ಹಾಂಕಾಂಗ್​ ಯುವಕರಿಗೆ ರಾಷ್ಟ್ರಭಕ್ತಿಯ ಪಾಠ ಹೇಳ ಹೊರಟ ಚೀನಾ

hong kong
Published on

ನವದೆಹಲಿ: ತನ್ನ ಆಡಳಿತದ ವ್ಯಾಪ್ತಿಗೆ ಒಳಪಟ್ಟಿರುವ ಹಾಂಕಾಂಗ್​ನಲ್ಲಿ ಕಠೋರವಾದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿದ ನಂತರದಲ್ಲಿ ಚೀನಾ ಹಾಂಕಾಂಗ್​ ಯುವಕರಿಗೆ ರಾಷ್ಟ್ರಭಕ್ತಿಯ ಪಾಠ ಮಾಡಲು ಮುಂದಾಗಿದೆ. ಇದಕ್ಕಾಗಿ ಅದು ರಾಷ್ಟ್ರೀಯ ಭದ್ರತಾ ಶಿಕ್ಷಣ ಎಂಬ ಸಂಸ್ಥೆಯನ್ನು ಶೆಂಜೆನ್​ನಲ್ಲಿ ತೆರೆದಿದ್ದು, ಇಲ್ಲಿ ರಾಷ್ಟ್ರಭಕ್ತಿಯ ಪಾಠ ಮಾಡಲಿದೆ.

ಶಿಕ್ಷಣದ ಮೂಲಕ ಹಾಂಕಾಂಗ್​ ಮತ್ತು ಮಕಾವ್​ನ ಯುವಕರಲ್ಲಿ ಸಂವಿಧಾನಿಕ ಮತ್ತು ರಾಷ್ಟ್ರೀಯ ಜಾಗೃತಿ ಮೂಡಿಸುವುದು ಈ ಸಂಸ್ಥೆಯ ಉದ್ದೇಶವಾಗಿರುವುದಾಗಿ ಚೀನಾ ಹೇಳಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಈ ಕೇಂದ್ರದ ಅಧಿಕಾರಿ ಹಾಗೂ ಚೀನಾ ಕಮ್ಯುನಿಸ್ಟ್​ ಪಾರ್ಟಿಯ ಡ್ಯು ಲಿಂಗ್​, ಈ ಕೇಂದ್ರದಲ್ಲಿ ಹಾಂಕಾಂಗ್​ ಮತ್ತು ಮಕಾವ್​ ಯುವಕರಲ್ಲಿ ರಾಷ್ಟ್ರೀಯ ಗುರುತು ಮತ್ತು ದೇಶಭಕ್ತಿಯ ಸ್ಫೂರ್ತಿಯನ್ನು ಸೃಜಿಸಲಾಗುವುದು ಎಂದು ಹೇಳಿದ್ದಾರೆ.

ಹಾಂಕಾಂಗ್​ನಲ್ಲಿ ಚೀನಾ ವಿರೋಧಿ ಪ್ರತಿಭಟನೆಗಳು ಹೆಚ್ಚಾಗಲಾರಂಭಿಸಿವೆ. ಇದು ಚೀನಾದ ನಾಯಕತ್ವವನ್ನು ಕಂಗೆಡೆಸಿದೆ. ರಾಷ್ಟ್ರೀಯ ಭದ್ರತಾ ಕುರಿತ ಶಿಕ್ಷಣ ಇಲ್ಲದಿರುವುದೇ ಸರ್ಕಾರಿ ವಿರೋಧಿ ಪ್ರತಿಭಟನೆಗಳು, ದಂಗೆ ಮತ್ತು ಸಾಮಾಜಿಕ ಹಿಂಸಾಚಾರಗಳು ಹೆಚ್ಚಾಗಲು ಕಾರಣ ಎಂಬುದು ಚೀನಾದ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅದು ಹಾಂಕಾಂಗ್​ನ ಮುಖ್ಯಕಾರ್ಯಕಾರಿ ಅಧಿಕಾರಿಗೆ ಹಾಂಕಾಂಗ್​ ನಿವಾಸಿಗಳಿಗೆ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಜಾಗೃತಿ ಮೂಡಿಸುವುದನ್ನು ಕಡ್ಡಾಯಗೊಳಿಸಿದೆ.

1949ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಚೀನಾ ತನ್ನ ಸಾರ್ವಜನಿಕ ಸಂಸ್ಥೆಗಳ ಮೂಲಕ ಮಾವೋ ತತ್ವಗಳನ್ನೇ ಬೋಧಿಸುತ್ತಿದೆ. 1989ರಲ್ಲಿ ದಮನಕಾರಿ ಕಮ್ಯುನಿಸ್ಟ್ ಆಡಳಿತವನ್ನು ಕೊನೆಗಾಣಿಸಿ, ಸ್ವಾಂತ್ರ್ಯವನ್ನು ನೀಡುವಂತೆ ಆಗ್ರಹಿಸಿ ಟಿಯಾನನ್​ಮೆನ್​ ಸ್ಕ್ವೇರ್​ನಲ್ಲಿ ಭಾರಿ ಪ್ರತಿಭಟನೆಗಳು ನಡೆದ ನಂತರದಲ್ಲಿ ರಾಷ್ಟ್ರಭಕ್ತಿಯನ್ನು ಬೋಧಿಸುವ ಅವಶ್ಯಕತೆಯನ್ನು ಚೀನಾ ಮನಗಂಡಿತು. ಇದಕ್ಕಾಗಿ ಅದು ತನ್ನ ರಾಷ್ಟ್ರದಲ್ಲಿ ರಾಷ್ಟ್ರಭಕ್ತಿಯನ್ನು ಕಲಿಸಲು ಆರಂಭಿಸಿತ್ತು.

ಇದರಿಂದಾಗಿ ದೇಶಕ್ಕೆ ನಿಯತ್ತಾಗಿರುವ ಯುವಪೀಳಿಗೆ ಸೃಷ್ಟಿಯಾಗಿದ್ದಾರೆ. ಇದೀಗ ಇದೇ ಮಾದರಿಯನ್ನು ಹಾಂಕಾಂಗ್​ನಲ್ಲೂ ಪುನರಾವರ್ತಿಸಲು ಚೀನಾ ಮುಂದಾಗಿರುವುದಾಗಿ ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net