

ನಿಲಂಬೂರು: ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರು ವ್ಯಾಪ್ತಿಯಲ್ಲಿ ಮಹಿಳೆಯರ ಮೇಲೆ ಖಾರಾಪುಡಿ ದಾಳಿಗಳು ದಿನೇದಿನೆ ಹೆಚ್ಚಾಗುತ್ತಿದೆ. ಈ ನಿಗೂಢ ದಾಳಿಯ ರಹಸ್ಯ ಭೇದಿಸುವುದು ಪೊಲೀಸರಿಗೆ ಸದ್ಯ ತಲೆನೋವಿನ ವಿಚಾರವಾಗಿದೆ.
ಮಹಿಳೆಯರ ಮೇಲೆ ಖಾರಾ ಪುಡಿ ಎರಚಿ ಹಲ್ಲೆ ನಡೆಸಿ ಪರಾರಿಯಾಗುತ್ತಿರುವ ದುಷ್ಕರ್ಮಿಗಳು ಯಾರು? ಯಾಕೆ ಹಾಗೆ ಮಾಡುತ್ತಿದ್ದಾರೆ ಎಂಬುದು ನಿಗೂಢವಾಗಿರುವ ಕಾರಣ ಈ ಪ್ರದೇಶಗಳ ಮಹಿಳೆಯರಲ್ಲಿ ಆತಂಕ ಹೆಚ್ಚಾಗಿದೆ. ಇತ್ತೀಚಿನ ದಾಳಿ ಮಂಗಳವಾರ ರಾತ್ರಿ 7.30ಕ್ಕೆ ವರದಿಯಾಗಿದ್ದು ವೆಟ್ಟೆಕ್ಕೋಡ್ ನಿವಾಸಿ ಕಬೀರ್ ಅವರ ಪತ್ನಿ ಅನ್ಸೀರಾ ಮೇಲೆ ನಡೆದಿತ್ತು. ಇದೇ ರೀತಿ ಮೂರು ದಿನಗಳ ಹಿಂದೆ ಉನ್ನಿಕ್ಕುಲಂ ನಿವಾಸಿ ಸುರೇಶ್ ಅವರ ಪತ್ನಿ ದಿವ್ಯಾ ಮೇಲೂ ಇದೇ ಹೊತ್ತಿಗೆ ದಾಳಿ ನಡೆದಿತ್ತು. ಇಬ್ಬರೂ ಮೇಲೂ ಅವರವರ ಮನೆಯ ಸಮೀಪವೇ ದಾಳಿ ನಡೆದಿದೆ.
ಮನೆಯಿಂದ ಹೊರಗೆ ಇರುವ ಸ್ನಾನದ ಗೃಹದಿಂದ ರಾತ್ರಿ ಸ್ನಾನ ಮುಗಿಸಿ ಮನೆಯೊಳಕ್ಕೆ ಪ್ರವೇಶಿಸುವ ಹೊತ್ತಿನಲ್ಲಿ ಅನ್ಸೀರಾಳ ಮುಖದ ಮೇಲೆ ಖಾರಾಪುಡಿ ದಾಳಿ ನಡೆದಿದೆ. ಖಾರಾಪುಡಿ ಎರಚಿದ ವ್ಯಕ್ತಿ ಆಕೆಯನ್ನು ನೆಲಕ್ಕೆ ಕೆಡವಿ ಒದ್ದಿದ್ದಾನೆ. ಆಗ ಆಕೆ ಕಿರುಚಿದ್ದರಿಂದ ಸುತ್ತಮುತ್ತಲಿನವರು ಅಲ್ಲಿ ಸೇರುವ ಹೊತ್ತಿಗೆ ಆತ ಪರಾರಿಯಾಗಿದ್ದ. ದಾಳಿಗೂ ಮೂರು ದಿನಗಳ ಹಿಂದೆ ಬಾತ್ ರೂಮ್ ಬಳಿ ನಿಗೂಢವಾಗಿ ಖಾರಾಪುಡಿ ಚೆಲ್ಲಿರುವುದು ಕಂಡುಬಂದಿತ್ತು ಎಂದು ಕಬೀರ್ ಪೊಲೀಸರಿಗೆ ತಿಳಿಸಿದ್ದಾರೆ. ಇದರಂತೆ, ನಿಲಂಬೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಸ್ವಿಗ್ಗಿಯಲ್ಲಿ 1,100 ಸಿಬ್ಬಂದಿಗೆ ಕತ್ತರಿ
ಇದೇ ರೀತಿ, ಅಮರಂಬಲಂ ಉನ್ನಿಕುಲಂನಲ್ಲಿ ಸುರೇಶ್ ಎಂಬುವವರ ಪತ್ನಿ ದಿವ್ಯಾ ಮೇಲೆ ನಡೆದ ದಾಳಿಗೂ ಈ ದಾಳಿಗೂ ಸಾಮ್ಯತೆಗಳಿವೆ. ದಿವ್ಯಾ ಅಡುಗೆ ಕೋಣೆಯಲ್ಲಿದ್ದಾಗ ತೆಂಗಿನ ತೋಟದ ಬಳಿ ಲೈಟ್ ಕಂಡು ಹೊರಗೆ ಬಂದ ವೇಳೆ ಖಾರಾಪುಡಿ ಮುಖಕ್ಕೆ ಎರಚಿ ತಲೆಗೆ ಹಲ್ಲೆ ನಡೆಸಿ ದಾಳಿ ನಡೆಸಲಾಗಿದೆ. ಇದಕ್ಕೂ ಎರಡು ವಾರ ಮೊದಲು ದಿವ್ಯಾ ಮೇಲೆ ಯಾರೋ ಖಾರಾ ಪುಡಿ ಎರಚಿದ್ದರು. ಅದು ಯಾರು ಎಂದು ನೋಡುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದರು ಎಂದು ಸುರೇಶ್ ಪೊಲೀಸರಿಗೆ ತಿಳಿಸಿದ್ದಾರೆ. ಪೂಕೊಟ್ಟುಪಾದಂ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಶುರುಮಾಡಿದ್ದಾರೆ.
ಈ ದಾಳಿ ನಡೆಸುತ್ತಿರುವ ವ್ಯಕ್ತಿ ಯಾರು? ಯಾಕಾಗಿ ಮಾಡುತ್ತಿದ್ದಾನೆ ಎಂಬುದು ಗೊತ್ತಿಲ್ಲ. ಈ ಪ್ರಕರಣದಲ್ಲಿ ಆರೋಪಿ ಪತ್ತೆಗೆ ಯಾವುದೇ ಸುಳಿವು ಪೊಲೀಸರಿಗೆ ಸಿಗದ ಕಾರಣ ಹೆಚ್ಚಿನ ನಿಗಾವಹಿಸಿ ಪಹರೆ ಶುರುಮಾಡಿದ್ದಾರೆ. (ಏಜೆನ್ಸೀಸ್)