

ನವದೆಹಲಿ: ಕರೊನಾ ವೈರಸ್ ವಿಚಾರದಲ್ಲಿ ಅಮೆರಿಕ ಸೇರಿ ಕೆಲವು ದೇಶಗಳು ಚೀನಾ ವಿರುದ್ಧ ಕಿಡಿಕಾರುತ್ತಿವೆ. ಅದರಲ್ಲೂ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೂ ಕರೊನಾ ವೈರಸ್ಗೆ ಚೀನಿ ವೈರಸ್, ವುಹಾನ್ ವೈರಸ್ ಎಂದೇ ಹೆಸರು ಇಟ್ಟಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ಯ ತೀವ್ರ ಮುಜುಗರಕ್ಕೀಡಾಗಿರುವ ಚೀನಾ, ದಯವಿಟ್ಟು ಚೀನಿ ವೈರಸ್ ಅಂತ ಕರೆಯಬೇಡಿ. ಇದು ನಮ್ಮ ರಾಷ್ಟ್ರಕ್ಕೆ ಕಳಂಕ ಎಂದು ಭಾರತದ ಬಳಿ ಮನವಿ ಮಾಡಿದೆ. ಹಾಗೇ, ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತಕ್ಕೆ ಅಗತ್ಯವಿರುವ ಸಹಕಾರ ನೀಡುವುದಾಗಿ ತಿಳಿಸಿದೆ.
ನವದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ, ಕೌನ್ಸಲರ್ ಜಿ ರಾಂಗ್ ಅವರು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಭಾರತದಲ್ಲಿ ಕರೊನಾ ವೈರಸ್ ನಿರ್ವಹಣೆಗೆ ಚೀನಾ ಸಹಕಾರ ನೀಡಲಿದೆ. ಚೀನಾದ ಉದ್ಯಮಗಳು ಈಗಾಗಲೇ ಭಾರತಕ್ಕೆ ಧನಸಹಾಯ ಮಾಡಲು ಪ್ರಾರಂಭಿಸಿವೆ. ಭಾರತಕ್ಕೆ ನಮ್ಮಿಂದ ಏನೇ ಸಹಕಾರ, ನೆರವು ಅಗತ್ಯವಿದ್ದರೂ ನಾವದನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಸಾಂಕ್ರಾಮಿಕ ರೋಗ ಎದುರಾರ ಈ ಕಠಿಣ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಚೀನಾ ಮತ್ತು ಭಾರತ ಪರಸ್ಪರ ಸಹಕಾರ, ಬೆಂಬಲವನ್ನು ನೀಡಿಕೊಳ್ಳುತ್ತಿವೆ ಎಂದು ತಿಳಿಸಿದರು.
ಚೀನಾದಲ್ಲೇ ಜನ್ಮತಾಳಿದ ಈ ವೈರಸ್ಗೆ ಬಲಿಯಾಗುವವರ ಸಂಖ್ಯೆ ಚೀನಾಕ್ಕಿಂತ ಇಟಲಿ, ಸ್ಪೇನ್ನಲ್ಲೇ ಜಾಸ್ತಿಯಾಗಿದೆ. ಚೀನಾದಲ್ಲಿ ವೈರಸ್ನಿಂದ ತೀರ ಸಂಕಷ್ಟಕ್ಕೆ ಒಳಗಾಗಿದ್ದ ವುಹಾನ್ಗೆ ಭಾರತ ಸುಮಾರು 15 ಟನ್ಗಳಷ್ಟು ಮಾಸ್ಕ್, ಕೈಗವಸುಗಳು ಸೇರಿ ಇನ್ನೂ ಅನೇಕ ರೀತಿಯ ವೈದ್ಯಕೀಯ ನೆರವು ನೀಡಿತ್ತು. ಅದನ್ನು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಜಿ ರಾಂಗ್, ಚೀನಾದಲ್ಲಿ ಕರೊನಾ ವಿರುದ್ಧ ಹೋರಾಡಲು ಭಾರತ ವೈದ್ಯಕೀಯ ವಸ್ತುಗಳನ್ನು ಪೂರೈಕೆ ಮಾಡಿತ್ತು. ನಮಗೆ ಆ ಬಗ್ಗೆ ತುಂಬ ಸಂತೋಷವಿದೆ ಹಾಗೇ ಭಾರತಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.
ನಮಗೆ ಖಂಡಿತ ನಂಬಿಕೆಯಿದೆ. ಭಾರತ ಇನ್ನು ಕೆಲವೇ ದಿನಗಳಲ್ಲಿ ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸುತ್ತದೆ. ವೈರಸ್ನ್ನು ಒದ್ದೋಡಿಸುತ್ತದೆ. ಚೀನಾದಲ್ಲಿ ಕರೊನಾ ವೈರಸ್ ಹೆಚ್ಚಿನ ಕಾಲ ಉಳಿಯಲಿದ್ದು, ನಮಗೆ ಭಾರತ ಸೇರಿ ಇನ್ನೂ ಹಲವು ರಾಷ್ಟ್ರಗಳ ಸಹಕಾರ ಬೇಕು.
ಜಿ-20 (G20) ಮತ್ತು ಬ್ರಿಕ್ಸ್(BRICS)ನಂತರ ಬಹುಪಕ್ಷೀಯ ವೇದಿಕೆಗಳು ಈ ಸಂದರ್ಭದಲ್ಲಿ ಸಹಕಾರ ನೀಡಬೇಕು. ಮನುಕುಲಕ್ಕೇ ಕಂಟಕವಾಗಿರುವ ಜಾಗತಿಕ ಸವಾಲನ್ನು ಎದುರಿಸಲು ಎಲ್ಲ ದೇಶಗಳೂ ತಮ್ಮ ಬಲ ಹಾಗೂ ಬುದ್ಧಿವಂತಿಕೆ ಕೊಡುಗೆ ನೀಡಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್)