ಕೋವಿಡ್ ನೆರವಿನ ಹೆಸರಲ್ಲಿ ಬೇಹುಗಾರರನ್ನು ನಿಯೋಜಿಸುತ್ತಿದೆ ಚೀನಾ...!

kp sharma oli
Published on

ನವದೆಹಲಿ: ಚೀನಾದ ಕೈಗೊಂಬೆಯಂತಾಗಿದ್ದ ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಓಲಿ ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದಕ್ಕಾಗಿ ದೇಶದ ಬಜೆಟ್​ ಅಧಿವೇಶನವನ್ನೇ ಮುಂದೂಡಿದ್ದಾರೆ.

ಆದರೆ, ಈ ಬೆಳವಣಿಗೆಯಿಂದ ಹೆಚ್ಚು ಆತಂಕಕ್ಕೆ ಒಳಗಾಗಿರುವ ದೇಶವಂದರೆ ಚೀನಾ. ಭಾರತದ ವಿರುದ್ಧ ನೇಪಾಳವನ್ನು ಎತ್ತಿಕಟ್ಟಲು ಓಲಿಯನ್ನು ಚೀನಾ ಬಳಸಿಕೊಂಡಿತ್ತು. ಇದಕ್ಕೆ ಪಾಕಿಸ್ತಾನ ಕೂಡ ಬೆಂಬಲವಾಗಿ ನಿಂತಿತ್ತು.

ನೇಪಾಳದ ಪ್ರತಿ ಬೆಳವಣಿಗೆ ಮೇಲೂ ಚೀನಾದ ಗೂಢಚಾರ ಸಂಸ್ಥೆ ಮಿಲಿಟರಿ ಆಫ್​ ಸ್ಟೇಟ್ ಸೆಕ್ಯುರಿಟಿ (ಎಂಎಸ್​ಎಸ್​) ಕಣ್ಣಿಟ್ಟಿದೆ. ಇದಕ್ಕಾಗಿ ಹೆಚ್ಚುವರಿ ಬೇಹುಗಾರರನ್ನು ನೇಪಾಳದಲ್ಲಿ ನಿಯೋಜಿಸಿದೆ. ಕೋವಿಡ್​19 ವೈದ್ಯಕೀಯ ನೆರವಿನ ಹೆಸರಿನಲ್ಲಿ ಬೇಹುಗಾರರನ್ನು ಕಳುಹಿಸಿಕೊಟ್ಟಿದೆ. ಓಲಿ ಕೆಳಗಿಳಿದು ಬೇರೆಯವರು ಅಧಿಕಾರದ ಗದ್ದುಗೆಗೆ ಏರಿದರೆ ಸಹಜವಾಗಿ ಭಾರತ ವಿರೋಧಿ ಧೋರಣೆಯನ್ನು ಹೊಂದಿರುವುದಿಲ್ಲ ಎಂಬುದಂತೂ ಸ್ಪಷ್ಟ. ಇದು ಚೀನಾದ ನಿದ್ದೆಗೆಡಿಸಿರುವ ಅಂಶ.

ಇದಲ್ಲದೇ, ಪಾಕಿಸ್ತಾನದ ಹಲವು ಸಂಸ್ಥೆಗಳು ಕೂಡ ನೇಪಾಳದಲ್ಲಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸುತ್ತಿವೆ. ಭಾರತದ ವಿರುದ್ಧ ಎತ್ತಿಕಟ್ಟಲು ಓಲಿ ಹಾಗೂ ಇತರ ನಾಯಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಲಾಗಿದೆ.

ನೇಪಾಳದ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ ಭೇಟಿಯಾಗಿದ್ದ ಓಲಿ ಬಜೆಟ್​ ಅಧಿವೇಶನವನ್ನು ಮುಂದೂಡಲು ಅನುಮತಿ ಕೋರಿದ್ದರು. ಅಧಿವೇಶ ಮುಂದೂಡಲ್ಪಟ್ಟಿರುವುದರಿಂದ ತಕ್ಷಣವೇ ಬಲಾಬಲ ಪರೀಕ್ಷೆ ನಡೆಯುವ ಸಾಧ್ಯತೆಗಳು ಕಡಿಮೆ. ಈ ಅವಧಿಯಲ್ಲಿ ಪಕ್ಷವನ್ನು ವಿಭಜಿಸಿ ಅದಕ್ಕೆ ಆಯೋಗದ ಮಾನ್ಯತೆ ಪಡೆಯುವ ಯತ್ನ ಓಲಿಯದ್ದಾಗಿದೆ.

ನೇಪಾಳ ಕಮ್ಯುನಿಸ್ಟ್​ ಪಾರ್ಟಿಯ ಸ್ಥಾಯಿ ಸಮಿತಿಯ 44 ಸದಸ್ಯರ ಪೈಕಿ 31 ಸದಸ್ಯರು ಓಲಿ ವಿರುದ್ಧವಾಗಿದ್ದಾರೆ. ಹೀಗಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂಬುದು ಸ್ವಪಕ್ಷದವರ ಆಗ್ರಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net