

ನವದೆಹಲಿ: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಭಾರತೀಯ ಸೇನಾ ಶಿಬಿರಗಳ ನಿಖರವಾದ ಸ್ಥಳಗಳನ್ನು ಪತ್ತೆ ಮಾಡುವ ಸಲುವಾಗಿ ಪಾಕಿಸ್ತಾನವು ಚೀನಾದ ಜಿಲಿನ್-1 ಉಪಗ್ರಹದ ದತ್ತಾಂಶವನ್ನು ಖರೀದಿಸಿದೆ ಎನ್ನಲಾಗಿದೆ.
ಜಿಲಿನ್-1 ಚೀನಾದ ಚಾಂಗ್ ಗುವಾಂಗ್ ಸ್ಯಾಟಲೈಟ್ ಟೆಕ್ನಾಲಜಿ ಕಂಪನಿಯ ವಾಣಿಜ್ಯ ಉಪಗ್ರಹವಾಗಿದೆ. ಇದರ ಸಹಾಯದಿಂದ ಹೈಡೆಫಿನಿಷನ್ ವಿಡಿಯೋ, ಆಪ್ಟಿಕಲ್ ಮತ್ತು ಹೈಪರ್ ಸ್ಪೆಕ್ಟ್ರಲ್ ಚಿತ್ರಣವನ್ನು ಪಡೆಯಬಹುದಾಗಿದೆ. ಈ ಕುರಿತು ಪಾಕಿಸ್ತಾನ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಜಿಲಿನ್-1 ಉಪಗ್ರಹ ಭೂಮಿಯ ಸುತ್ತ ಒಂದೇ ದಿನ ಎರಡು ಬಾರಿ ಹಾದುಹೋಗುತ್ತದೆ. 0.72 ಮೀಟರ್ ರೆಸಲ್ಯೂಷನ್ ಮತ್ತು 2.88 ಮೀಟರ್ ಮಲ್ಟಿ-ಸ್ಪೆಕ್ಟ್ರಲ್ ಇಮೇಜ್ಗಳನ್ನು ಇದು ನೀಡಲಿದೆ. 2019ರಲ್ಲೂ ಪಾಕಿಸ್ತಾನ ಅಡ್ವಾನ್ಸಡ್ ಲ್ಯಾಂಡ್ ಆಬ್ಸರ್ವೆಷನ್ ಸ್ಯಾಟಲೈಟ್ ಮತ್ತು ಜಿಲಿನ್-1ರ ದತ್ತಾಂಶಗಳನ್ನು ಖರೀದಿಸಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ ಇದನ್ನು ನಿರಾಕರಿಸಿರುವ ಪಾಕಿಸ್ತಾನ, ಭೂಮಿ ಮತ್ತು ಸಂಪನ್ಮೂಲಗಳ ಸಮೀಕ್ಷೆ, ನೈಸರ್ಗಿಕ ವಿಕೋಪಗಳ ಮೇಲ್ವಿಚಾರಣೆ, ಕೃಷಿ ಸಂಶೋಧನೆ, ನಗರ ನಿರ್ಮಾಣ ಮತ್ತು ಇತರ ಚಟುವಟಿಕೆಗಳಿಗಾಗಿ ಡೇಟಾವನ್ನು ಸಂಗ್ರಹಿಸಿದ್ದೇವೆ ಎಂದು ಹೇಳಿದೆ.