ಸಂಪಾದಕೀಯ: ಚೀನಾದ ಕುತಂತ್ರ ಬಯಲು

Edit-4
Published on

ಜಾಗತಿಕ ನಾಯಕನಾಗಬೇಕು ಎಂಬ ಹುಚ್ಚು ಸ್ಪರ್ಧೆಯಲ್ಲಿ ಚೀನಾ ಮಾಡುತ್ತಿರುವ ಅವಾಂತರಗಳು, ಕುತಂತ್ರಗಳು ಒಂದೆರಡಲ್ಲ. ಭಾರತದ ವಿರುದ್ಧವಂತೂ ಅದು ವ್ಯವಸ್ಥಿತ ವ್ಯೂಹ ರಚಿಸುತ್ತಲೇ ಇದೆ. ಭಾರತದ ನೆರೆರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಹೀಗೆ ಹಲವೆಡೆ ಭಾರತವಿರೋಧಿ ಭಾವನೆಗಳನ್ನು ಬಿತ್ತುತ್ತಿದೆ. ಅಲ್ಲದೆ, ಪಾಕಿಸ್ತಾನವನ್ನಂತೂ ಭಾರತವಿರೋಧಿ ಚಟುವಟಿಕೆಗಳಿಗಾಗಿಯೇ ದಾಳವಾಗಿಸಿಕೊಳ್ಳುತ್ತಿದೆ. ಹಲವು ರಾಷ್ಟ್ರಗಳೊಂದಿಗೆ ಗಡಿ ವಿವಾದ ಹೊಂದಿರುವ ಚೀನಾ ಇತ್ತೀಚೆಗಷ್ಟೇ ಪೂರ್ವ ಲಡಾಖ್​ನಲ್ಲಿ ಘರ್ಷಣೆ ಸೃಷ್ಟಿಸಿ ಭಾರತದೊಂದಿಗೆ ಗಡಿತಂಟೆ ತೆಗೆದು, ಪರಿಸ್ಥಿತಿಯನ್ನು ಉದ್ವಿಗ್ನವಾಗಿಸಲು ಯತ್ನಿಸಿತ್ತು. ಆದರೆ, ಡೋಕ್ಲಾಂ ವಿವಾದವನ್ನು ರಾಜತಾಂತ್ರಿಕ ಜಾಣ್ಮೆಯಿಂದ ಪರಿಹರಿಸಿದ್ದ ಭಾರತ ಈ ಬಾರಿಯೂ ಗಟ್ಟಿ ನಿಲುವು ತಳೆಯಿತು ಮತ್ತು ಗಲ್ವಾನ್ ಕಣಿವೆಯಿಂದ ಚೀನೀ ಸೇನೆ ಹಿಂದೆ ಸರಿಯಬೇಕು ಎಂದು ಪಟ್ಟು ಹಿಡಿಯಿತು. ಕೊನೆಗೂ, ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ನಡುವಿನ ಹಲವು ಸುತ್ತಿನ ಮಾತುಕತೆ ಮತ್ತು ಸುರಕ್ಷಾ ಸಲಹೆಗಾರ ಅಜಿತ್ ದೊವಲ್ ಚೀನಾದ ವಿದೇಶಾಂಗ ಕಾರ್ಯದರ್ಶಿ ಜತೆ ನಡೆಸಿದ ನಿರ್ಣಾಯಕ ಮಾತುಕತೆಯ ಬಳಿಕ ಚೀನಾ ಗಲ್ವಾನ್ ಕಣಿವೆಯ ವಿವಾದಿತ ಪ್ರದೇಶದಿಂದ ತನ್ನ ಸೇನೆಯನ್ನು ಹಿಂಪಡೆಯಲು ಒಪ್ಪಿಕೊಂಡಿತು.

ಚೀನಾದ ಈ ಪಿತೂರಿಗೆ ಮೂಲ ಕಾರಣವೇನು? ಜಗತ್ತೆಲ್ಲ ಕರೊನಾ ವಿರುದ್ಧ ಸಂಘರ್ಷ ನಡೆಸುತ್ತಿರುವಾಗ ಗಡಿ ತಂಟೆ ಸೃಷ್ಟಿಸುತ್ತಿರುವ ಇದರ ಕುತಂತ್ರಗಳ ಹಿಂದೆ ಇರುವವರು ಯಾರು? ಎಂಬೆಲ್ಲ ಪ್ರಶ್ನೆಗಳು ಉದ್ಭವವಾಗಿದ್ದವು. ಆದರೆ, ಈ ಪ್ರಶ್ನೆಗಳಿಗೆ ಸ್ಪಷ್ಟ ಮತ್ತು ಆಘಾತಕಾರಿ ಉತ್ತರ ದೊರೆತಿದೆ. ಪೂರ್ವ ಲಡಾಖ್​ನ ಗಲ್ವಾನ್ ಕಣಿವೆ, ಪ್ಯಾಂಗೊಂಗ್ ತ್ಸೊ ಸರೋವರ ಹಾಗೂ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಬಳಿ ಸೈನಿಕರು, ಶಸ್ತ್ರಾಸ್ತ್ರ ಜಮಾವಣೆ ಮಾಡಲು ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಅವರೇ ಆದೇಶ ನೀಡಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿನ ಸೇನಾ ವಾರ್ಷಿಕ ಕವಾಯತಿನ ವೇಳೆಯಲ್ಲೇ ತುಕಡಿಗಳಿಗೆ ಹೊಸದಾಗಿ ತರಬೇತಿ ನೀಡುವ ಆದೇಶಕ್ಕೆ ಅಧ್ಯಕ್ಷ ಜಿನ್​ಪಿಂಗ್ ಜನವರಿಯಲ್ಲಿ ಸಹಿ ಮಾಡಿದ್ದರು ಎನ್ನಲಾಗಿದೆ. ಚೀನಾ ಸೇನೆ ತುಕಡಿಗಳು ಜನವರಿ ಅಂತ್ಯ ಮತ್ತು ಫೆಬ್ರವರಿ ಮೊದಲ ವಾರದಲ್ಲೇ ಎಲ್​ಎಸಿ ಕಡೆ ದಾಂಗುಡಿ ಇರಿಸಲಾರಂಭಿಸಿದವು ಎಂಬ ಅಧಿಕೃತ ಮಾಹಿತಿ ಚೀನಿ ಅಧ್ಯಕ್ಷರ ತಂತ್ರಗಳನ್ನು ತೆರದಿಟ್ಟಿದೆ.

ರಾಷ್ಟ್ರಾಧ್ಯಕ್ಷರೇ ಗಡಿ ಚಿತಾವಣೆಗೆ ಇಂಬು ನೀಡುವಂಥ ಬೆಳವಣಿಗೆಗಳು ತೀರಾ ಆಘಾತಕಾರಿ. ವಿಸ್ತರಣಾವಾದಿ ಆಗಿರುವ ಜಿನ್​ಪಿಂಗ್ ಗಡಿಗಳಲ್ಲಿ ಹೀಗೆ ಸೇನಾ ನಿಯೋಜನೆ ಮೂಲಕ ಮತ್ತೊಂದು ದೇಶದ ಭೂಭಾಗವನ್ನು ಕಸಿದುಕೊಳ್ಳಲು ಯತ್ನಿಸುತ್ತಿರುವುದು ಅವರ ಮತ್ತು ಆ ದೇಶದ ಮೋಸದ ಮಾನಸಿಕತೆಗೆ ಸಾಕ್ಷಿ. ‘ಪಾಕಿಸ್ತಾನಕ್ಕಿಂತಲೂ ಚೀನಾ ಭಾರತಕ್ಕೆ ಅಪಾಯಕಾರಿ’ ಎಂದು ಹಲವು ತಜ್ಞರು ಹೇಳುತ್ತಿರುವುದು ಸರಿಯಾಗಿಯೇ ಇದೆ. ಚೀನಾದ ಬಗ್ಗೆ ಭಾರತ ಇನ್ನಷ್ಟು ಎಚ್ಚರಿಕೆ ವಹಿಸಬೇಕಿದೆ, ಮತ್ತೆ ಗಡಿ ತಂಟೆ ಸೃಷ್ಟಿಯಾಗದಂತೆ ನಿಗಾ ವಹಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net