ಸೇನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಗಲ್ವಾನ್ ಕಣಿವೆಯ 14ನೇ ಗಸ್ತು ಪಾಯಿಂಟ್, ಹಾಟ್ಸ್ಪಿ›ಂಗ್ಸ್ನ 15ನೇ ಗಡಿ ಪಾಯಿಂಟ್ನಿಂದ ಚೀನಾ ಸೇನೆಯನ್ನು ಹಿಂಪಡೆದಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ನಡೆದ ಮಾತುಕತೆ ವೇಳೆ ಬಿಕ್ಕಟ್ಟಿಗೆ ಕಾರಣವಾಗಿರುವ ಗಡಿಯಿಂದ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಉಭಯ ಸೇನೆಗಳು ಒಪ್ಪಿದ್ದವು. ಆದರೆ, ಚೀನಾ ಈ ಮಾತುಕತೆಯನ್ನು ಗೌರವಿಸುತ್ತಿಲ್ಲ ಎಂದು ಭಾರತ ಕೆಲವು ದಿನಗಳ ಹಿಂದೆ ದೂರಿದೆ. ಚೀನಾ ಸೇನೆ ಹಿಂದೆ ಸರಿಯುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಲು ಭಾರತ ಗಡಿಯಲ್ಲಿ ನಿರಂತರ 10 ದಿನ ನಿಗಾ ಇರಿಸುವುದಾಗಿಯೂ ಹೇಳಿದೆ.
ಅಮೆರಿಕ ವಿರುದ್ಧ ಚೀನಾ ಪ್ರತೀಕಾರ
ಹ್ಯೂಸ್ಟನ್ನ ಟೆಕ್ಸಾಸ್ ನಗರದಲ್ಲಿರುವ ಚೀನಾ ಕಾನ್ಸುಲ್ ಜನರಲ್ ಕಚೇರಿ ತೆರವುಗೊಳಿಸುವಂತೆ ಸೂಚಿಸಿರುವ ಅಮೆರಿಕದ ವಿರುದ್ಧ ಪ್ರತೀಕಾರ ಕ್ರಮವನ್ನು ಚೀನಾ ಕೈಗೊಂಡಿದೆ. ಚೆಂಗ್ಡುವಿನಲ್ಲಿರುವ ಅಮೆರಿಕದ ಕಾನ್ಸುಲ್ ಜನರಲ್ ಕಚೇರಿಯನ್ನು ತೆರವು ಮಾಡುವಂತೆ ಆದೇಶಿಸಿದೆ.
ಇತ್ತೀಚಿನ ದಿನಗಳಲ್ಲಿ ಅಮೆರಿಕ ಜತೆಗಿನ ಸಂಬಂಧ ನಾವು ಬಯಸಿದಂತೆ ಇಲ್ಲ. ಚೀನಾ ವಿರುದ್ದ ಅಮೆರಿಕ ಆಕ್ರಮಣಕಾರಿ ಧೋರಣೆಯನ್ನೂ ಅನುಸರಿಸುತ್ತಿದೆ ಎಂದು ಸಚಿವಾಲಯ ಹೇಳಿದೆ. ಅಮೆರಿಕದ ಬೌದ್ಧಿಕ ಆಸ್ತಿ ಮತ್ತು ಅಮೆರಿಕನ್ನರ ಖಾಸಗಿ ಮಾಹಿತಿ ಸಂರಕ್ಷಿಸುವ ನಿಟ್ಟಿನಲ್ಲಿ ಚೀನಾದ ಕಾನ್ಸುಲ್ ಕಚೇರಿಯನ್ನು 3 ದಿನಗಳಲ್ಲಿ ತೆರವು ಮಾಡುವಂತೆ ಸೂಚಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದರು.