

ನವದೆಹಲಿ: ಭಾರತವು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇಟಲಿ ನಾವಿಕರ ವಿರುದ್ಧ ಪ್ರಕರಣವನ್ನು ಜಯಿಸಿದೆ.
ಇಟಲಿ ನಾವಿಕರು ಅಂತಾರಾಷ್ಟ್ರೀಯ ಕಾಯ್ದೆ ಉಲ್ಲಂಘಿಸಿದ್ದಾರೆ. ಈ ಕಾರಣದಿಂದಾಗಿ 2012ರಲ್ಲಿ ಅವರಿಂದ ಹತ್ಯೆಗೀಡಾದ ಇಬ್ಬರು ಭಾರತೀಯ ಮೀನುಗಾರರಿಗಾಗಿ ಪರಿಹಾರ ಸ್ವೀಕರಿಸುವ ಹಕ್ಕು ಭಾರತ ಹೊಂದಿದೆ ಎಂದು ನ್ಯಾಯಾಲಯ ಹೇಳಿದೆ.
ಕೇರಳ ಸಮುದ್ರದಲ್ಲಿ 2012ರ ಫೆಬ್ರವರಿ 15ರಂದು ಇಟಲಿ ನಾವಿಕರು ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ್ದರು. ಇದರ ವಿಚಾರಣೆ ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಇದರ ತೀರ್ಪು ಭಾರತದ ಪರವಾಗಿ ಬಂದಿದೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ವಿಶ್ವಸಂಸ್ಥೆಯ ಸಮುದ್ರ ಕಾಯ್ದೆ ಪ್ರಕಾರ ಸಮುದ್ರದಲ್ಲಿ ಸಂಚರಿಸುವ ಭಾರತದ ಸ್ವಾತಂತ್ರ್ಯವನ್ನು ಇಟಲಿ ಉಲ್ಲಂಘಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಭಾರತದ ಮೀನುಗಾರಿಕಾ ದೋಣಿ ಸೇಂಟ್ ಅಂಥೋನಿ ಹಾಗೂ ಇಟಲಿಯ ಎನ್ರಿಕಾ ಲೆಕ್ಸಿ ಹಡಗು ಒಳಗೊಂಡ ಪ್ರಕರಣ ಇದಾಗಿತ್ತು. ಇಟಲಿಯ ನಾವಿಕರು ಗುಂಡು ಹಾರಿಸಿ ಇಬ್ಬರು ಮೀನುಗಾರರನ್ನು ಕೊಂದಿದ್ದರು. ಇವರನ್ನು ಭಾರತ ವಶಕ್ಕೆ ಪಡೆದಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದು ಭಾರಿ ಚರ್ಚೆಗೆ ಕಾರಣವಾಗಿದ್ದಲ್ಲದೇ, ಭಾರತ- ಇಟಲಿ ನಡುವೆ ವೈಷಮ್ಯಕ್ಕೂ ದಾರಿ ಮಾಡಿ ಕೊಟ್ಟಿತ್ತು.