ಭಾರತದಲ್ಲೂ ಚೀನಾ ಮಾದರಿ ದಿಗ್ಬಂಧನ: ಉತ್ತರ ಪ್ರದೇಶದಲ್ಲಿ 15 ಜಿಲ್ಲೆಗಳು 'ಸೀಲ್​'

Wuhan
Published on

ನವದೆಹಲಿ: ಚೀನಾದ ವುಹಾನ್​ನಲ್ಲಿ 76 ದಿನಗಳ ದಿಗ್ಬಂಧನ ಇದೀಗ ಕೊನೆಗೊಂಡಿದೆ. ಆದರೆ, ಭಾರತದಲ್ಲೂ ಇದೇ ಮಾದರಿಯ ದಿಗ್ಬಂಧನ ಶುರುವಾಗಲಿದೆ.

ಹೌದು.. ಯಾರೂ ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ. ಏನೇ ಬೇಕಿದ್ದರೂ ಸರ್ಕಾರವೇ ಮನೆ ಬಾಗಿಲಿಗೆ ತಲುಪಿಸುತ್ತೆ. ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್​.

ಇಂಥದ್ದೊಂದು ದಿಗ್ಬಂಧನಕ್ಕೆ ಉತ್ತರಪ್ರದೇಶದಲ್ಲಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ ಈ ಲಾಕ್​ಡೌನ್​ ಏಪ್ರಿಲ್​ 15ರ ಮಧ್ಯರಾತ್ರಿ ಆರಂಭವಾಗಲಿದೆ. ಕಂಪ್ಲೀಟ್​ ಬಂದ್​ ಘೋಷಣೆ ಮಾಡಲಾಗಿದೆ.

ಏಪ್ರಿಲ್​ 15ರ ಮಧ್ಯರಾತ್ರಿಯಿಂದ ಸಂಪೂರ್ಣ ಬಂದ್​ ಮಾಡಲಾಗುತ್ತದೆ. ಜನರಿಗೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಉತ್ತರಪ್ರದೇಶದ ಲಖನೌ, ಗೌತಮ ಬುದ್ಧನಗರ, ಗಾಜಿಯಾಬಾದ್​, ಮೀರತ್​, ಆಗ್ರಾ, ಶಾಮ್ಲಿ, ಸಹರನ್​ಪುರ್​ ಮೊದಲಾದ ಜಿಲ್ಲೆಗಳಲ್ಲಿ ದಿಗ್ಬಂಧನ ವಿಧಿಸಲಾಗುತ್ತದೆ.

ಏಪ್ರಿಲ್​ 14ರ ನಂತರ ದೇಶಾದ್ಯಂತ ವಿಧಿಸಲಾಗಿರುವ ಲಾಕ್​ಡೌನ್​ ಮುಂದುವರಿಯುವ ಎಲ್ಲ ಲಕ್ಷಣ ಗಳು ಗೋಚರಿಸುತ್ತಿವೆ. ಒಂದು ವೇಳೆ ತೆರವಾದರೂ ಕೊರೊನಾ ಸೋಂಕಿತ ಪ್ರದೇಶಗಳಲ್ಲಿ ದಿಗ್ಬಂಧನ ಮುಂದುವರಿಯಲಿದೆ. ಅದರಲ್ಲೂ ಸೋಂಕು ಹೆಚ್ಚಾಗಿ ಹಾಟ್​ಸ್ಪಾಟ್​ ಎನಿಸಿರುವ ಪ್ರದೇಶಗಳಲ್ಲಂತೂ ಈ ದಿಗ್ಬಂಧನ ಇನ್ನಷ್ಟು ಬಿಗಿಯಾಗಲಿದೆ.

ರಾಜ್ಯಗಳು ನೀಡುವ ಮಾಹಿತಿ ಆಧರಿಸಿ ಈ ಬಗ್ಗೆ ಪ್ರಧಾನಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆ. ಬುಧವಾರ ಸರ್ವ ಪಕ್ಷಗಳ ಮುಖಂಡರ ಜತೆ ಸಭೆ ನಡೆಸಿರುವ ಮೋದಿ ಶನಿವಾರ ಎಲ್ಲ ರಾಜ್ಯಗಳ ಸಿಎಂಗಳ ಜತೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ನಡೆಸಲಿದ್ದಾರೆ. ಆ ಬಳಿಕ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ರಾಜ್ಯದ ಹಾಟ್​ಸ್ಪಾಟ್​ಗಳ್ಲಲೂ ಇದೇ ಮಾದರಿಯ ಲಾಕ್​ಡೌನ್​ ಜಾರಿಯಾಗುತ್ತಾ ಎಂಬ ಬಗ್ಗೆ ಪ್ರಧಾನಿ ಜತೆಗಿನ ಸಂವಾದದ ಬಲಿಕ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net