

ಬೀಜಿಂಗ್: ಚಂದ್ರನ ಅಂಗಳದಲ್ಲಿ ಚೀನಾ ರಾಷ್ಟ್ರಧ್ವಜ ನೆಟ್ಟಿದೆ. ಚೀನಾದ ಬಾಹ್ಯಾಕಾಶ ಯೋಜನೆ ಬಹುತೇಕ ಯಶಸ್ವಿಯಾಗಿದೆ. ‘ಚಾಂಗ್ಇ-5’ ಗಗನನೌಕೆ ಅಲ್ಲಿನ ಮಣ್ಣು, ಕಲ್ಲುಗಳನ್ನು ಸಂಗ್ರಹಿಸಿಕೊಂಡು ಗುರುವಾರ ಮಧ್ಯಾಹ್ನ ಭೂಮಿಯತ್ತ ಮರುಪ್ರಯಾಣ ಬೆಳೆಸಿದೆ. ನಾಲ್ಕು ದಶಕಗಳ ನಂತರ ಚಂದ್ರನಂಗಳದ ಸ್ಯಾಂಪಲ್ಗಳು ಭೂಮಿಗೆ ಬರುತ್ತಿವೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
‘ಚಾಂಗ್ಇ-5’ ನೌಕೆಯು ಚಂದ್ರನಲ್ಲಿ ಪ್ರಕಾಶಮಾನವಾದ ಸ್ಥಳದ ಚಿತ್ರವನ್ನು ಕಳುಹಿಸಿದೆ. ನಂತರ 2 ಮೀಟರ್ ಅಗಲ ಮತ್ತು 90 ಸೆಂ.ಮೀ. ಎತ್ತರದ ಧ್ವಜ ಹಾರಿಸಿರುವ ಹಾಗೂ ಸ್ಯಾಂಪಲ್ ಸಂಗ್ರಹ ದೃಶ್ಯಗಳನ್ನು ರವಾನಿಸಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಚಂದ್ರನಂಗಳದ ಮಣ್ಣು ಮತ್ತು ಕಲ್ಲುಗಳು ಅಧ್ಯಯನದಿಂದ ಚಂದ್ರನ ಮೂಲ, ಸಂರಚನೆ, ಜ್ವಾಲಾಮುಖಿಯ ಚಟುವಟಿಕೆ ಮಾಹಿತಿ ಲಭ್ಯವಾಗಲಿದೆ. ಇದು ಮುಂದೆ ಮಹತ್ವದ ಅಧ್ಯಯನಕ್ಕೂ ಅವಕಾಶ ಕಲ್ಪಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕಳೆದ ತಿಂಗಳ 23ರಂದು ಲಾಂಗ್ ಮಾರ್ಚ್ 5 ರಾಕೆಟ್ ಮೂಲಕ ಉಡಾವಣೆಯಾದ ‘ಚಾಂಗ್ಇ-5’ ನೌಕೆಯು, ಚಂದ್ರನಲ್ಲಿ ಕಳೆದ ಗುರುವಾರ ನಸುಕಿನಲ್ಲಿ ಇಳಿದು, 19 ತಾಸು ಪರಿಶೋಧನೆ ನಡೆಸಿದೆ. ನೌಕೆ ವಾಪಸು ಬರುವ ಪ್ರಕ್ರಿಯೆ ಜಟಿಲವಾಗಿದ್ದು, ನೌಕೆ ಮತ್ತು ರೊಬೋಟಿಕ್ ಸಾಧನಗಳ ಮಧ್ಯೆ ಸೂಕ್ಷ್ಮ ಸಂಪರ್ಕವನ್ನು ಸಾಧಿಸಿ ಮರುಯಾನ ಕೈಗೊಂಡಿದೆ. ಚೀನಾ ಉತ್ತರ ಭಾಗದ ಇನ್ನರ್ ಮಂಗೋಲಿಯಾದಲ್ಲಿ ಇಳಿಯಲಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ. ಚಂದ್ರನಿಂದ ಹೊರಟಿರುವ ನೌಕೆಯು ಯಶಸ್ವಿಯಾಗಿ ಭೂಮಿ ತಲುಪಿದರೆ ಇಂಥ ಮಹತ್ಸಾಧನೆ ಮಾಡಿದ ಮೂರನೇ ರಾಷ್ಟ್ರ ಚೀನಾ ಆಗಲಿದೆ. ಅಮೆರಿಕ (1960) ಮತ್ತು ರಷ್ಯಾ (1970)ಗಳು ಚಂದ್ರನಂಗ ಳದ ಕಲ್ಲು, ಮಣ್ಣಿನ ಮಾದರಿ ತರುವಲ್ಲಿ ಯಶಸ್ವಿಯಾಗಿದ್ದವು.
ಚಾಂಗ್ಇ-5 ನೌಕೆಯು ಎರಡು ಕೆ.ಜಿ. ಕಲ್ಲು ಮತ್ತು ಮಣ್ಣನ್ನು ತರುತ್ತಿದ್ದು, ಇದನ್ನು ಚಂದ್ರನ ‘ಓಷಿಯನಸ್ ಪ್ರೊಸೆಲ್ಲಾರಮ್ ಅಥವಾ ಬಿರುಗಾಳಿಯ ಸಾಗರ’ ಎಂಬ ಸ್ಥಳದಿಂದ ಸಂಗ್ರಹಿಸಲಾಗಿದೆ. ಇದು ಈ ಹಿಂದೆ ಪರಿಶೋಧನೆಗೆ ಒಳಪಡದ ಲಾವಾ ಪ್ರದೇಶವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಚೀನಾ 2022ರ ಹೊತ್ತಿಗೆ ಬಾಹ್ಯಾಕಾಶ ನಿಲ್ದಾಣ ಹೊಂದುವ ಗುರಿಹೊಂದಿದ್ದು, ಇದಾದ ನಂತರ ಮಾನವ ಸಹಿತ ಚಂದ್ರಯಾನದ ಯೋಜನೆ ಹಮ್ಮಿಕೊಳ್ಳಲಿದೆ. ಮಂಗಳಯಾನದ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದ್ದು, ಮುಂದಿನ ವರ್ಷ ಮೇ ವೇಳೆಗೆ ಸಿದ್ಧವಾಗುವ ನಿರೀಕ್ಷೆ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.