ಕರೊನಾ ಕುರಿತು ಚೀನಾ ಸುಳ್ಳು ಹೇಳುತ್ತಿದೆಯೇ?

China Corona
Published on

ಮಾರ್ಚ್ ಮಧ್ಯ ಭಾಗದಲ್ಲಿ ಭಾರತ, ಯುರೋಪ್ ಸಹಿತ ಜಗತ್ತಿನ ವಿವಿಧ ದೇಶಗಳು ಕೋವಿಡ್-19 ಮಹಾಮಾರಿಯ ಅಪಾಯದಿಂದ ಪಾರಾಗಲು ಲಾಕ್​ಡೌನ್ ಸೇರಿದಂತೆ ಹಲವು ಕ್ರಮಗಳಿಗೆ ಮುಂದಾಗುತ್ತಿರುವಾಗ ಅತ್ತ ಕರೊನಾ ವೈರಸ್ ಮೊದಲಿಗೆ ಕಾಣಿಸಿಕೊಂಡ ಚೀನಾದ ವುಹಾನ್​ನಲ್ಲಿ ಬೇರೆಯೇ ವಿದ್ಯಮಾನ ನಡೆಯುತ್ತಿತ್ತು. ನಗರದಲ್ಲಿನ ಕೊನೆಯ ತಾತ್ಕಾಲಿಕ ಆಸ್ಪತ್ರೆ ಮುಚ್ಚಿದ ಸಂಭ್ರಮ ಆಚರಿಸಲು ವೈದ್ಯಕೀಯ ಸಿಬ್ಬಂದಿ ಒಬ್ಬರಾದ ಮೇಲೆ ಒಬ್ಬರಂತೆ ಮುಖಗವಸುಗಳನ್ನು ತೆಗೆದು ಹಾಕುತ್ತಿದ್ದರು. ನಗರದಲ್ಲಿ ಯಾವುದೇ ಹೊಸ ಕರೊನಾ ಪ್ರಕರಣ ವರದಿಯಾಗಿಲ್ಲ. ಕರೊನಾ ವಿರುದ್ಧದ ಯುದ್ಧ ಗೆದ್ದಿದ್ದೇವೆಂಬ ಭಾವನೆ ಒಡಮೂಡಿಸುವಂತಿತ್ತು ಅಲ್ಲಿನ ಸಂಭ್ರಮ. ಆದರೆ ಮುಂದಿನ ಕೆಲ ದಿನಗಳಲ್ಲಿ ಕಂಡುಬಂದ ಸುಳಿವುಗಳು, ತನ್ನ ದೇಶದ ಕೋವಿಡ್-19 ಸಾವಿನ ಸಂಖ್ಯೆಗಳನ್ನು ಚೀನಾ ಉದ್ದೇಶಪೂರ್ವಕವಾಗಿಯೇ ಕಡಿಮೆಯಾಗಿ ತೋರಿಸಿದೆ ಎಂಬುದರ ಸೂಚನೆಯಂತಿದ್ದವು. ಇದೀಗ ಅದು ನಿಜವೆಂಬುದನ್ನು ಅಮೆರಿಕದ ಬೇಹುಗಾರಿಕೆ ಇಲಾಖೆಯ ರಹಸ್ಯ ವರದಿಗಳನ್ನು ಉಲ್ಲೇಖಿಸಿದ ಮಾಹಿತಿ ಮಾಧ್ಯಮದಲ್ಲಿ ಪ್ರಕಟವಾಗಿದೆ.

ಮುಖಭಂಗ ತಡೆಯುವ ಪ್ರಯತ್ನ

ಚೀನಾಗಿಂತ ಅಮೆರಿಕ, ಇಟಲಿ, ಸ್ಪೇನ್, ಬ್ರಿಟನ್ ಇನ್ನಿತರ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಇತರ ದೇಶಗಳಿಗಿಂತ ಚೀನಾ ಹೆಚ್ಚು ಯಶಸ್ವಿಯಾಗಿದೆ ಎಂಬುದು ಇದರ ಸರಳ ಅರ್ಥ. ವೈದ್ಯಕೀಯ ಸೇವೆ, ರೋಗ ತಡೆಗಟ್ಟುವುದು, ಪರೀಕ್ಷೆ ಮತ್ತು ಮುಖಗವಸು (ಮಾಸ್ಕ್) ವಿತರಣೆಯಲ್ಲಿ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಮುಂದಾಳತ್ವದಲ್ಲಿ ಚೀನಾ ಆಡಳಿತ ಪಾಶ್ಚಿಮಾತ್ಯ ನಾಯಕರಿಗಿಂತ ಪರಿಣಾಮಕಾರಿ ಕೆಲಸ ಮಾಡುತ್ತಿದೆ ಎಂಬ ಭಾವನೆ ಬಲಗೊಳಿಸುತ್ತದೆ. ಆದರೆ, ಜಾಗತಿಕ ಮುಖಭಂಗ ತಪ್ಪಿಸುವ ಸಲುವಾಗಿ ಚೀನಾ ಮಹಾ ಅನಾಹುತದ ತೀವ್ರತೆಯನ್ನು ಮುಚ್ಚಿಟ್ಟಿದೆ ಎಂಬ ಆಘಾತಕಾರಿ ಅಂಶಕ್ಕೆ ಈಗ ಬಲ ಬಂದಿದೆ. ಅದಕ್ಕೆ ಅನೇಕ ಪುರಾವೆಗಳು ಸಿಕ್ಕಿವೆ.

ಟ್ರಂಪ್ ಆರೋಪ

ಮಾರಕ ಕರೊನಾ ವೈರಸ್ ಕುರಿತ ಮಾಹಿತಿಯನ್ನು ಚೀನಾ ಆರಂಭದಲ್ಲಿ ಮುಚ್ಚಿಟ್ಟಿದ್ದರಿಂದ ಜಗತ್ತು ಅದಕ್ಕೆ ದೊಡ್ಡ ಬೆಲೆ ತೆರುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಆರೋಪಿಸಿದ್ದಾರೆ. ‘ಒಂದೆರಡು ತಿಂಗಳು ಮುಂಚೆಯೇ ಗೊತ್ತಾಗಿದ್ದರೆ ಈ ವೈರಾಣು ಹುಟ್ಟಿದ ಜಾಗಕ್ಕಷ್ಟೇ ಅದನ್ನು ಸೀಮಿತಗೊಳಿಸಬಹುದಿತ್ತು’ ಎಂದು ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಅಭಿಪ್ರಾಯಪಟ್ಟರು. ಕರೊನಾ ಸೋಂಕನ್ನು ಚೀನಾ ವೈರಸ್ ಎಂದ ಅಮೆರಿಕ ವಿರುದ್ಧ ಚೀನಾ ಗುಡುಗಿತ್ತು. ಸೋಂಕು ಹರಡಲು ಅಮೆರಿಕ ಮಿಲಿಟರಿ ಕಾರಣ ಎಂದೂ ಆಪಾದಿಸಿತ್ತು. ಇದು 2 ಬಲಿಷ್ಠ ರಾಷ್ಟ್ರಗಳ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಯಿತು. ಆದರೆ, ಈ ವಿಷಯದಲ್ಲಿ ಅಮೆರಿಕ ಈಗ ಮೆದುವಾಗಿದ್ದರೂ, ಮುನಿಸು ಬೂದಿಮುಚ್ಚಿದ ಕೆಂಡದಂತೆ ಇದೆ.

ವೈರಾಣು ಹರಡುವುದನ್ನು ತಡೆಯಲು ಹೇರಲಾಗಿದ್ದ ಲಾಕ್​ಡೌನ್ ತೆರವು ಮಾಡುವ ಪ್ರಕ್ರಿಯೆಗೆ ಜನರು ಅಡ್ಡಿಪಡಿಸುತ್ತಿರುವ ವಿಡಿಯೋಗಳು ಆನ್​ಲೈನ್​ನಲ್ಲಿ ಹರಿದಾಡುತ್ತಿವೆ. ಇದು ಕೂಡ ದೇಶದಲ್ಲಿ ವೈರಸ್ ಇನ್ನೂ ಹರಡುತ್ತಿದೆಯೆನ್ನುವುದಕ್ಕೆ ಸಾಕ್ಷಿಯಾಗಿದೆ. ವುಹಾನ್ ಪ್ರಾಂತ್ಯದಲ್ಲಿ ಕೊವಿಡ್-19 ವ್ಯಾಧಿಗೆ ಚಿಕಿತ್ಸೆ ಪಡೆದ ರೋಗಿಗಳ ಸಂಖ್ಯೆ ಯನ್ನು ಕಡಿಮೆಗೊಳಿಸಿ ಹೇಳಿರುವ ಸಂಭವವೂ ಇದೆ.

ಅಂತ್ಯಕ್ರಿಯೆ ಕರಂಡಕಗಳ ಸಾಕ್ಷ್ಯ!

ಚೀನಿ ಅಧಿಕಾರಿಗಳು ನೀಡುವ ಮಾಹಿತಿಗಳಲ್ಲಿ ಪಾರದರ್ಶಕತೆ ಕೊರತೆಯಿದೆಯೆನ್ನುವುದು ತನಿಖಾ ಪತ್ರಕರ್ತರು ಅಥವಾ ಕೆಲವು ಚೀನಿ ಪ್ರಜೆಗಳೇ ಹಂಚಿಕೊಂಡ ಮಾಹಿತಿಗಳಿಂದ ಗೊತ್ತಾಗುತ್ತದೆ. ಸರ್ಕಾರ ಹೇಳಿರುವ ಅಧಿಕೃತ ಸಾವಿನ ಸಂಖ್ಯೆಗಿಂತ ಅಂತ್ಯಕ್ರಿಯೆ ಕರಂಡಕಗಳ ಸಂಖ್ಯೆ ಜಾಸ್ತಿಯಿರುವುದು ಒಂದು ಪ್ರಮುಖ ಪುರಾವೆಯಾಗಿದೆ. ವುಹಾನ್​ನಲ್ಲಿ 3,500 ಜನರು ಸತ್ತಿದ್ದಾರೆಂದು ಸರ್ಕಾರ ತಿಳಿಸಿದೆ. ಆದರೆ ನಿಜವಾಗಿಯೂ ಸತ್ತವರು 40,000ಕ್ಕೂ ಹೆಚ್ಚಾಗಿರಬಹುದೆಂದು ಅಂದಾಜಿಸಲಾಗಿದೆ. ಕಟ್ಟುನಿಟ್ಟಿನ ಸೆನ್ಸಾರ್​ಶಿಪ್ ಇದ್ದರೂ ಈ ಅಂಕಿಸಂಖ್ಯೆಗಳು ದೇಶಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಆಡಳಿತಗಾರರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ.

ಚೀನಾದಲ್ಲಿ ಲಾಕ್​ಡೌನ್ ತೆರವಿಗೆ ವಿರೋಧ

ಸೋಂಕು ಕಾಣಿಸಿದ ಆರಂಭದಲ್ಲೇ ಅದರ ಬಗ್ಗೆ ಅಪಾಯದ ದನಿಯೆತ್ತಿದ ವೈದ್ಯರು ಸಾಮಾಜಿಕ ಅಶಾಂತಿ ಹರಡುತ್ತಿದ್ದಾರೆಂದು ಅಧಿಕಾರಿಗಳು ಆಪಾದಿಸಿದ್ದರು ಎಂದು ಅಂತಾರಾಷ್ಟ್ರೀಯ ಸಂಬಂಧಗಳ ಫ್ರೆಂಚ್ ಸಂಸ್ಥೆಯ ಸಂಶೋಧಕ ಹಾಗೂ ಚೀನಾ ವಿಶೇಷಜ್ಞ ಮಾರ್ಕ್ ಜುಲಿಯಾನೆ ಹೇಳಿದ್ದಾರೆ. ಹೀಗಾಗಿ, ‘ಒಳ್ಳೆ ಸುದ್ದಿ ಮಾತ್ರ ಹರಡಿ ಕೆಟ್ಟ ಸುದ್ದಿ ಬಚ್ಚಿಡುವ’ ದೇಶದಲ್ಲಿ ಅಧಿಕಾರಿಗಳು ತಪ್ಪು ಮಾಹಿತಿ ನೀಡಿರುವ ಸಾಧ್ಯತೆಯೇ ಹೆಚ್ಚಿದೆ.

ಬೇರೊಂದು ರೋಗದಿಂದ ಬಳಲುತ್ತಿದ್ದವರು ಕರೊನಾ ವೈರಸ್ ವ್ಯಾಧಿಯಿಂದ ಸತ್ತಿದ್ದರೆ ಅದನ್ನು ನೋಂದಾಯಿಸದಿರುವ ಬುದ್ಧಿವಂತಿಕೆಯನ್ನೂ ಚೀನಿಯರು ಬಳಸಿದ್ದಾರೆ. ಉದಾಹರಣೆಗೆ ಹೃದ್ರೋಗ ಪೀಡಿತರು ಕರೊನಾದಿಂದ ಸತ್ತರೆ ಅವರು ಹೃದಯಾಘಾತದಿಂದ ಮೃತಪಟ್ಟರೆಂದು ನೋಂದಾಯಿಸುವುದು ಇದರ ಮರ್ಮ. ಸೋಂಕು-ಸಾವಿನ ಸಂಖ್ಯೆ ಕಡಿಮೆ ತೋರಿಸುವ ಮೂಲಕ, ಇದನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಚೀನಿಯರು ಯುರೋಪ್ ಕೆಲ ದೇಶಗಳಲ್ಲಿ ಮೂಡಿಸಿದರು.

ಚೀನಾ ಕಳೆದ ಎರಡು ವಾರದಿಂದ ಕಡಿಮೆ ಸಂಖ್ಯೆಯ ಸೋಂಕಿತರು ಹಾಗೂ ಸಾವಿನ ಮಾಹಿತಿ ನೀಡುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆ, ಜಾನ್ ಹಾಪ್ಕಿನ್ಸ್ ಕರೊನಾ ವೈರಸ್ ಡ್ಯಾಶ್​ಬೋರ್ಡ್ ಮತ್ತು ಪಾಶ್ಚಿಮಾತ್ಯ ಮಾಧ್ಯಮ ಅದನ್ನು ಒಪ್ಪುತ್ತಿವೆ. ಆದರೆ ಇದೇ ಒಂದೇ ದಿನ 202 ಹೊಸ ಸೋಂಕಿನ ಹಾಗು 42 ಸಾವಿನ ಪ್ರಕರಣಗಳನ್ನು ಅದು ವರದಿ ಮಾಡಿದ್ದು ಜಾಗತಿಕ ಮಾಧ್ಯಮ ಅದನ್ನು ಪ್ರಶ್ನಿಸದೆಯೇ ಪ್ರಕಟಿಸಿವೆ. ಕೇವಲ ಹುಬೇ ಪ್ರಾಂತ್ಯಕ್ಕೆ ಸಂಬಂಧಿಸಿದ್ದು.

ಕಳೆದ 2 ತಿಂಗಳಲ್ಲಿ ಅಪಾರ ಪ್ರಮಾಣದ ‘ಕಾರಣ ತಿಳಿಯದ’ ಸಾವು ಸಂಭವಿಸಿದ್ದು ಅವುಗಳು ನಿಸ್ಸಂಶಯವಾಗಿಯೂ ನಿಜವಾದ ಕರೊನಾ ಸಾವಿನ ಸಂಖ್ಯೆಯನ್ನು ಮುಚ್ಚಿಡುವ ತಂತ್ರವಾಗಿದೆ ಎಂದು ಚೀನಾದ ವೈದ್ಯರೊಬ್ಬರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net