ಲಸಿಕೆ ಮೇಲೆ ಚೀನಾ ಕಣ್ಣು: ಕರೊನಾ ಔಷಧ ಕುರಿತ ಸಂಶೋಧನೆಗಳ ಮಾಹಿತಿಗೆ ಕನ್ನ

China Eye
Published on

ವಾಷಿಂಗ್ಟನ್: ಕರೊನಾ ವೈರಸ್ ಔಷಧಕ್ಕಾಗಿ ವಿಶ್ವಾದ್ಯಂತ ನಡೆಯುತ್ತಿರುವ ಸಂಶೋಧನೆಗಳು ಹಾಗೂ ಪ್ರಯೋಗಗಳ ಮಾಹಿತಿಯನ್ನು ಕದಿಯಲು ಚೀನಾ ಯತ್ನಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕರೊನಾ ಲಸಿಕೆ ಸಂಶೋಧನೆಗಳ ಡೇಟಾ ಕಳ್ಳತನ ಯತ್ನ, ನೂರಾರು ಕಂಪನಿಗಳ ಸೂಕ್ಷ್ಮ ಮಾಹಿತಿಗಳನ್ನು ಹ್ಯಾಕ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಚೀನಾದ ಇಬ್ಬರು ಪ್ರಜೆಗಳ ವಿರುದ್ಧ ಅಮೆರಿಕದ ನ್ಯಾಯ ಇಲಾಖೆ ದೋಷಾರೋಪ ಸಲ್ಲಿಕೆ ಮಾಡಿದೆ. ಚೀನಾದ ಲಿ ಕ್ಸಿಯಾವ್ (34) ಮತ್ತು ಡಾಂಗ್ ಜಿಯಾಜಿ (33) ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಇವರು ಅಮೆರಿಕ, ಚೀನಾ ಮತ್ತು ಹಾಂಕಾಂಗ್​ನಲ್ಲಿನ ಮಾನವ ಹಕ್ಕುಗಳ ಕಾರ್ಯಕರ್ತರನ್ನೂ ಗುರಿಯಾಗಿಸಿಕೊಂಡಿದ್ದರು ಎಂದು ಸಹಾಯಕ ಅಟಾರ್ನಿ ಜನರಲ್ ಜಾನ್ ಡೆಮರ್ಸ್ ಹೇಳಿದ್ದಾರೆ. ಇಬ್ಬರೂ ಆರೋಪಿಗಳು ಪ್ರಸ್ತುತ ಚೀನಾದಿಂದಲೇ ಕಾರ್ಯಾಚರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ. ವೈಯಕ್ತಿಕ ಲಾಭ ಹಾಗೂ ಚೀನಾದ ಭದ್ರತಾ ಸಚಿವಾಲಯದ ಅನುಕೂಲಕ್ಕಾಗಿ ಇವರು ಮಾಹಿತಿ ಕಳವು ಮಾಡುತ್ತಿದ್ದಾರೆ. ಸೈಬರ್ ಅಪರಾಧಿಗಳಿಗೆ ಆಶ್ರಯ ನೀಡುವ ರಾಷ್ಟ್ರಗಳ ಗುಂಪಿನಲ್ಲಿ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದೊಂದಿಗೆ ಈಗ ಚೀನಾ ಕೂಡ ಸ್ಥಾನ ಪಡೆದುಕೊಂಡಿದೆ ಎಂದು ಡೆಮರ್ಸ್ ಹೇಳಿದ್ದಾರೆ.

ಚೀನಾದ ಚೆಂಗ್ಡುವಿನಲ್ಲಿರುವ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದ ಲಿ ಮತ್ತು ಡಾಂಗ್ ಕಳೆದ 10 ವರ್ಷಗಳಿಂದ ಹ್ಯಾಕಿಂಗ್ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾ, ಬೆಲ್ಜಿಯಂ, ಜರ್ಮನಿ, ಜಪಾನ್, ಲಿಥುವೇನಿಯಾ, ದಕ್ಷಿಣ ಕೊರಿಯಾ, ಸ್ವೀಡನ್ ಮತ್ತು ಬ್ರಿಟನ್ ಕಂಪನಿಗಳನ್ನು ಗುರಿಯಾಗಿಸಿಕೊಂಡು ಹಲವು ಬಾರಿ ಸೈಬರ್ ದಾಳಿ ನಡೆಸಿದ್ದಾರೆ ಎಂದು ಅಮೆರಿಕದ ಕಾನೂನು ಇಲಾಖೆ ಹೇಳಿದೆ. ಇತ್ತೀಚೆಗೆ ಕರೊನಾ ಲಸಿಕೆ ಕಂಡುಹಿಡಿಯುತ್ತಿರುವ ಹಾಗೂ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುತ್ತಿರುವ ಕಂಪನಿಗಳ ಕಂಪ್ಯೂಟರ್​ಗಳನ್ನು ಇವರು ಹ್ಯಾಕ್ ಮಾಡಿದ್ದಾರೆ. ಕ್ಯಾಲಿಫೋರ್ನಿಯಾ, ಮೇರಿಲ್ಯಾಂಡ್ ಸೇರಿ ಹಲವು ಪ್ರದೇಶದ ಬಯೋಟೆಕ್ ಕಂಪನಿಗಳ ಮೇಲೆ ಸೈಬರ್ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ. ಆದರೆ ಯಾವ ಮಾಹಿತಿಗಳನ್ನು ಇವರು ಕಳವು ಮಾಡಿದ್ದಾರೆ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ದೇಶದಲ್ಲಿ ಮುಂದುವರಿದ ಕರೊನಾ ಆರ್ಭಟ

ಭಾರತದಲ್ಲಿ ಕರೊನಾ ತಾಂಡವ ದಿನೇ ದಿನೆ ಹೆಚ್ಚುತ್ತಿದೆ. ಕಳೆದ 24 ತಾಸಿನಲ್ಲಿ 25 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಸೋಂಕಿತರ ಸಂಖ್ಯೆ 12.16 ಲಕ್ಷಕ್ಕೆ ಏರಿಕೆಯಾಗಿದೆ. 690 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 29,400ಕ್ಕಿಂತ ಅಧಿಕವಾಗಿದೆ. ಈವರೆಗೆ 7.68 ಲಕ್ಷ ರೋಗಿಗಳು ಗುಣಮುಖರಾಗಿದ್ದು, ಇನ್ನೂ 4.17 ಲಕ್ಷ ಸಕ್ರಿಯ ಪ್ರಕರಣಗಳಿವೆ. ಕಳೆದ 24 ತಾಸಿನಲ್ಲಿ ಒಟ್ಟು 28,472 ರೋಗಿಗಳು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳು ಹಾಗೂ ಗುಣಮುಖ ಪ್ರಕರಣಗಳ ನಡುವಿನ ಅಂತರ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಜುಲೈ 21ರವರೆಗೆ ಒಟ್ಟು 1,47,24,546 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಗುಣಮುಖರ ಪ್ರಮಾಣ ಶೇ.63ಕ್ಕಿಂತ ಹೆಚ್ಚು

ದೇಶದಲ್ಲಿ ಕರೊನಾ ಸೋಂಕಿತರ ಗುಣಮುಖ ಪ್ರಮಾಣ ಶೇಕಡ 63.13ಕ್ಕೆ ಏರಿದೆ. ಕೇಂದ್ರಾಡಳಿತ ಪ್ರದೇಶಗಳು ಸೇರಿ 19 ರಾಜ್ಯಗಳಲ್ಲಿನ ಗುಣಮುಖರ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತಲೂ ಅಧಿಕವಾಗಿದೆ. ದೆಹಲಿ ಶೇಕಡ 84.83 ಗುಣಮುಖ ಪ್ರಮಾಣದೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಲಡಾಖ್ ಮತ್ತು ತೆಲಂಗಾಣ ಕ್ರಮವಾಗಿ ಶೇ.84.31 ಮತ್ತು ಶೇ. 78.37 ಪ್ರಮಾಣ ಹೊಂದಿವೆ. ಹರಿಯಾಣದಲ್ಲಿ ಶೇ.76.29, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಶೇ.75.00, ರಾಜಸ್ಥಾನದಲ್ಲಿ ಶೇ.72.50, ಗುಜರಾತ್​ನಲ್ಲಿ ಶೇ.72.30, ಛತ್ತೀಸ್​ಗಢದಲ್ಲಿ ಶೇ.71.81, ಅಸ್ಸಾಂನಲ್ಲಿ ಶೇ.71.05, ಒಡಿಶಾದಲ್ಲಿ ಶೇ.70.96, ತಮಿಳುನಾಡಿನಲ್ಲಿ ಶೇ.70.12, ಮಣಿಪುರದಲ್ಲಿ ಶೇ.69.48, ಚಂಡೀಗಢದಲ್ಲಿ ಶೇ.68.97 ಮತ್ತು ಉತ್ತರಾಖಾಂಡ್​ನಲ್ಲಿ ಶೇ. 67.99 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net