

ಬೆಂಗಳೂರು: ಯುವತಿಗಾಗಿ ಬಾಲ್ಯ ಸ್ನೇಹಿತನ ಮೇಲೆ ಹಾಲೋಬ್ರಿಕ್ಸ್ ಇಟ್ಟಿಗೆ ಎತ್ತಿಹಾಕಿ ಹತ್ಯೆಗೈದಿದ್ದ ಯುವಕನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಡುಪಿಯ ಕಿದಿಯೂರು ಮೂಲದ ದಿವೇಶ್ ಹೆಗಡೆ(೨೪) ಬಂಧಿತ. ಆರೋಪಿಯು ಸೆ.೨೧ರಂದು ಮುಂಜಾನೆ ಬಾಲ್ಯ ಸ್ನೇಹಿತ ವರುಣ್ ಕೋಟ್ಯಾನ್ (೨೪)ನನ್ನು ಹಾಲೋಬ್ರಿಕ್ಸ್ ಇಟ್ಟಿಗೆ ಎತ್ತಿ ಹಾಕಿ ಹತ್ಯೆಗೈದು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಸಂಜಯನಗರದ ಸೌಂದರ್ಯ ಪಾರ್ಕ್ ಬಳಿ ಬಂಧಿಸಲಾಗಿದೆ. ಆರೋಪಿ ಪ್ರೀತಿಸುತ್ತಿದ್ದ ಯುವತಿ ವರುಣ್ ಕೋಟ್ಯಾನ್ ಜತೆ ಹೆಚ್ಚು ಓಡಾಡುತ್ತಿದ್ದರಿಂದ ಕೋಪಗೊಂಡು ಕೃತ್ಯ ಎಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ಮೂಲದ ವರುಣ್ ಮತ್ತು ದಿವೇಶ್ ಹಾಗೂ ಯುವತಿ ಶಾಲಾ ಸ್ನೇಹಿತರಾಗಿದ್ದು, ಬೆಂಗಳೂರಿಗೆ ಬಂದು ಗೆದ್ದಲಹಳ್ಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ಮೂವರು ಒಂದು ವರ್ಷದಿಂದ ವಾಸವಾಗಿದ್ದರು. ಯುವತಿ ಹೋಟೆಲ್‌ವೊಂದರಲ್ಲಿ ಸ್ವಾಗತಕಾರಿಣಿಯಾಗಿದ್ದು, ದಿವೇಶ್, ರೆಮೋಟೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ವರುಣ್, ಬಾಗಲೂರಿನಲ್ಲಿರುವ ಸಂಸ್ಥೆಯೊಂದರಲ್ಲಿ ಸೇಫ್ಟಿ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದ. ಕೆಲ ತಿಂಗಳ ಹಿಂದೆ ಯುವತಿ ಎಂ.ಜಿ.ರಸ್ತೆ ಸಮೀಪದಲ್ಲಿರುವ ಪಿಜೆಗೆ ಸ್ಥಳಾಂತರವಾಗಿದ್ದರು.
ಆರೋಪಿ ದಿವೇಶ್, ೨ ತಿಂಗಳಿಂದ ಬಾಲ್ಯ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ. ಆದರೆ, ಆಕೆ ಬಳಿ ಹೇಳಿಕೊಂಡಿರಲಿಲ್ಲ. ಆದರೆ, ವರುಣ್ ಕೋಟ್ಯಾನ್, ಆಕೆಯ ಜತೆ ಓಡಾಡುತ್ತಿದ್ದು, ತನ್ನ ಭಾವನೆಗಳನ್ನು ಪರೋಕ್ಷವಾಗಿ ಆಕೆ ತಿಳಿಸುತ್ತಿದ್ದ. ಅದನ್ನು ತಿಳಿದ ಆರೋಪಿ, ವರುಣ್ ಜತೆ ಜಗಳವಾಡಿದ್ದಾನೆ. ಅಲ್ಲದೆ, ಈಗಾಗಲೇ ನೀನು ಒಂದು ಯುವತಿಯನ್ನು ಪ್ರೀತಿಸುತ್ತಿದ್ದು, ಆದರೂ ತನ್ನ ಸ್ನೇಹಿತೆಯ ಜತೆ ತುಂಬಾ ಸಲುಗೆಯಿಂದ ಇರುತ್ತಿಯಾ? ಎಂದು ಪ್ರಶ್ನಿಸಿದ್ದಾನೆ. ಬಳಿಕ ರೂಮ್‌ನಲ್ಲಿ ಇತರೆ ಯುವಕರು ಇಬ್ಬರಿಗೂ ಸಮಾಧಾನ ಮಾಡಿದ್ದರು.
ಬರ್ತ್ ಡೇ ಮರುದಿನವೇ ಕೊಲೆ
ಸೆ.೨೦ರಂದು ವರುಣ್ ಕೋಟ್ಯಾನ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಮೂವರು ಕೋರಮಂಗಲದಲ್ಲಿರುವ ಪಬ್‌ಗೆ ಹೋಗಿ ಪಾರ್ಟಿ ಮಾಡಿದ್ದಾರೆ. ರಾತ್ರಿ ಹೊರ ಬಂದಾಗ, ಆರೋಪಿ, ತನ್ನ ಸ್ನೇಹಿತೆಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದು, ಆಕೆ ಗಂಭೀರವಾಗಿ ಪರಿಗಣಿಸಿಲ್ಲ. ಆಮೇಲೆ ನೋಡೋಣ ಎಂದಿದ್ದಾಳೆ. ಆದರೆ, ಯುವತಿ ವರುಣ್‌ಗೆ ಸಲುಗೆಯಿಂದ ವರ್ತಿಸಿದ್ದಾಳೆ. ಬಳಿಕ ಮೂವರು ಮನೆಗೆ ಕಡೆ ಬಂದಿದ್ದು, ಯುವತಿ ತನ್ನ ಪಿಜೆಗೆ ಹೋಗಿದ್ದಾಳೆ. ಸೆ.೨೧ರಂದು ಮುಂಜಾನೆ ೮ ಗಂಟೆಗೆ ವರುಣ್ ಮತ್ತು ದಿವೇಶ್ ನಡುವೆ ಯುವತಿ ವಿಚಾರಕ್ಕೆ ಗಲಾಟೆ ಆಗಿದೆ. ಅದು ವಿಕೋಪಕ್ಕೆ ಹೋದಾಗ, ಆರೋಪಿ ದಿವೇಶ್, ವರುಣ್ ಮೇಲೆ ಹಲ್ಲೆ ನಡೆಸಿ ಕೆಳಗೆ ಬೀಳಿಸಿದ್ದಾನೆ. ಬಳಿಕ ಅಲ್ಲೇ ಇದ್ದ ಹಾಲೋಬ್ರಿಕ್ಸ್ ಇಟ್ಟಿಗೆಯನ್ನು ತಲೆ ಮೇಲೆ ಎತ್ತಿ ಹಾಕಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಇನ್ನು ಯುವತಿ ವಿಚಾರಣೆಯಲ್ಲಿ ವರುಣ್ ಮತ್ತು ದಿವೇಶ್ ತನ್ನನ್ನು ಪ್ರೀತಿಸುತ್ತಿರುವ ವಿಚಾರ ಗೊತ್ತಿಲ್ಲ. ವರುಣ್ ತನ್ನೊಂದಿಗೆ ಹೆಚ್ಚು ಸಲುಗೆಯಿಂದ ಇದ್ದ. ದಿವೇಶ್ ಹೆಚ್ಚು ಮಾತನಾಡುತ್ತಿರಲಿಲ್ಲ. ಏನನ್ನು ಹೇಳಿಕೊಳ್ಳುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.