ಹರ್ದೀಪ್​ ಸಿಂಗ್​ ನಿಜ್ಜರ್​ ಹತ್ಯೆಯಲ್ಲಿ ಚೀನಾ ಕೈವಾಡ!

Hardeep Singh Nijjar
Published on

ನ್ಯೂಯಾರ್ಕ್​: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್​ ಸಿಂಗ್​ ನಿಜ್ಜರ್​ ಹತ್ಯೆಯಲ್ಲಿ ಚೀನಾದ ಕಮ್ಯುನಿಸ್ಟ್​ ಪಕ್ಷದ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಚೀನಾ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಸ್ವತಂತ್ರ ಬ್ಲಾಗರ್​ ಆಗಿರುವ ಜೆನ್ನಿಫರ್​ ಝೆಂಗ್​, ಚೀನಾದ ಕಮ್ಯುನಿಸ್ಟ್​ ಪದ ಏಜೆಂಟ್​ಗಳೇ ನಿಜ್ಜರನ್ನು ಕೊಂದಿದ್ದಾರೆ. ಭಾರತ ಮತ್ತು ಪಾಶ್ಚಿಮಾತ್ಯ ದೇಶಗಳ ಸಂಬಂಧವನ್ನು ಹದಗೆಡಿಸಲು ಚೀನಾ ಇಂತಹ ಕ್ರಮ ಕೈಗೊಂಡಿದೆ ಎಂದು ಬಹಿರಂಗಪಡಿಸಿದ್ದಾರೆ.

ಕೆನಡಾದಲ್ಲಿ ವಾಸಿಸುತ್ತಿರುವ ಚೀನಾದ ಬರಹಗಾರ ಮತ್ತು ಯೂಟ್ಯೂಬರ್​ ಲಾವೊ ಡೆಂಗ್​ ಈ ವಿಷಯಗಳನ್ನು ತನಗೆ ತಿಳಿಸಿದ್ದಾನೆ ಎಂದು ಪ್ರಸ್ತುತ ಅಮೆರಿಕದಲ್ಲಿ ವಾಸಿಸುತ್ತಿರುವ ಜೆನ್ನಿಫರ್​ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

ಕೆನಡಾದಲ್ಲಿ ಹರ್ದೀಪ್​ ಸಿಂಗ್​ ನಿಜ್ಜರ್​ನನ್ನು ಕೊಲ್ಲುವ ಮೊದಲು ಚೀನಾದ ಉನ್ನತ ಅಧಿಕಾರಿಯೊಬ್ಬರು ಅಮೆರಿಕದ ಸಿಯಾಟಲ್​ಗೆ ಬಂದಿದ್ದರು. ಸಿಯಾಟಲ್​ನಲ್ಲಿ ರಹಸ್ಯ ಸಭೆ ನಡೆಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಜೂ. 18ರಂದು ಚೀನಾದ ಏಜೆಂಟರು ಶಸಾಸಗಳೊಂದಿಗೆ ನಿಜ್ಜರ್​ ಅವರನ್ನು ಬೆನ್ನಟ್ಟಿ ಹತ್ಯೆ ಮಾಡಿದ್ದಾರೆ. ನಂತರ ಭಾರತದ ಮೇಲೆ ಶಂಕೆ ಮೂಡಿಸಲು ಟನಾ ಸ್ಥಳದಲ್ಲಿ ದಾಳಿಕೋರರು ಭಾರತದ ಭಾಷಾ ಉಚ್ಚಾರಣೆಯೊಂದಿಗೆ ಇಂಗ್ಲಿಷ್​ ಮಾತನಾಡಿದ್ದಾರೆ ಎಂದು ಜೆನ್ನಿರ್​ ಆರೋಪಿಸಿದ್ದಾರೆ. ಜೆನ್ನಿಫರ್​ ಅವರ ಆರೋಪಕ್ಕೆ ಚೀನಾ ಇನ್ನೂ ಪ್ರತಿಕ್ರಿಯಿಸಿಲ್ಲ.

ಕಳೆದ ಜೂ. 18ರಂದು ಕೆನಡಾದ ಬ್ರಿಟಿಷ್​ ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರದ ಪಾರ್ಕಿಂಗ್​ ಸ್ಥಳದಲ್ಲಿ ನಿಜ್ಜರ್​ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಜಿ&20 ಶೃಂಗಸಭೆಯ ನಂತರ ಕೆನಡಾದ ಪ್ರಧಾನಿ ಜಸ್ಟಿನ್​ ಟ್ರುಡೊ ಅವರು, ನಿಜ್ಜರ್​ ಹತ್ಯೆಯಲ್ಲಿ ಭಾರತೀಯ ಏಜೆಂಟ್​ಗಳ ಕೈವಾಡ ಇದೆ ಎಂದು ಆರೋಪಿಸಿದ್ದರು. ಇದು ಉಭಯ ದೇಶಗಳ ನಡುವೆ ತೀವ್ರ ಉದ್ವಿಗ್ನತೆಗೆ ಕಾರಣವಾಗಿದೆ. ಕೆನಡಾ ಪ್ರಧಾನಿ ಮಾಡಿದ ಆರೋಪಗಳನ್ನು ಭಾರತ ನಿರಾಕರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net