

ಬೀಜಿಂಗ್: ಉಯ್ಘರ್ ಮತ್ತಿತರ ಅಲ್ಪಸಂಖ್ಯಾತರ ಜನಸಂಖ್ಯೆಯನ್ನು ನಿಯಂತ್ರಿಸಲು ಚೀನಾ ಸರ್ಕಾರ ಬಲವಂತದ ಕ್ರಮಗಳನ್ನ ಅನುಸರಿಸುತ್ತಿದ್ದು ಜನಾಂಗೀಯ ನರಮೇಧ ನಡೆಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಒಂದೆಡೆ ಮುಸ್ಲಿಂ ಜನಸಂಖ್ಯೆಯನ್ನು ಕಡಿಮೆ ಮಾಡಲು ಕರಾಳ ಹೆಜ್ಜೆಗಳನ್ನಿಡುತ್ತಿರುವ ಚೀನಾ, ಇನ್ನೊಂದೆಡೆ ದೇಶದ ಹನ್ ಬಹುಸಂಖ್ಯಾತರು ಹೆಚ್ಚು ಮಕ್ಕಳನ್ನು ಹೊಂದಲು ಪೋ›ತ್ಸಾಹ ನೀಡುತ್ತಿದೆ. ಉಯ್ಘರ್ ಮತ್ತಿತರ ಸಮುದಾಯಗಳ ಜನಸಂಖ್ಯೆಗೆ ಕಡಿವಾಣ ಹಾಕಲು ಗರ್ಭಧಾರಣೆ ತಡೆ ಸಾಧನ ಐಯುಡಿ, ಗರ್ಭಪಾತ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಸರ್ಕಾರ ಬಲವಂತ ಮಾಡುತ್ತಿದೆ. ಈ ಕ್ರಮಕ್ಕೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಸರ್ಕಾರ ವ್ಯವಸ್ಥಿತವಾಗಿ ಜನನ ನಿಯಂತ್ರಣ ಕ್ರಮಗಳನ್ನು ಜಾರಿ ಮಾಡುತ್ತಿದೆ. ಅನಕ್ಷರಸ್ಥರು ಮತ್ತು ಬಡ ಮಹಿಳೆಯರಿಗೆ ಇದು ಏನು, ಎತ್ತ? ಎಂಬುದು ಅರಿವೆ ಬರುವ ಮೊದಲೆ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎಂಬುದು ಅಧ್ಯಯನವೊಂದರಿಂದ ತಿಳಿದು ಬಂದಿದೆ. ಸರ್ಕಾರಿ ದಾಖಲೆಗಳು ಮತ್ತು 30 ಮಂದಿ ಮಾಜಿ ಬಂಧಿಗಳ ಸಂದರ್ಶನ ಆಧರಿಸಿ ಅಧ್ಯಯನ ನಡೆಸಲಾಗಿದೆ.
ಸಾಮೂಹಿಕ ಬಂಧನ
ಸರ್ಕಾರದ ಸೂಚನೆ ಪಾಲಿಸದವರನ್ನು ಸಾಮೂಹಿಕವಾಗಿ ಬಂಧಿಸುವುದಕ್ಕೂ ಅಧಿಕಾರಿಗಳು ಮುಂದಾಗುತ್ತಾರೆ ಎನ್ನುವುದನ್ನು ಅಧ್ಯಯನ ತಿಳಿಸಿದೆ. ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಏಕೈಕ ಕಾರಣಕ್ಕೆ ಜನರನ್ನು ಬಂಧಿಸಿ ಡಿಟೆನ್ಶನ್ ಕೇಂದ್ರಗಳಿಗೆ ನೂಕಲಾಗುತ್ತಿದೆ. ಮೂರು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿರುವ ಪಾಲಕರು ದಂಡ ತೆರಲು ವಿಫಲರಾದರೆ ಅಂಥವರನ್ನು ಬಂಧನ ಕೇಂದ್ರಗಳಿಗೆ ಕಳಿಸಲಾಗುತ್ತದೆ. ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಅಡಗಿಸಿಟ್ಟಿರಬಹುದಾದ ಮಕ್ಕಳ ವಿವರ ನೀಡುವಂತೆ ಬೆದರಿಸುತ್ತಾರೆ. ಇಂಥ ಹಲವು ಮನಕಲಕುವ ಪ್ರಕರಣಗಳನ್ನು ಅಧ್ಯಯನ ವೇಳೆ ಕಂಡುಕೊಳ್ಳಲಾಗಿದೆ.
ತಜ್ಞರ ಕಳವಳ
ಪಶ್ಚಿಮದ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಘಾತಕಾರಿ ಪ್ರಕ್ರಿಯೆ ನಡೆಯುತ್ತರುವುದನ್ನು ಅಧ್ಯಯನ ಬಯಲು ಮಾಡಿದೆ. ಇದೊಂದು ‘ಜನಾಂಗೀಯ ನರಮೇಧ’ ಎಂದು ಕೆಲವು ತಜ್ಞರು ವರ್ಣಿಸುವಷ್ಟು ಮಟ್ಟಿಗಿನ ಬಲವಂತದ ಕ್ರಮಗಳನ್ನು ಕೈಗೊಳ್ಳಲಾಗುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಪಸಂಖ್ಯಾತ ಮಹಿಳೆಯರು ಗರ್ಭಧರಿಸಿದ್ದಾರೆಯೇ ಎಂದು ತಪಾಸಣೆ ಮಾಡಲಾಗುತ್ತದೆ. ಸಾವಿರಾರು ಮಹಿಳೆಯರು ಗರ್ಭಪಾತ ಮಾಡಿಕೊಳ್ಳುವಂತೆಯೂ ಬಲವಂತ ಪಡಿಸಿರುವುದು ಸಂದರ್ಶನಗಳು ಹಾಗೂ ಲಭ್ಯ ಅಂಕಿ-ಅಂಶಗಳಿಂದ ಗೊತ್ತಾಗಿದೆ. ಜನನಾಂಗದಲ್ಲಿ ಧರಿಸುವ ಐಯುಡಿ, ಸಂತಾನ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಜಾಗೃತಿ ಅಭಿಯಾನಗಳು ನಡೆಯುತ್ತಿವೆ. ದೇಶದ ಇತರ ಭಾಗಳಿಗಿಂತ ಕ್ಸಿನ್ಜಿಯಾಂಗ್ನಲ್ಲಿ ಅದು ತೀವ್ರವಾಗಿದೆ.