

ಸೊರಬ: ಮಕ್ಕಳಲ್ಲಿ ಸೃಜನಾತ್ಮಕ ವ್ಯಕ್ತಿತ್ವ ಮತ್ತು ಸಂಸ್ಕಾರ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ರೋಟರಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಜ್ಞಾನೇಶ್ ಹೇಳಿದರು.
ತಾಲೂಕಿನ ಉಳವಿ ಶ್ರೀ ರಾಘವೇಂದ್ರ ಸ್ವಾಮಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಿಕ್ಕ ಅವಕಾಶವನ್ನು ಉತ್ತಮ ರೀತಿ ಬಳಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಕಲಿಕೆ ಜತೆಗೆ ಸಾಂಸ್ಕೃತಿಕ ಮನೋವಿಕಾಸಕ್ಕೆ ಪೂರಕ ಶಿಕ್ಷಣ ನೀಡುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು. ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರದಷ್ಟೇ ಪಾಲಕರ ಪಾತ್ರವೂ ಮುಖ್ಯವಾಗಿರುತ್ತದೆ. ಮಕ್ಕಳಿಗೆ ಯಾವುದೇ ರೀತಿಯ ಒತ್ತಡದ ಶಿಕ್ಷಣಕ್ಕೆ ಒತ್ತು ನೀಡದೆ ಆಟೋಟಗಳಲ್ಲಿ ಭಾಗವಹಿಸುವ ಪ್ರೇರಣೆಯ ಶಿಕ್ಷಣ ನೀಡಿದಾಗ ಬೌದ್ಧಿಕ ವಿಕಾಸವಾಗಲು ಸಾಧ್ಯ ಎಂದು ತಿಳಿಸಿದರು.
ದೂಗೂರು ಗ್ರಾಪಂ ಅಧ್ಯಕ್ಷ ಫಯಾಜ್ ಅಹ್ಮದ್ ಮಾತನಾಡಿ, ಶಾಲೆ ಮತ್ತು ವಿದ್ಯಾರ್ಥಿಗಳ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ ಎಂದರು. ಶಿಕ್ಷಣ ಇಲಾಖೆಯ ಸಿದ್ದನ ಗೌಡ ಪಾಟೀಲ್, ಎಸ್‌ಡಿಎಂಸಿ ನಯಾಜ್ ಅಹ್ಮದ್, ಸಂದೀಪ್, ಯೋಧ ಪ್ರಶಾಂತ್ ಕೈಸೋಡಿ, ರವಿ, ಶಿಕ್ಷಕರಾದ ಸನ್ಮತಿ, ಶಶಿರೇಖಾ, ಮಮತಾ, ಹನುಮಂತಪ್ಪ, ಹೇಮಾವತಿ, ಮಧುರ ಚಕ್ರಸಾಲಿ, ಕಮಲಾಕರ ನಾಯ್ಕ ಇತರರಿದ್ದರು.