

ನವದೆಹಲಿ: ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಸಂಘರ್ಷ ದುರದೃಷ್ಟಕರ ಘಟನೆ. ಇತಿಹಾಸದ ದೃಷ್ಟಿಯಲ್ಲಿ ಇದೊಂದು ಕ್ಷಣಿಕ ಕಾಲ ಎಂದು ಭಾರತದಲ್ಲಿನ ಚೀನಾ ರಾಯಭಾರಿ ಸನ್ ವೀಡಾಂಗ್ ಬುಧವಾರ ಹೇಳಿದರು.
ಚೀನಾ-ಭಾರತ ಯುವ ವೆಬಿನಾರ್ನಲ್ಲಿ ಮಾತನಾಡಿದ ಬುಧವಾರ ವೀಡಾಂಗ್, ಗಲ್ವಾನ್ನಲ್ಲಿ ನಡೆದ ಘರ್ಷಣೆಯನ್ನು ಉಭಯ ದೇಶಗಳೂ ಬಯಸಿರಲಿಲ್ಲ. ಅದನ್ನು ಸರಿಯಾಗಿ ನಿಭಾಯಿಸಲು ನಾವೀಗ ಪ್ರಯತ್ನಿಸುತ್ತಿದ್ದೇವೆ. ಭಾರತಕ್ಕೆ ಪ್ರತಿಸ್ಪರ್ಧಿಯಾಗುವ ಬದಲು ಪಾಲುದಾರನಂತೆ ನೋಡುತ್ತದೆ ಎಂದು ಹೇಳಿದರು. ಭಾರತ, ಚೀನಾ ನಡುವೆ 70 ವರ್ಷಗಳ ಹಿಂದೆ ರಾಜತಾಂತ್ರಿಕ ಬಾಂಧವ್ಯ ಸ್ಥಾಪನೆಯಾದಾಗಿನಿಂದಲೂ ದ್ವಿ್ವಕ್ಷೀಯ ಸಂಬಂಧ ಸಮಯದ ಪರೀಕ್ಷೆಯಲ್ಲಿ ಗೆದ್ದು ನಿಂತಿದೆ. ಕೇವಲ ಒಂದು ಘಟನೆಗಾಗಿ ಅದನ್ನು ಹಠಾತ್ತನೆ ಹಾಳು ಮಾಡಬಾರದು. ಹೊಸ ಶತಮಾನದಲ್ಲಿ ದ್ವಿಪಕ್ಷೀಯ ಬಾಂಧವ್ಯ ಮುಂದೆ ಸಾಗಬೇಕೇ ಹೊರತು ಹಿನ್ನಡೆಯಬಾರದು ಎಂದು ವೀಡಾಂಗ್ ಅಭಿಪ್ರಾಯಪಟ್ಟರು. ಪೂರ್ವ ಲಡಾಖ್ನಲ್ಲಿ ವಾಸ್ತ ಗಡಿ ರೇಖೆಯಲ್ಲಿ (ಎಲ್ಎಸಿ) ಉದ್ಭವಿಸಿದ ಗಡಿ ತಕರಾರಿನ ಹಿನ್ನೆಲೆಯಲ್ಲಿ ಜೂನ್ 15ರಂದು ನಡೆದ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಚೀನಿ ಯೋಧರು ಕೂಡ ಮೃತಪಟ್ಟಿದ್ದು ಸಂಖ್ಯೆಯನ್ನು ಅದು ಇನ್ನೂ ಬಹಿರಂಗ ಪಡಿಸಿಲ್ಲ.
ಭಾರತ ಮತ್ತು ಚೀನಾ ಪ್ರಾಚೀನ ನಾಗರಿಕತೆ ಹೊಂದಿದ್ದು ದ್ವಿಪಕ್ಷೀಯ ಸಂಬಂಧವನ್ನು ಸೂಕ್ತವಾಗಿ ನಿಭಾಯಿಸುವ ವಿವೇಕ ಹಾಗೂ ಸಾಮರ್ಥ್ಯ ಅವುಗಳಿಗಿದೆ. | ಸನ್ ವೀಡಾಂಗ್, ಚೀನಾ ರಾಯಭಾರಿ