ಕಲಿಕೆಯಲ್ಲಿ ಹಿಂದುಳಿದ ರಾಜ್ಯದ ಮಕ್ಕಳು: ರಾಷ್ಟ್ರೀಯ ಸರಾಸರಿಗಿಂತ ಕುಸಿತ

Learn
Published on

ಬೆಂಗಳೂರು: ರಾಷ್ಟ್ರಿಯ ಸರಾಸರಿಗಿಂತ ರಾಜ್ಯದ ಮಕ್ಕಳ ಕಲಿಕಾ ಸಾಮರ್ಥ್ಯ ಕುಸಿದಿದೆ. ಅದರಲ್ಲಿಯೂ 9ನೇ ತರಗತಿ ವಿಭಾಗದಲ್ಲಿ ಕನಿಷ್ಠ ಪ್ರದರ್ಶನ ತೋರಿದ ಹತ್ತು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

ಸಮಗ್ರ ಅಭಿವೃದ್ಧಿಗಾಗಿ ಕಾರ್ಯಕ್ಷಮತೆ, ಜ್ಞಾನದ ಪರಿಶೀಲನೆ ಮತ್ತು ಮೌಲ್ಯವಾಪನ (ಪಿಎಆರ್‌ಎಕೆಎಚ್- ಪರಖ್) ರಾಷ್ಟ್ರೀಯ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. 3, 6 ಹಾಗೂ 9ನೇ ತರಗತಿ ಮಕ್ಕಳಿಗಾಗಿ 2024ರ ಡಿ.4ರಂದು ಸರ್ವೆ ನಡೆಸಲಾಗಿತ್ತು. ದೇಶಾದ್ಯಂತ 74,229 ಶಾಲೆಗಳ 21,15,022 ಮಕ್ಕಳನ್ನು ಸರ್ವೆಗೆ ಒಳಪಡಿಸಲಾಗಿತ್ತು. 2,70,424 ಶಿಕ್ಷಕರು ಭಾಗವಹಿಸಿದ್ದರು.

ಭಾಷೆ, ಗಣಿತ ಹಾಗೂ ಪರಿಸರ, ವಿಜ್ಞಾನ, ಸಮಾಜ ವಿಜ್ಞಾನ ಸೇರಿ ಯಾವುದೇ ವಿಷಯದಲ್ಲಿಯೂ ರಾಷ್ಟ್ರೀಯ ಸರಾಸರಿಯನ್ನು ತಲುಪಿಲ್ಲ. ಇನ್ನು ರಾಜ್ಯ ಸರ್ಕಾರಿ ಶಾಲೆಗಳಿಗೆ ಹೋಲಿಸಿದಲ್ಲಿ ಖಾಸಗಿ ಶಾಲೆಗಳು ಮುಂದಿವೆ. ಆದರೆ, ಕೇಂದ್ರ ಸರ್ಕಾರಿ ಶಾಲೆಗಳು ಹಲವು ವಿಷಯಗಳಲ್ಲಿ ರಾಷ್ಟ್ರೀಯ ಸರಾಸರಿ ತಲುಪಿವೆ ಹಾಗೂ ಅದನ್ನು ಮೀರಿದ ಸಾಧನೆಯನ್ನು ತೋರಿವೆ. ಕೇಂದ್ರ ಶಿಕ್ಷಣ ಸಚಿವಾಲಯ ನಡೆಸಿದ ರಾಷ್ಟ್ರೀಯ ಸಾಧನಾ ಸರ್ವೇಕ್ಷಣೆ ವರದಿಯಲ್ಲಿರುವ ಅಂಶಗಳು ಇವಾಗಿವೆ. ಜತೆಗೆ, ಅದರಲ್ಲೂ ಮೂರನೇ ತರಗತಿಯವರ ಕಲಿಕಾ ಮಟ್ಟವು ಕೋವಿಡ್ ಹಿಂದಿನ ಅವಧಿಗಿಂತಲೂ ಕೆಳಕ್ಕೆ ಇಳಿದಿರುವುದು ಗೊತ್ತಾಗಿದೆ.

3ನೇ ತರಗತಿ: ಭಾಷೆ, ಗಣಿತದಲ್ಲಿ ಕುಸಿತ

ಬಾಗಲಕೋಟೆ ಹಾಸನ, ಉತ್ತರಕನ್ನಡ, ಯಾದಗಿರಿಯನ್ನು ಮೂರನೇ ತರಗತಿಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಭಾಷೆ ಮತ್ತು ಗಣಿತದಲ್ಲಿ ಮೂರನೇ ತರಗತಿ ಮಕ್ಕಳ ಪ್ರದರ್ಶನ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ. ಭಾಷೆಯಲ್ಲಿ ಶೇ.60, ಗಣಿತದಲ್ಲಿ ಶೇ.57 ಕರ್ನಾಟಕದ ಪ್ರದರ್ಶನವಾಗಿದ್ದರೆ, ರಾಷ್ಟ್ರೀಯ ಸರಾಸರಿ ಕ್ರಮವಾಗಿ ಶೇ.64 ಹಾಗೂ ಶೇ.60 ಆಗಿದೆ. ಬಾಲಕ/ಬಾಲಕಿಯರು, ಗ್ರಾಮೀಣ/ನಗರ ಪ್ರದೇಶಗಳ ಮಕ್ಕಳು ಕೂಡ ಹಿಂದುಳಿದಿದ್ದಾರೆ.

6ನೇ ತರಗತಿಯೂ ಹಿಂದೆ

ಬಾಗಲಕೋಟೆ, ಬೆಳಗಾವಿ, ಬೆಂಗಳೂರು ನಗರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಉಡುಪಿ, ಉತ್ತರಕನ್ನಡ ಜಿಲ್ಲೆಯಲ್ಲಿ 6ನೇ ತರಗತಿಗೆ ಸರ್ವೆ ನಡೆಸಲಾಗಿತ್ತು. ಈ ಮಕ್ಕಳು ಕೂಡ ರಾಷ್ಟ್ರೀಯ ಸರಾಸರಿಗಿಂತ ಹಿಂದುಳಿದಿದ್ದಾರೆ. ಭಾಷೆಯಲ್ಲಿ ಶೇ.55(ರಾಷ್ಟ್ರೀಯ ಸರಾಸರಿ ಶೇ.57), ಗಣಿತದಲ್ಲಿ ಶೇ.45 (ಶೇ.46), ಪರಿಸರ ವಿಜ್ಞಾನ (ದಿ ವರ್ಲ್ಡ್ ಅರೌಂಡ್ ಅಸ್) ಶೇ.47 (ಶೇ.49) ಪ್ರದರ್ಶನ ನೀಡಿದ್ದಾರೆ. ಭಾಷೆ ವಿಚಾರದಲ್ಲಿ ಬಾಲಕಿಯರು ರಾಷ್ಟ್ರೀಯ ಸರಾಸರಿಯಾದ ಶೇ.59 ತಲುಪಿದ್ದಾರೆ.

9ನೇ ತರಗತಿ ಕಳಪೆ

ಬಾಗಲಕೋಟೆ, ಬೆಳಗಾವಿ, ಬೆಂಗಳೂರು ನಗರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 9ನೇ ತರಗತಿಗೆ ಸರ್ವೆ ನಡೆಸಲಾಗಿದೆ. ಭಾಷೆಯಲ್ಲಿ ಶೇ.51, ಗಣಿತದಲ್ಲಿ ಶೇ.33, ವಿಜ್ಞಾನದಲ್ಲಿ ಶೇ.37, ಸಮಾಜ ವಿಜ್ಞಾನದಲ್ಲಿ ಶೇ.37 ರಾಜ್ಯದ ಮಕ್ಕಳದ್ದಾಗಿದೆ. ಇದರಲ್ಲಿ ರಾಷ್ಟ್ರೀಯ ಸರಾಸರಿ ಕ್ರಮವಾಗಿ ಶೇ.54, ಶೇ.37, ಶೇ.40 ಹಾಗೂ ಶೇ.40 ಆಗಿದೆ. ಈ ತರಗತಿಯಲ್ಲಿ ಕನಿಷ್ಠ ಪ್ರದರ್ಶನ ತೋರಿದ 10 ರಾಜ್ಯಗಳಲ್ಲಿ ಕರ್ನಾಟಕ ಸೇರಿದೆ.

ಗ್ರಾಮೀಣ/ನಗರ ಅಸವಾನತೆ

ಕಲಿಕೆ ಸಾಮರ್ಥ್ಯದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಕ್ಕಳ ನಡುವೆ ಭಾರಿ ಅಸವಾನತೆ ಇರುವುದು ಸಮೀಕ್ಷೆಯಿಂದ ಬಯಲಾಗಿದೆ. ಗ್ರಾಮೀಣ ಭಾಗಗಳ 3ನೇ ತರಗತಿ ವಿದ್ಯಾರ್ಥಿಗಳು ಗಣಿತ ಮತ್ತು ಭಾಷಾ ವಿಷಯಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ನಗರ ಪ್ರದೇಶಗಳ 6 ಮತ್ತು 9ನೇ ತರಗತಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಗ್ರಾಮೀಣ ಸಹಪಾಠಿಗಳಿಗಿಂತ ಮುಂದಿದ್ದಾರೆ.

ಸಮೀಕ್ಷೆ ದತ್ತಾಂಶ (ಕರ್ನಾಟಕ)

ತರಗತಿ ಪಾಲ್ಗೊಂಡ ಶಾಲೆಗಳು ಶಿಕ್ಷಕರು ಮಕ್ಕಳು

3ನೇ ತರಗತಿ 1,359 3,543 31,666

6ನೇ ತರಗತಿ 1,298 3,696 32,419

9ನೇ ತರಗತಿ 1,562 6,022 43,783

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net