

ನವದೆಹಲಿ: ನವೆಂಬರ್ ಮಧ್ಯ ಭಾಗದಲ್ಲಿ ಮಕ್ಕಳ ಲಸಿಕೆ ಅಭಿಯಾನ ಆರಂಭವಾಗುವ ಸಾಧ್ಯತೆಯಿದೆ. ರೋಗನಿರೋಧಕ ಶಕ್ತಿ ದುರ್ಬಲವಾಗಿರುವ ಮಕ್ಕಳಿಗೆ ಲಸಿಕೆ ನೀಡಿಕೆಯಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೀರ್ಘಕಾಲದ ವ್ಯಾಧಿ, ಅಥವಾ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಮೊದಲು ಲಸಿಕೆ ನೀಡಲಾಗುತ್ತದೆ. ಆದ್ಯತೆಗೆ ಅರ್ಹವಾಗುವ ರೋಗಗಳ ಪಟ್ಟಿ ಮೂರು ವಾರಗಳಲ್ಲಿ ಸಿದ್ಧವಾಗಲಿದೆ ಎಂದಿದ್ದಾರೆ. ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಯನ್ನು 2-18 ವರ್ಷದ ಮಕ್ಕಳಿಗೆ ನೀಡಲು ಕರೊನಾ ಕುರಿತ ವಿಷಯ ತಜ್ಞರ ಸಮಿತಿ (ಎಸ್ಇಸಿ) ಮಂಗಳವಾರ ಅನುಮೋದನೆ ನೀಡಿತ್ತು. ಎಸ್ಇಸಿ ಶಿಫಾರಸುಗಳನ್ನು ಭಾರತದ ಔಷಧಗಳ ಮಹಾ ನಿಯಂತ್ರಕರು (ಡಿಸಿಜಿಐ) ಪರಿಶೀಲಿಸುತ್ತಿದೆ. ಡಿಸಿಜಿಐ ಅನುಮೋದನೆ ನೀಡಿದ ನಂತರ ಲಸಿಕೆ ಅಭಿಯಾನದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್ಟಿಎಜಿಐ) ವಿಷಯದ ಪರಿಶೀಲನೆ ನಡೆಸಲಿದೆ. ಅದು ಬಯೋಟೆಕ್ನಿಂದ ಹೆಚ್ಚುವರಿ ಮಾಹಿತಿ ಕೋರಬಹುದಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬ್ರಿಟನ್ ಪ್ರವಾಸಿಗರಿಗೆ ಕ್ವಾರಂಟೈನ್ ಇಲ್ಲ: ಭಾರತಕ್ಕೆ ಬರುವ ಬ್ರಿಟನ್ ಪ್ರವಾಸಿಗಳಿಗೆ 10 ದಿನ ಕಡ್ಡಾಯ ಕ್ವಾರಂಟೈನ್ ವಿಧಿಸುವ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬುಧವಾರ ವಾಪಸ್ ಪಡೆದಿದೆ. ಸಂಪೂರ್ಣ ಲಸಿಕೆ ಪಡೆದಿದ್ದರೂ ಬ್ರಿಟನ್ಗೆ ಆಗಮಿಸುವ ಭಾರತೀಯರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಿದ್ದಕ್ಕೆ ಪ್ರತಿಯಾಗಿ ಭಾರತ ಕೂಡ ಬ್ರಿಟನ್ ಪ್ರವಾಸಿಗರಿಗೆ ಈ ನಿಯಮ ರೂಪಿಸಿ ಅಕ್ಟೋಬರ್ 1ರಂದು ಆದೇಶ ಹೊರಡಿಸಿತ್ತು. ಬ್ರಿಟನ್ ತನ್ನ ನಿಯಮವನ್ನು ಅ. 11ರಿಂದ ಸಡಿಲಿಸಿರುವ ಹಿನ್ನೆಲೆಯಲ್ಲಿ ಆದೇಶ ವಾಪಸ್ ಪಡೆಯಲಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.
15,823 ಹೊಸ ಕೇಸ್: ಬುಧವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ಭಾರತದಲ್ಲಿ ಕರೊನಾ ವೈರಸ್ನ 15,823 ಹೊಸ ಪ್ರಕರಣಗಳು ದೃಢಪಟ್ಟಿವೆ. 226 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಅವಧಿಯಲ್ಲಿ 22,844 ಜನರು ಚೇತರಿಸಿಕೊಂಡಿದ್ದು ಇದುವರೆಗೆ ಒಟ್ಟು 3,33,42,901 ರೋಗಿಗಳು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 4,51,189ಕ್ಕೆ ತಲುಪಿದೆ. ಬುಧವಾರ ಸಂಜೆ ವರೆಗೆ 96.78 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಮುಂದಿನ ವಾರ 100 ಕೋಟಿ ಡೋಸ್ ವಿತರಣೆಯ ಗುರಿ ಸಾಧನೆ ಆಗಲಿದೆ.
ಭಾರತದಲ್ಲಿ ಶೇಕಡ 50ರಷ್ಟು ಜನಸಂಖ್ಯೆಗೆ ಕರೊನಾ ಲಸಿಕೆ ಹಾಕಲಾಗಿದೆ. ಆದರೂ ಸೋಂಕಿನ ಮೂರನೇ ಅಲೆಯ ಅಪಾಯ ಇನ್ನೂ ದೂರವಾಗಿಲ್ಲ. | ಗೀತಾ ಗೋಪಿನಾಥ್ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ