ಚಂದ್ರನ ನೀರಿನ ಮೇಲೆ ಚೀನಾದ ಕಣ್ಣು!

lunar water
lunar water
Published on

ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವರು ದೀರ್ಘಕಾಲ ನೆಲೆಸಬೇಕಾದರೆ ನೀರು ಅತ್ಯಂತ ಅಮೂಲ್ಯ ಸಂಪನ್ಮೂಲ. ಈ ಸಾಧ್ಯತೆಯನ್ನೇ ಗಮನದಲ್ಲಿಟ್ಟುಕೊಂಡು ಚೀನಾ ಚಂದ್ರನ ದಕ್ಷಿಣ ಧ್ರುವದತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಚೀನಾದ ಚಾಂಗ್‌ಇ-7 ಸೋಮವಾರ ಉಡಾವಣೆಯಾಗಬೇಕಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಮುಂದಕ್ಕೆ ಹೋಗಿದೆ. ಆದರೆ ಯೋಜನೆಯ ಪ್ರಮುಖ ಗುರಿ ಕುತೂಹಲಕಾರಿ. ಚಂದ್ರನ ನೆರಳಿನಲ್ಲಿರುವ ಕುಳಿಗಳಲ್ಲಿ ನೀರಿನ ಮಂಜುಗಡ್ಡೆಯನ್ನು ಪತ್ತೆ ಹಚ್ಚುವುದು, ಮಂಜುಗಡ್ಡೆ ದೊರೆತರೆ ಅದನ್ನು ಭವಿಷ್ಯದಲ್ಲಿ ಬಿಸಿ ಮಾಡಿ ನೀರನ್ನಾಗಿ, ನೀರನ್ನು ವಿಭಜಿಸಿ ಆಮ್ಲಜನಕ ಮತ್ತು ಹೈಡ್ರೋಜನ್ ಆಗಿ ಪರಿವರ್ತಿಸುವುದು ಅದರ ಉದ್ದೇಶ. ಅಂದರೆ ಚಂದ್ರನ ನೀರು ಕೇವಲ ದಾಹ ನೀಗಿಸುವ ಸಂಪನ್ಮೂಲವಲ್ಲ; ಭವಿಷ್ಯದ ಚಂದ್ರ ನೆಲೆಗಳ ಜೀವನಾಡಿ ಮತ್ತು ರಾಕೆಟ್‌ಗಳ ಇಂಧನ ಮೂಲವೂ ಆಗಬಹುದು!

ಭೂಮಿಯ ಮೇಲೆ ಸರೋವರ, ನದಿ ಅಥವಾ ಅಂತರ್ಜಲದ ರೂಪದಲ್ಲಿರುವ ನೀರು ಚಂದ್ರನ ಮೇಲೂ ಅದೇ ರೀತಿ ಇರುವುದಿಲ್ಲ. ದಕ್ಷಿಣ ಮತ್ತು ಉತ್ತರ ಧ್ರುವಗಳಲ್ಲಿರುವ ಕೆಲವು ಆಳವಾದ ಕುಳಿಗಳು ಸೂರ್ಯನ ಬೆಳಕನ್ನು ಕಾಣುವುದೇ ಇಲ್ಲ. ಇವುಗಳನ್ನು ಶಾಶ್ವತ ನೆರಳಿನ ಪ್ರದೇಶಗಳು ಎಂದು ಕರೆಯಲಾಗುತ್ತದೆ. ಇಂತಹ ಪ್ರದೇಶಗಳ ತಾಪಮಾನ ಅತ್ಯಂತ ಕಡಿಮೆ. ಕೋಟ್ಯಂತರ ವರ್ಷಗಳಿಂದ ಸೂರ್ಯನ ಬೆಳಕಿಗೆ ಬಾರದ ಕಾರಣ ಧೂಮಕೇತುಗಳು, ಉಲ್ಕೆಗಳಿಂದ ಬಂದ ನೀರಿನ ಅಣುಗಳು ಅಲ್ಲಿ ಮಂಜುಗಡ್ಡೆಯಾಗಿ ಉಳಿದಿರಬಹುದೆಂಬುದು ವಿಜ್ಞಾನಿಗಳ ನಂಬಿಕೆ. ಶ್ಯಾಕಲ್ಟನ್ ಕುಳಿ ಈ ಕಾರಣಕ್ಕಾಗಿಯೇ ವಿಶೇಷ ಗಮನ ಸೆಳೆದಿದೆ. ಆದರೆ ಚಂದ್ರನಲ್ಲಿ ನೀರು ಇದೆಯೇ ಎಂಬ ಪ್ರಶ್ನೆಗೆ ನಿಖರ ಉತ್ತರವೇನೂ ಇನ್ನೂ ಸಿಕ್ಕಿಲ್ಲ. ಇದ್ದರೆ ಎಷ್ಟು ನೀರು ಇದೆ? ಅದು ಮೇಲ್ಮೆಯಲ್ಲಿದೆಯೇ ಅಥವಾ ಮಣ್ಣಿನೊಳಗೆ ಹುದುಗಿದೆಯೇ? ಶುದ್ಧ ಮಂಜುಗಡ್ಡೆಯೇ ಅಥವಾ ಚಂದ್ರನ ಮಣ್ಣಿನ ಕಣಗಳ ನಡುವೆ ಬೆರೆತಿದೆಯೇ? ಇವುಗಳಿಗೆ ಸ್ಪಷ್ಟ ಉತ್ತರವನ್ನು ವಿಜ್ಞಾನಿಗಳು ಇನ್ನೂ ಕಂಡುಕೊಳ್ಳಬೇಕಾಗಿದೆ.
ಚಾಂಗ್‌ಇ-7 ಏನು ಮಾಡಲಿದೆ?: ಚೀನಾದ ಈ ಯೋಜನೆಯಲ್ಲಿ ಸುತ್ತುವ ಆರ್ಬಿಟರ್, ಇಳಿಯುವ ಲ್ಯಾಂಡರ್, ಸಂಚಾರಿ ವಾಹನ ರೋವರ್ ಮತ್ತು ಸಣ್ಣ ಹಾರುವ ಶೋಧಕ ಮಿನಿಹಾಪ್ಪರ್ ಸೇರಿದಂತೆ ಹಲವು ಘಟಕಗಳಿವೆ. ಶಾಶ್ವತ ನೆರಳಿನ ಪ್ರದೇಶಗಳಿಗೆ ತೆರಳಿ ಅಲ್ಲಿನ ಮಣ್ಣು ಮತ್ತು ಬಾಷ್ಪಯುತ ಪದಾರ್ಥಗಳನ್ನು ಪರೀಕ್ಷಿಸುವ ಸಾಮರ್ಥ್ಯವನ್ನು ಮಿನಿಹಾಪ್ಪರ್ ಹೊಂದಿದೆ. ಅದರಲ್ಲಿರುವ ನೀರಿನ ಅಣು ವಿಶ್ಲೇಷಣಾ ಯಂತ್ರವು ಚಂದ್ರನ ಮಣ್ಣಿನಲ್ಲಿರುವ ನೀರಿನ ಪ್ರಮಾಣ ಮತ್ತು ಸ್ವರೂಪವನ್ನು ತಿಳಿಯಲು ನೆರವಾಗಲಿದೆ. ನೀರು ಎಲ್ಲಿಂದ ಬಂತು ಎಂಬುದನ್ನು ಅರಿಯಲು ಅದರಲ್ಲಿರುವ ಹೈಡ್ರೋಜನ್‌ನ ಅಂಶಗಳನ್ನೂ ಅಧ್ಯಯನ ಮಾಡುವ ಯೋಚನೆಯಿದೆ. ಅಂದರೆ ಮೊದಲು ನೀರು ನಿಜವಾಗಿಯೂ ಎಲ್ಲಿದೆ ಎಂಬ ಪ್ರಶ್ನೆಗೆ ಚೀನಾ ಈಗ ಉತ್ತರ ಹುಡುಕುತ್ತಿದೆ.
ಮಂಜುಗಡ್ಡೆ ಕರಗಿಸುವುದು: ಒಂದು ವೇಳೆ ಸಾಕಷ್ಟು ಪ್ರಮಾಣದಲ್ಲಿ ಮಂಜುಗಡ್ಡೆ ಪತ್ತೆಯಾದರೆ ಮುಂದಿನ ಸವಾಲು ಅದನ್ನು ಹೊರತೆಗೆಯುವುದು. ಭೂಮಿಯಲ್ಲಿ ಮಂಜುಗಡ್ಡೆಗೆ ಬಿಸಿ ಕೊಟ್ಟರೆ ಅದು ನೀಾಗುತ್ತದೆ. ಆದರೆ ಚಂದ್ರನಲ್ಲಿ ಇದು ಅಷ್ಟು ಸರಳವಲ್ಲ. ಶಾಶ್ವತ ನೆರಳಿನ ಪ್ರದೇಶಗಳಲ್ಲಿ ಸೂರ್ಯನ ಬೆಳಕು ಇಲ್ಲ. ತಾಪಮಾನ ಅತ್ಯಂತ ಕಡಿಮೆ. ಚಂದ್ರನ ಮಣ್ಣಿನ ಉಷ್ಣವೂ ಭೂಮಿಯ ಮಣ್ಣಿನಂತಿಲ್ಲ. ಹೀಗಾಗಿ ಚಂದ್ರನ ಮಣ್ಣಿನೊಳಗಿನ ಮಂಜುಗಡ್ಡೆಗೆ ಉಷ್ಣವನ್ನು ತಲುಪಿಸಿ ಅದನ್ನು ನೇರವಾಗಿ ಆವಿಯಾಗಿ ಹೊರತೆಗೆಯುವ ವಿಧಾನಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ. 2026ರಲ್ಲಿ ಪ್ರಕಟವಾದ ಸಂಶೋಧನೆಯೊಂದರಲ್ಲಿ ವಿಶಿಷ್ಟ ವಿಧಾನ ಬಳಸಿ ಚಂದ್ರನ ಮಣ್ಣಿನಲ್ಲಿರುವ ಮಂಜುಗಡ್ಡೆಯಿಂದ ನೀರನ್ನು ಹೊರತೆಗೆಯುವ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಮತ್ತೊಂದು ಅಧ್ಯಯನ ಮೈಕ್ರೋವೇವ್ ಬಳಸಿ ಮಣ್ಣಿನೊಳಗಿನ ಮಂಜುಗಡ್ಡೆಯನ್ನು ಬಿಸಿ ಮಾಡುವ ಸಾಧ್ಯತೆಯನ್ನು ಪರಿಶೀಲಿಸಿದೆ. ಮೈಕ್ರೋವೇವ್ ವಿಧಾನವು ಮೇಲ್ಮೆಯನ್ನು ಮಾತ್ರ ಬಿಸಿ ಮಾಡುವ ಬದಲು ಮಣ್ಣಿನ ಒಳಭಾಗದವರೆಗೂ ಶಾಖ ತಲುಪಿಸಬಹುದೆಂಬುದು ವಿಜ್ಞಾನಿಗಳ ಲೆಕ್ಕಾಚಾರ.
ನೀರು ಸಿಕ್ಕರೆ ಮುಂದೇನು? ಮೊದಲನೆಯದಾಗಿ ನೀರನ್ನು ಕುಡಿಯಲು ಮತ್ತು ಚಂದ್ರನ ನೆಲೆಗಳಲ್ಲಿ ದಿನನಿತ್ಯದ ಅಗತ್ಯಗಳಿಗೆ ಬಳಸಬಹುದು. ಆದರೆ ನೀರನ್ನು ಅದಕ್ಕಿಂತಲೂ ದೊಡ್ಡ ಉದ್ದೇಶಕ್ಕೆ ಬಳಸುವ ಬಗ್ಗೆ ಯೋಚಿಸಲಾಗುತ್ತಿದೆ. ನೀರನ್ನು ವಿಭಜಿಸಿದರೆ ಹೈಡ್ರೋಜನ್ ಮತ್ತು ಆಮ್ಲಜನಕ ಸಿಗುತ್ತವೆ. ಇವೆರಡನ್ನೂ ರಾಕೆಟ್‌ಗಳಿಗೆ ಬಳಸಬಹುದು. ಅಂದರೆ ಚಂದ್ರನಲ್ಲೇ ಇಂಧನ ತಯಾರಿಸುವ ಸಾಧ್ಯತೆ. ಭೂಮಿಯಿಂದ ಚಂದ್ರನಿಗೆ ಪ್ರತಿಯೊಂದು ಲೀಟರ್ ನೀರು, ಪ್ರತಿ ಕಿಲೋಗ್ರಾಂ ಇಂಧನ ಅಥವಾ ಪ್ರತಿ ಕಿಲೋಗ್ರಾಂ ಜೀವಸಹಾಯಕ ಸಾಮಗ್ರಿಯನ್ನು ಸಾಗಿಸುವ ಅಗತ್ಯ ಕಡಿಮೆಯಾಗಬಹುದು. ಚಂದ್ರನಲ್ಲೇ ನೀರು, ಇಂಧನ ದೊರೆತರೆ ಅಲ್ಲಿಂದ ಮಂಗಳ ಸೇರಿದಂತೆ ಇನ್ನಷ್ಟು ದೂರದ ಬಾಹ್ಯಾಕಾಶ ಯಾತ್ರೆಗಳನ್ನು ಕೈಗೊಳ್ಳುವುದು ಸುಲಭ. ಚಂದ್ರನ ನೀರು ಎಂದರೆ ಭವಿಷ್ಯದ ಬಾಹ್ಯಾಕಾಶ ಪೆಟ್ರೋಲ್ ಬಂಕ್ ಇದ್ದಂತೆ!
ನೆಲೆ ನಿರ್ಮಿಸುವ ಯೋಜನೆ: ಚೀನಾ ದಕ್ಷಿಣ ಧ್ರುವ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಚಂದ್ರ ಸಂಶೋಧನಾ ಕೇಂದ್ರ ಸ್ಥಾಪಿಸುವ ಯೋಜನೆ ಮುಂದಿಟ್ಟಿದೆ. ಅದರ ಉದ್ದೇಶ ಕೇವಲ ಒಂದೆರಡು ದಿನಗಳ ವೈಜ್ಞಾನಿಕ ಪ್ರವಾಸವಲ್ಲ; ದೀರ್ಘಕಾಲದ ಸಂಶೋಧನೆ, ಸಂಪನ್ಮೂಲ ಬಳಕೆ ಮತ್ತು ಮೂಲಸೌಕರ್ಯ ನಿರ್ಮಾಣದತ್ತ ಸಾಗುವುದು. ಇಂತಹ ಕೇಂದ್ರ ನಿರ್ಮಾಣವಾದರೆ ನೀರು ಅತ್ಯಂತ ಪ್ರಮುಖ ಸಂಪನ್ಮೂಲವಾಗಲಿದೆ. ಭೂಮಿಯಿಂದ ನಿರಂತರವಾಗಿ ನೀರನ್ನು ಸಾಗಿಸುವುದು ದುಬಾರಿ. ಅದರ ಬದಲು ಚಂದ್ರನಲ್ಲೇ ನೀರಿನ ಮೂಲ ದೊರೆತರೆ ಯೋಜನೆಯ ಆರ್ಥಿಕತೆ ಮತ್ತು ಕಾರ್ಯಸಾಧ್ಯತೆ ಎರಡೂ ಬದಲಾಗಬಹುದು.
ದಕ್ಷಿಣ ಧ್ರುವವೇ ಏಕೆ?: ಚಂದ್ರನ ದಕ್ಷಿಣ ಧ್ರುವದಲ್ಲಿ ಎರಡು ಅನುಕೂಲಗಳಿವೆ. ಒಂದೆಡೆ ಶಾಶ್ವತ ನೆರಳಿನ ಪ್ರದೇಶಗಳಲ್ಲಿ ಮಂಜುಗಡ್ಡೆ ಉಳಿಯುವಷ್ಟು ಚಳಿ ಇದೆ. ಮತ್ತೊಂದೆಡೆ ಕೆಲವು ಸಮೀಪದ ಎತ್ತರದ ಪ್ರದೇಶಗಳಿಗೆ ಸೂರ್ಯನ ಬೆಳಕು ದೀರ್ಘಕಾಲ ದೊರೆಯುತ್ತದೆ. ಅಲ್ಲಿ ಸೌರಶಕ್ತಿಯನ್ನು ಉತ್ಪಾದಿಸಿ, ಅದನ್ನು ಬಳಸಿ ನೀರನ್ನು ಹೊರತೆಗೆಯುವ ವ್ಯವಸ್ಥೆ ನಿರ್ಮಿಸಲು ಸಾಧ್ಯವಿದೆ. ಅಂದರೆ ಒಂದೇ ಪ್ರದೇಶದಲ್ಲಿ ನೀರಿನ ಭಂಡಾರ ಮತ್ತು ಸೌರಶಕ್ತಿಯ ಮೂಲ ಎರಡನ್ನೂ ಸಾಧ್ಯವಾದಷ್ಟು ಹತ್ತಿರದಲ್ಲಿ ಪಡೆಯುವುದು ಗುರಿ. ಈಗಿನ ಸಂಶೋಧನೆಗಳೂ ನೀರಿನ ಮಂಜುಗಡ್ಡೆಯ ಸ್ಥಿರತೆ ಮತ್ತು ಸೌರಶಕ್ತಿ ಲಭ್ಯತೆಯನ್ನು ಒಟ್ಟಿಗೆ ಪರಿಗಣಿಸಿ ಸೂಕ್ತ ಪ್ರದೇಶಗಳನ್ನು ಗುರುತಿಸುವತ್ತ ಗಮನ ಹರಿಸಿವೆ.

ಅಂದುಕೊಂಡಷ್ಟು ಸುಲಭವಲ್ಲ

ಇದೆಲ್ಲ ಕೇಳಲು ಅದ್ಭುತವಾಗಿದ್ದರೂ, ಚಂದ್ರನಿಂದ ನೀರು ಪಡೆಯುವುದು ಭೂಮಿಯ ಮೇಲೆ ಗಣಿಗಾರಿಕೆ ಮಾಡಿದಷ್ಟು ಸುಲಭವಲ್ಲ. ಮೊದಲ ಸಮಸ್ಯೆ ಮಂಜುಗಡ್ಡೆಯ ಪ್ರಮಾಣ. ದೂರದಿಂದ ದೊರೆತ ಸೂಚನೆಗಳ ಆಧಾರದ ಮೇಲೆ ದೊಡ್ಡ ಪ್ರಮಾಣದ ನೀರು ಇರಬಹುದು ಎಂದು ಊಹಿಸಲಾಗುತ್ತಿದೆ. ಆದರೆ ನಿಖರವಾದ ಪ್ರಮಾಣ ಇನ್ನೂ ಖಚಿತವಾಗಿಲ್ಲ. ಎರಡನೆಯದು, ನೀರು ಎಲ್ಲಿದೆ ಎಂಬ ಪ್ರಶ್ನೆ. ಅದು ಮೇಲ್ಮೆಯಲ್ಲಿ ಸುಲಭವಾಗಿ ಸಿಗುತ್ತದೆಯೇ ಅಥವಾ ಹಲವು ಅಡಿ ಆಳದಲ್ಲಿ ಚಂದ್ರನ ಮಣ್ಣಿನೊಂದಿಗೆ ಬೆರೆತಿದೆಯೇ ಎಂಬುದು ಹೊರತೆಗೆಯುವ ವೆಚ್ಚವನ್ನು ನಿರ್ಧರಿಸುತ್ತದೆ. ಮೂರನೆಯದು, ಶಕ್ತಿ. ನೀರನ್ನು ಹೊರತೆಗೆಯಲು ಬಿಸಿ ಮಾಡಬೇಕು. ನಂತರ ಅದನ್ನು ಶುದ್ಧೀಕರಿಸಬೇಕು. ನೀರನ್ನು ಹೈಡ್ರೋಜನ್ ಮತ್ತು ಆಮ್ಲಜನಕವಾಗಿ ವಿಭಜಿಸಬೇಕಾದರೆ ಇನ್ನಷ್ಟು ಶಕ್ತಿ ಬೇಕಾಗುತ್ತದೆ. ನಾಲ್ಕನೆಯದು, ಧೂಳು. ಚಂದ್ರನ ಸೂಕ್ಷ್ಮ ಧೂಳು ಯಂತ್ರೋಪಕರಣಗಳಿಗೆ ದೊಡ್ಡ ಸಮಸ್ಯೆಯಾಗಬಹುದು. ಐದನೆಯದು, ಅತಿ ಕಡಿಮೆ ತಾಪಮಾನ ಮತ್ತು ಕಠಿಣ ಭೂಪ್ರದೇಶ. ಶಾಶ್ವತ ನೆರಳಿನ ಕುಳಿಗಳೊಳಗೆ ಯಂತ್ರಗಳನ್ನು ಇಳಿಸಿ ಕಾರ್ಯನಿರ್ವಹಿಸುವುದೇ ದೊಡ್ಡ ತಾಂತ್ರಿಕ ಸವಾಲು.
ಅಮೆರಿಕ-ಚೀನಾ ಪೈಪೋಟಿ: ಚೀನಾ ಮಾತ್ರವಲ್ಲ, ಅಮೆರಿಕವೂ ಚಂದ್ರನ ದಕ್ಷಿಣ ಧ್ರುವದ ಮೇಲೆ ಗಮನ ಹರಿಸಿದೆ. ನಾಸಾದ ಆರ್ಟೆಮಿಸ್ ಕಾರ್ಯಕ್ರಮ ಆ ದಿಸೆಯಲ್ಲಿನ ಪ್ರಯತ್ನ. ಭಾರತ ಮತ್ತು ಇತರ ದೇಶಗಳಿಗೂ ಚಂದ್ರನ ಧ್ರುವ ಪ್ರದೇಶಗಳ ವೈಜ್ಞಾನಿಕ ಅಧ್ಯಯನದಲ್ಲಿ ಆಸಕ್ತಿ ಇದೆ. ಹೀಗಾಗಿ ಮುಂದಿನ ಬಾಹ್ಯಾಕಾಶ ಸ್ಪರ್ಧೆ ಕೇವಲ ಚಂದ್ರನ ಮೇಲೆ ಮೊದಲು ಯಾರು ಇಳಿಯುತ್ತಾರೆ ಎಂಬುದಾಗಿರುವುದಿಲ್ಲ. ಚಂದ್ರನಲ್ಲಿ ಯಾರು ದೀರ್ಘಕಾಲ ಉಳiyುತ್ತಾರೆ, ಯಾರು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಾರೆ, ಯಾರು ನೀರು ಮತ್ತು ಇಂಧನದ ಮೂಲವನ್ನು ಮೊದಲು ಕಂಡುಹಿಡಿಯುತ್ತಾರೆ ಎಂಬ ಪ್ರಶ್ನೆಗಳೂ ಅಷ್ಟೇ ಮುಖ್ಯವಾಗಲಿವೆ.
ಚಂದ್ರನ ನೀರಿಗೆ ಬೆಲೆ ಬರಬಹುದೇ?: ಭೂಮಿಯ ದೃಷ್ಟಿಯಿಂದ ಚಂದ್ರನ ನೀರಿಗೆ ಇಂದಿನ ದಿನದಲ್ಲಿ ಯಾವುದೇ ಮಾರುಕಟ್ಟೆ ಬೆಲೆ ಇಲ್ಲ. ಆದರೆ ಬಾಹ್ಯಾಕಾಶ ಆರ್ಥಿಕತೆ ಬೆಳೆದಂತೆ ಪರಿಸ್ಥಿತಿ ಬದಲಾಗಬಹುದು. ಭೂಮಿಯಿಂದ ಚಂದ್ರನಿಗೆ ನೀರನ್ನು ಸಾಗಿಸುವುದಕ್ಕಿಂತ ಚಂದ್ರನಲ್ಲೇ ನೀರನ್ನು ಪಡೆದುಕೊಳ್ಳುವುದು ಅಗ್ಗವಾಗುವ ದಿನ ಬಂದರೆ, ನೀರು ಅತ್ಯಂತ ಅಮೂಲ್ಯ ಬಾಹ್ಯಾಕಾಶ ಸಂಪನ್ಮೂಲವಾಗಬಹುದು. ಆಗ ಚಂದ್ರನ ದಕ್ಷಿಣ ಧ್ರುವದ ಒಂದು ಸಣ್ಣ ಮಂಜುಗಡ್ಡೆಯ ಪ್ರದೇಶವೇ ಭವಿಷ್ಯದ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಬಹಳ ದೊಡ್ಡ ಮಹತ್ವ ಪಡೆಯಬಹುದು. ಚೀನಾ ಚಂದ್ರನ ನೀರನ್ನು ಬಳಸಲು ಹೊರಟಿದೆ ಎನ್ನುವುದಕ್ಕಿಂತ, ಅದನ್ನು ಬಳಸುವ ಸಾಧ್ಯತೆಯ ಬಾಗಿಲು ತೆರೆಯಲು ಹೊರಟಿದೆ. ಚಾಂಗ್‌ಇ-7 ಆ ಬಾಗಿಲಿನ ಕೀಲಿಕೈ. ಅದರಾಚೆ ಏನಿದೆ ಎಂಬುದನ್ನು ತಿಳಿಯಲು ಇಡೀ ಜಗತ್ತು ಕಾದುಕುಳಿತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net