

ಬೀಜಿಂಗ್: ಚೀನಾ ವಿಶ್ವದ ಅತಿದೊಡ್ಡ ಆನುವಂಶಿಕ ನಕ್ಷೆಯನ್ನು (ಜೆನೆಟಿಕ್ ಮ್ಯಾಪ್) ರಚಿಸುತ್ತಿದ್ದು, ಇದಕ್ಕಾಗಿ ಸುಮಾರು 70 ಕೋಟಿ ಜನರ ರಕ್ತದ ಮಾದರಿಗಳನ್ನು ಪೊಲೀಸರ ಸಹಾಯದಿಂದ ಸಂಗ್ರಹಿಸುತ್ತಿದೆ.
ಜೆನೆಟಿಕ್ ಮ್ಯಾಪ್‌ನಿಂದ ಯಾವುದೇ ರೋಗ ಅಥವಾ ಜೀನ್ ಪೋಷಕರಿಂದ ಅವರ ಮಕ್ಕಳಿಗೆ ಹರಡಿರುವ ಬಗ್ಗೆ ಅಥವಾ ಯಾವುದೇ ವ್ಯಕ್ತಿಯ ಜೀನ್‌ನ ಮೂಲವನ್ನು ಪತ್ತೆ ಮಾಡಲು ಸಾಧ್ಯವಾಗುತ್ತದೆ. ಇದು ಚೀನಾದ ಉಯ್ಗರ್ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ರೂಪಿಸಲಾಗಿರುವ ಯೋಜನೆ ಎಂಬ ಮಾತು ಕೇಳಿಬರುತ್ತಿದೆ.
ಚೀನಾ ತನ್ನಲ್ಲಿರುವ ಉಯ್ಗರ್ ಮುಸ್ಲಿಮರ ವಿರುದ್ಧ ಈ ಹಿಂದಿನಿಂದಲೂ ದಬ್ಬಾಳಿಕೆ ನಡೆಸಿಕೊಂಡೇ ಬರುತ್ತಿದ್ದು, ಅವರ ಮೇಲಿನ ಹಿಡಿತವನ್ನು ಬಲಗೊಳಿಸಿಕೊಳ್ಳುತ್ತಿದೆ. ಜತೆಗೆ ಅವರ ಧಾರ್ಮಿಕ ಸ್ಥಳಗಳನ್ನೂ ಆಕ್ರಮಿಸಿಕೊಂಡಿದೆ. ವಿವಿಧ ಆರೋಪಗಳ ಮೇಲೆ ಸಾವಿರಾರು ಮುಸ್ಲಿಮರನ್ನು ಬಂಧಿಸಿ ಸೆರೆಮನೆಗೆ ತಳ್ಳಿದೆ.
ಇದರ ಬೆನ್ನಲ್ಲೇ ಜೆನೆಟಿಕ್ ಮ್ಯಾಪ್ ರಚನೆಗೆ ಮುಂದಾಗಿದೆ. ಇದು ಜನರ ಗೌಪ್ಯತೆಗೆ ಅಪಾಯವನ್ನುಂಟು ಮಾಡುತ್ತದೆ. ನಿರ್ದಿಷ್ಟ ವರ್ಗದ ಜನರ ವಿರುದ್ಧ ಬಳಕೆಯೂ ಆಗಬಹುದು ಎಂದು ಹಲವು ಮಾನವ ಹಕ್ಕುಗಳ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಈ ಭಯದಿಂದಾಗಿ ರಕ್ತದ ಮಾದರಿ ನೀಡಲು ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜನರ ಅನುಮತಿ ಪಡೆದ ನಂತರವೇ ಅವರ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಚೀನಾ ಪೊಲೀಸರು ತಿಳಿಸಿದ್ದರೂ ಜನರಿಗೆ ನಿಯಮಗಳನ್ನು ವಿರೋಧಿಸಲು ಯಾವುದೇ ಹಕ್ಕುಗಳಿಲ್ಲ ಎಂದು ಮಾನವ ಹಕ್ಕುಗಳ ಸಂಘಟನೆಗಳು ಹೇಳಿವೆ.
ಆಸ್ಟ್ರೇಲಿಯಾದ ಸ್ಟ್ರಾಟೆಜಿಕ್ ಪಾಲಿಸಿ ಇನ್ಸ್ಟಿಟ್ಯೂಟ್ ನಡೆಸಿದ ಸಂಶೋಧನಾ ವರದಿಯ ಪ್ರಕಾರ, ಈ ಯೋಜನೆಯು ತನ್ನದೇ ಜನರ ಮೇಲೆ ಚೀನಾದ ಆನುವಂಶಿಕ ನಿಯಂತ್ರಣವನ್ನು ಹೆಚ್ಚಿಸುತ್ತದೆ ಮತ್ತು ಅದರ ಸಹಾಯದಿಂದ ಕೋಟ್ಯಂತರ ಜನರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ತಿಳಿದುಬಂದಿದೆ.
ಪುರುಷರ ರಕ್ತ, ಲಾಲಾರಸ ಮತ್ತು ಇತರ ಆನುವಂಶಿಕ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಅಚ್ಚರಿಯ ವಿಷಯವೆಂದರೆ ಈ ಕಾರ್ಯದಲ್ಲಿ ಚೀನಾಗೆ ಸಹಾಯ ಮಾಡುತ್ತಿರುವುದು ಅಮೆರಿಕದ ಥರ್ಮೋಫಿಶರ್ ಕಂಪನಿ! ಜತೆಗೆ ಅದೇ ಕಂಪನಿ ಮ್ಯಾಪಿಂಗ್ ಮತ್ತು ಪರೀಕ್ಷೆಗೆ ಕಿಟ್‌ಗಳನ್ನು ಸಿದ್ಧಪಡಿಸಿ ಚೀನಾಗೆ ಮಾರಾಟ ಮಾಡಿದೆ. ಈ ಕುರಿತು ಅಮೆರಿಕ ಕಂಪನಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಇದು ವಿಧಿವಿಜ್ಞಾನ ಡಿಎನ್‌ಎ ಪರೀಕ್ಷೆಗೆ ಜಾಗತಿಕ ಮಾನದಂಡಕ್ಕೆ ಅನುಗುಣವಾಗಿ ತಯಾರಿಸಲಾದ ಕಿಟ್ ಮಾತ್ರ ಎಂದು ಕಂಪನಿ ತನ್ನ ನಿರ್ಧಾರ ಸಮರ್ಥಿಸಿಕೊಂಡಿದೆ.