

ಬೆಂಗಳೂರು: ‘ತಂದೆ-ತಾಯಿಗಿಂತ ದೊಡ್ಡ ದೇವರಿಲ್ಲ. ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿಸಲು ಶ್ರಮ ಪಟ್ಟ ಪಾಲಕರ ಋಣವನ್ನು 100 ವರ್ಷವಾದರೂ ತೀರಿಸಲು ಸಾಧ್ಯವಿಲ್ಲ. ಹೀಗಿರುವಾಗ ಪ್ರೌಢಾವಸ್ಥೆ ತಲುಪಿದ ಮಾತ್ರಕ್ಕೆ ತಾವು ಬಯಸಿದ ಸಂಗಾತಿಯನ್ನು ಮದುವೆಯಾಗುವ ಮಕ್ಕಳು ಹೆತ್ತವರು ಮಾಡಿದ ತ್ಯಾಗವನ್ನು ಒಮ್ಮೆ ನೆನೆಯಬೇಕು’.
ಹಾಸ್ಟೆಲ್ನಲ್ಲಿದ್ದುಕೊಂಡು ಇಂಜಿನಿಯರಿಂಗ್ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಕಾಲೇಜಿನ ವ್ಯಾನ್ ಚಾಲಕನನ್ನು ಪ್ರೀತಿಸಿ, ಮದುವೆಯಾಗಿ ಆತನೊಂದಿಗೆ ತೆರಳಿದ್ದ ಪ್ರಕರಣದಲ್ಲಿ ವಿದ್ಯಾರ್ಥಿನಿಯ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಹೇಳಿದ ಕಾಳಜಿಯ ಮಾತುಗಳಿವು.
ಮಗಳನ್ನು ವ್ಯಾನ್ ಚಾಲಕ ಪುಸಲಾಯಿಸಿ ಮದುವೆಯಾಗಿದ್ದು, ಆಕೆಯನ್ನು ಅಕ್ರಮ ಬಂಧನದಲ್ಲಿರಿಸಿದ್ದಾನೆ. ಆದ್ದರಿಂದ, ಮಗಳನ್ನು ನಮ್ಮ ವಶಕ್ಕೆ ಒಪ್ಪಿಸಬೇಕೆಂದು ಕೋರಿ ಮಂಡ್ಯದ ಮಳವಳ್ಳಿ ತಾಲೂಕಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಪೀಠ, ಮಕ್ಕಳಿಗಾಗಿ ಪಾಲಕರು ಮಾಡುವ ತ್ಯಾಗದ ಬಗ್ಗೆ ಎಳೆ ಎಳೆಯಾಗಿ ವಿವರಿಸಿತು.
ಇಂದು ಕೊಟ್ಟಿದ್ದೇ ಮುಂದೆ ಪಡೆಯುತ್ತೇವೆ: ಮಕ್ಕಳು ದೇಶದ ಅತ್ಯುನ್ನತ ಸಂಪತ್ತು ಎನ್ನುವ ವಿಚಾರವನ್ನು ಹೆತ್ತವರು ಅರ್ಥೈಸಿಕೊಳ್ಳಬೇಕು. ಅಂತೆಯೇ ತಂದೆ-ತಾಯಿ ಇಲ್ಲದಿದ್ದರೆ ಭೂಮಿಗೆ ಬರಲಾಗುತ್ತಿರಲಿಲ್ಲ ಎಂಬ ವಿಚಾರವನ್ನು ಮಕ್ಕಳೂ ಅರ್ಥ ಮಾಡಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಬದುಕು ರೂಪಿಸಿಕೊಡಲು ಅವರು ಏನೆಲ್ಲ ತ್ಯಾಗ ಮಾಡಿದ್ದಾರೆ ಎಂಬ ಬಗ್ಗೆ ಯೋಚಿಸಬೇಕು. ಜೀವನ ಎನ್ನುವುದು ಪ್ರತಿಕ್ರಿಯೆ, ಪ್ರತಿಬಿಂಬ ಹಾಗೂ ಪ್ರತಿಧ್ವನಿಯಂತೆ ಎನ್ನುವುದನ್ನು ಮಕ್ಕಳು ಮರೆಯಬಾರದು. ಮಕ್ಕಳು ಇಂದು ಹೆತ್ತವರಿಗೆ ಏನು ನೀಡುತ್ತಾರೆ, ಅದನ್ನೇ ಮುಂದೆ ಅವರ ಮಕ್ಕಳಿಂದ ಪಡೆದುಕೊಳ್ಳುತ್ತಾರೆ ಎಂದು ನ್ಯಾಯಪೀಠ ಮಾರ್ವಿುಕವಾಗಿ ಹೇಳಿದೆ.
ಪ್ರಕರಣವೇನು?: ಅರ್ಜಿದಾರರ ಮಗಳು ಮಂಡ್ಯದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದ ಆಕೆ ವ್ಯಾನ್ ಮೂಲಕ ಕಾಲೇಜಿಗೆ ತೆರಳುತ್ತಿದ್ದಳು. ಅಲ್ಲಿ ವ್ಯಾನ್ ಚಾಲಕನ ಪರಿಚಯವಾಗಿ ಆತನನ್ನು ಪ್ರೀತಿಸಿದ್ದಳು. ಬಳಿಕ ಪಾಲಕರಿಗೆ ತಿಳಿಸದೆಯೆ ಚಾಲಕನೊಂದಿಗೆ ತೆರಳಿ ಮದುವೆಯಾಗಿದ್ದಳು. ಈ ವಿಚಾರ ತಿಳಿದು ಆಕೆಯ ತಂದೆ ಮಂಡ್ಯದ ಕೆ.ಎಂ.ದೊಡ್ಡಿ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಮೇ 17ರಂದು ಯುವತಿ ಮತ್ತು ಆಕೆ ಪತಿಯನ್ನು ಠಾಣೆಗೆ ಕರೆಸಿದ್ದರು. ಈ ವೇಳೆ ಮಗಳೊಂದಿಗೆ ಸಮಾಲೋಚಿಸಲು ಪಾಲಕರಿಗೆ ಅವಕಾಶ ಕಲ್ಪಿಸದ ಪೊಲೀಸರು ಆಕೆಯನ್ನು ಪತಿಯೊಂದಿಗೆ ಕಳುಹಿಸಿಕೊಟ್ಟಿದ್ದರು. ಇದರಿಂದ, ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೇಬಿಯಸ್ ಕಾರ್ಪಸ್ ಅರ್ಜಿ ವಜಾ: ನ್ಯಾಯಾಲಯದ ನಿರ್ದೇಶನದಂತೆ ಅರ್ಜಿದಾರರ ಮಗಳು ಹಾಗೂ ಆಕೆಯ ಪತಿಯನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಯುವತಿ ತಾನು ಪ್ರೌಢಾವಸ್ಥಳಾಗಿದ್ದು, ನನ್ನನ್ನು ಯಾರೂ ಅಕ್ರಮ ಬಂಧನದಲ್ಲಿರಿಸಿಲ್ಲ. ಸ್ವಇಚ್ಛೆಯಿಂದಲೇ ಮದುವೆಯಾಗಿದ್ದು, ಪತಿಯೊಂದಿಗೇ ಬಾಳುತ್ತೇನೆ ಎಂದು ಕೋರ್ಟ್ಗೆ ತಿಳಿಸಿದ್ದಳು. ಪತಿ ಸಹ ಹೆಂಡತಿಯ ಕಣ್ಣಿನಲ್ಲಿ ಒಂದು ಹನಿ ಕಣ್ಣೀರು ಬರದಂತೆ ನೋಡಿಕೊಳ್ಳುತ್ತೇನೆ. ಆಕೆಯನ್ನು ಇಂಜಿನಿಯರ್ ಪದವಿ ಓದಿಸುತ್ತೇನೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದ. ಅರ್ಜಿದಾರರ ಮಗಳಿಗೆ 19 ವರ್ಷವಾಗಿದ್ದು, ಪತಿಯೊಂದಿಗೇ ಜೀವಿಸುವುದಾಗಿ ತಿಳಿಸಿದ್ದಾಳೆ. ಜತೆಗೆ ತನ್ನನ್ನು ಅಕ್ರಮ ಬಂಧನದಲ್ಲಿರಿಸಿಲ್ಲ ಎಂದೂ ಹೇಳಿದ್ದಾಳೆ. ಪ್ರಾಪ್ತ ವಯಸ್ಕರು ತಾವು ಬಯಸಿದ ವ್ಯಕ್ತಿಯೊಂದಿಗೆ ಜೀವಿಸಲು ಸಂವಿಧಾನವೇ ಮುಕ್ತ ಅವಕಾಶ ಕಲ್ಪಿಸಿದೆ. ಆದ್ದರಿಂದ, ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಟ್ಟ ಪೀಠ ಯುವತಿಯನ್ನು ಪತಿಯೊಂದಿಗೆ ತೆರಳಲು ಅನುಮತಿ ನೀಡಿತಲ್ಲದೆ, ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿತು.
ಮನುಸ್ಮೃತಿ ಉಲ್ಲೇಖ: ಹೆತ್ತವರಿಗಿಂತ ದೊಡ್ಡ ದೇವರಿಲ್ಲ, ಸಹಾನುಭೂತಿಗಿಂತ ದೊಡ್ಡ ಧರ್ಮವಿಲ್ಲ, ಕೋಪಕ್ಕಿಂತ ದೊಡ್ಡ ಶತ್ರು ಇಲ್ಲ. ಖ್ಯಾತಿಗಿಂತ ದೊಡ್ಡ ಆಸ್ತಿ ಇಲ್ಲ. ಮಕ್ಕಳನ್ನು ಸಾಕಿ, ಸಲುಹಿ ದೊಡ್ಡವರನ್ನಾಗಿ ಮಾಡಲು ತಂದೆ-ತಾಯಿ ಪಟ್ಟ ಶ್ರಮದ ಋಣವನ್ನು ನೂರು ವರ್ಷವಾದರೂ ತೀರಿಸಲು ಸಾಧ್ಯವಿಲ್ಲ ಎಂದು ಮನುಸ್ಮೃತಿ ಹೇಳುತ್ತದೆ. ಆದ್ದರಿಂದ ತಂದೆ-ತಾಯಿ, ಗುರು-ಹಿರಿಯರಿಗೆ ಇಷ್ಟವಾಗುವ ಕೆಲಸಗಳನ್ನೇ ಮಕ್ಕಳು ಮಾಡಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.