ದಕ್ಷಿಣದಲ್ಲೂ ಹೆಚ್ಚುತ್ತಿರುವ ಬಾಲ್ಯ ವಿವಾಹ: ಬಿಗಿ ಕಾನೂನು ರೂಪಿಸಲು ಕೇಂದ್ರಕ್ಕೆ ಪತ್ರ ಅಧಿಕಾರಿಗಳಿಗೆ ಹೊಣೆ ನಿಗದಿಗೆ ಸಲಹೆ

Child Marriage
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಕಠಿಣ ಕಾನೂನಿನ ಹೊರತಾಗಿಯೂ ಬಾಲ್ಯವಿವಾಹಕ್ಕೆ ತಡೆ ಬೀಳುತ್ತಿಲ್ಲ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗಿತ್ತು. ಆದರೆ ಪ್ರಸ್ತುತ ದಕ್ಷಿಣದ ಜಿಲ್ಲೆಗಳಾದ ಮಂಡ್ಯ, ಹಾಸನ, ಶಿವಮೊಗ್ಗ, ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಜಿಲ್ಲೆಗಳಲ್ಲಿ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕಳವಳ ಮೂಡಿಸಿದೆ. ಅದರಲ್ಲೂ ಕಳೆದ ವರ್ಷ ಮಂಡ್ಯದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವ ಬಾಲ್ಯವಿವಾಹ ಅಪರಾಧಕ್ಕೆ ಶಾಶ್ವತ ಅಂಕುಶ ಹಾಕುವ ನಿಟ್ಟಿನಲ್ಲಿ ಈಗಿರುವ ಕಾನೂನನ್ನು ಇನ್ನಷ್ಟು ಬಿಗಿಗೊಳಿಸುವಂತೆ ರಾಜ್ಯ ಸರ್ಕಾರ ಕೇಂದ್ರದ ಮೊರೆ ಹೋಗಿದೆ.

ಬಾಲ್ಯ ವಿವಾಹ ತಡೆ ಕಾಯ್ದೆಯನ್ನು ಕೇಂದ್ರ ಸರ್ಕಾರ ರೂಪಿಸುತ್ತದೆ. ಅದಕ್ಕೆ ರಾಜ್ಯಗಳು ನಿಯಮಗಳನ್ನು ರೂಪಿಸಿಕೊಳ್ಳಬಹುದು. 2017ರಲ್ಲಿ ರಾಜ್ಯ ಸರ್ಕಾರ ಕೆಲ ನಿಯಮಗಳನ್ನು ಸೇರಿಸಿಕೊಂಡು ಸ್ವಲ್ಪಮಟ್ಟಿಗೆ ಕಾನೂನನ್ನು ಕಠಿಣಗೊಳಿಸಿದರೂ, ಬಾಲ್ಯ ವಿವಾಹಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅದರಲ್ಲೂ ಕರೊನಾ ಬಂದ ನಂತರ ರಾಜ್ಯದ ದಕ್ಷಿಣದ ಜಿಲ್ಲೆಗಳಲ್ಲಿಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ.

ಕೇಂದ್ರಕ್ಕೆ ಪತ್ರ ಏಕೆ?: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು 2-3 ತಿಂಗಳಿಗೊಮ್ಮೆ ವಲಯವಾರು ಸಭೆಗಳನ್ನು ನಡೆಸುತ್ತಿರುತ್ತಾರೆ. ಆ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿ, ಆ ಮೂಲಕ ಕಾನೂನು ಬಲವಾಗಲಿ ಎಂಬ ಆಶಯದಿಂದ ಕೇಂದ್ರ ಸಚಿವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಬಾಲ್ಯ ವಿವಾಹ ತಡೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿ ಪರಿಣಾಮಕಾರಿಯಾಗಿ ತಡೆಯುವ ಬತ್ತಳಿಕೆಗೆ ಬಿಗಿ ಕಾನೂನಿನ ನೆರವು ಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

ತಡೆ ಅಧಿಕಾರಿಗಳು: ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ದಿ, ಆರೋಗ್ಯ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಕಾರ್ವಿುಕ, ಪೊಲೀಸ್ ಸೇರಿದಂತೆ 10 ಇಲಾಖೆಗಳ 58,400 ಜನ ಅಧಿಕಾರಿ ಮತ್ತು ನೌಕರರನ್ನು ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಾಗಿ ನೇಮಕ ಮಾಡಿದೆ. ಈ ಅಧಿಕಾರಿಗಳು ಕೇವಲ ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗುತ್ತಿದ್ದಾರೆ. ಇವರಿಗೆ ಜವಾಬ್ದಾರಿ ಹಾಗೂ ಹೊಣೆಯನ್ನು ನಿಗದಿ ಮಾಡುವ ಸಲುವಾಗಿ ಕಾನೂನಿಗೆ ಬಲ ತುಂಬ ಬೇಕಾಗಿದೆ.

ಬಾಲ್ಯ ವಿವಾಹದಿಂದಾಗುವ ಸಮಸ್ಯೆಗಳು

  • ಮಕ್ಕಳು ಶಿಕ್ಷಣದಿಂದ ವಂಚಿತ
  • ಹೆಣ್ಣು ಮಕ್ಕಳಲ್ಲಿ ಅಪೌಷ್ಟಿಕತೆ, ಶಿಶು ಮರಣ
  • ತಾಯಂದಿರ ಮರಣ

ಜಾಗೃತಿ ಏನು?

  • 18 ತುಂಬುವ ಮೊದಲು ತಾಯಿ ಆಗಬಾರದೆಂಬ ಅರಿವು
  • 1 ಲಕ್ಷ ಹೆರಿಗೆಗೆ 113 ತಾಯಂದಿರ ಸಾವುಗಳು ಇದ್ದು, 2030ರ ವೇಳೆಗೆ ಇದನ್ನು 70ಕ್ಕೆ ಇಳಿಸಬೇಕಿದೆ.
  • 18 ವರ್ಷದೊಳಗೆ ಮದುವೆಯಾಗಿದ್ದರೆ ಅದನ್ನು ಅಸಿಂಧುವೆಂದು ಘೋಷಿಸಲು ಇರುವ ಅವಕಾಶಗಳ ಮಾಹಿತಿ

ಶಿಕ್ಷೆಯ ಪ್ರಮಾಣ: ಕಾನೂನಿನ ಪ್ರಕಾರ ಒಂದು ವರ್ಷ ಜೈಲು ಹಾಗೂ 2 ಲಕ್ಷ ರೂ.ಗಳ ತನಕ ದಂಡ ವಿಧಿಸಬಹುದಾಗಿದೆ. ಆದರೆ ಅದು ಸಾಲದು ಎಂಬ ಭಾವನೆ ಇದೆ.

ಸರ್ಕಾರದ ಕ್ರಮಗಳು: ಕೊಪ್ಪಳ ಜಿಲ್ಲೆಗೆ ಸೀಮಿತವಾಗಿ ತಂದಿದ್ದ ಸ್ಪೂರ್ತಿ ಯೋಜನೆ ಫಲ ನೀಡಿದೆ. ಅಲ್ಲಿ ಪ್ರಕರಣಗಳು ಶೂನ್ಯಕ್ಕೆ ಇಳಿದಿವೆ. ಅದನ್ನು ಈಗ ಕಲಬುರಗಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ದೂರು ದಾಖಲಿಸಲು ಸುರಕ್ಷಿಣಿ ಎಂಬ ವೆಬ್ ಪೋರ್ಟಲ್ ಬಾಗಲಕೋಟೆ ಜಿಲ್ಲೆಗೆ ಸೀಮಿತವಾಗಿತ್ತು. ಅದನ್ನು ಉಳಿದ 30 ಜಿಲ್ಲೆಗಳಿಗೂ ವಿಸ್ತರಿಸಲು ಬಜೆಟ್​ನಲ್ಲಿಯೇ ಘೋಷಣೆ ಮಾಡಲಾಗಿದೆ.

ಯಾವ ಜಿಲ್ಲೆಯಲ್ಲಿ ಹೆಚ್ಚು?: ಒಂದು ವರ್ಷದ ಅಂಕಿ-ಅಂಶಗಳ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ 71 ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಮೈಸೂರು 33, ಹಾಸನ 36, ಬೆಂಗಳೂರು 20, ಚಿಕ್ಕಬಳ್ಳಾಪುರ 24, ಚಿಕ್ಕಮಗಳೂರು 17, ಶಿವಮೊಗ್ಗ 17, ತುಮಕೂರು 11, ಬಾಗಲಕೋಟೆ 45, ವಿಜಯಪುರ 26 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾದ ಜಿಲ್ಲೆಗಳಾಗಿವೆ. ಬೀದರ್, ಉತ್ತರ ಕನ್ನಡ, ಹಾವೇರಿ, ಉಡುಪಿ, ಕೊಪ್ಪಳ ಶೂನ್ಯ ಪ್ರಕರಣಗಳಿರುವ ಜಿಲ್ಲೆಗಳು.

ಬಾಲ್ಯ ವಿವಾಹ ಈಗ ಕಡಿಮೆಯಾಗಿದೆ. ಸಾಕಷ್ಟು ಜಾಗೃತಿ ಮೂಡಿಸಿದ್ದೇವೆ. ಆದರೆ, ಇನ್ನೂ ಕಡಿಮೆ ಆಗಬೇಕಾಗಿದೆ. ಅದಕ್ಕಾಗಿ ಕಾನೂನಿಗೆ ಬಲ ತುಂಬಲು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. | ಹಾಲಪ್ಪ ಆಚಾರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಬಾಲ್ಯ ವಿವಾಹ ತಡೆಯಲ್ಲಿ ಎಫ್​ಐಆರ್ ಆಗುತ್ತದೆ, ಆದರೆ ಶಿಕ್ಷೆಯ ಪ್ರಮಾಣ ಕಡಿಮೆ ಇದೆ. ಐಪಿಸಿ 375ರ ಪ್ರಕಾರವೂ ಶಿಕ್ಷೆಯಾಗುವಂತಾಗಬೇಕು. 18 ವರ್ಷದೊಳಗಿನ ಮದುವೆಗಳನ್ನು ಅಸಿಂಧುವೆಂದು ಘೋಷಿಸಿ, ಆ ಹೆಣ್ಣು ಮಗುವಿಗೆ ಬೇರೆ ಬೇರೆ ಕೌಶಲಗಳನ್ನು ನೀಡಬೇಕು. ಮುಂದಿನ ಬದುಕಿಗೆ ದಾರಿ ತೋರಿಸಬೇಕು. | ವಾಸುದೇವ ಶರ್ಮ ಚೈಲ್ಡ್ ರೈಟ್ ಟ್ರಸ್ಟ್

10-15 ಸಾವಿರ ಕೇಸ್: ರಾಜ್ಯದಲ್ಲಿ 2018ರ ಮಾ.3 ರಿಂದ ಬಾಲ್ಯ ವಿವಾಹ ನಿಷೇಧ ಕಾನೂನು ಜಾರಿಯಲ್ಲಿದೆ. ಅಂದಿನಿಂದ ಈವರೆಗೆ ಅಧಿಕೃತ ಲೆಕ್ಕದ ಪ್ರಕಾರ 1,100 ಬಾಲ್ಯ ವಿವಾಹಗಳು ನಡೆದಿವೆ. ವಾಸ್ತವವಾಗಿ ಈ ಸಂಖ್ಯೆ 10 ರಿಂದ 15 ಸಾವಿರ ದಾಟುತ್ತದೆ ಎಂದು ಮಕ್ಕಳ ಹಕ್ಕುಗಳಿಗೆ ದುಡಿಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹೇಳುತ್ತವೆ.

ಐಪಿಸಿ ತಿದ್ದುಪಡಿ: ಐಪಿಸಿಯ 375ನೇ ವಿಧಿಗೆ ತಂದಿರುವ ತಿದ್ದುಪಡಿಯ ಪ್ರಕಾರ 18 ವರ್ಷದೊಳಗಿನ ಹೆಣ್ಣು ಮಕ್ಕಳು ಮದುವೆಯಾಗಿದ್ದರೂ ಸಹ ಅವರೊಂದಿಗೆ ಗಂಡನೇ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವೆಂದು ಗುರುತಿಸಿ ಶಿಕ್ಷೆಗೆ ಒಳಪಡಿಸಲು ಅವಕಾಶ ಇದೆ. ಅದನ್ನು ಬಾಲ್ಯ ವಿವಾಹ ಕಾಯ್ದೆಯಲ್ಲಿ ಅಳವಡಿಸಿಕೊಳ್ಳುವುದು.

  • ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿಯೂ ಹೆಚ್ಚಿದ ಪ್ರಕರಣಗಳು
  • ಅಧಿಕಾರಿಗಳನ್ನು ಹೊಣೆ ಮಾಡುವುದು, ಸ್ವಯಂ ದೂರು ದಾಖಲು, ಶಿಕ್ಷೆ ಹೆಚ್ಚಳ
  • ಐಪಿಸಿ 375 ನೇ ತಿದ್ದುಪಡಿಯನ್ನು ಕಾನೂನಿನಲ್ಲಿ ಸೇರಿಸುವುದು ಆಗಬೇಕಾಗಿದೆ
  • ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗಳಿಗೆ ಜವಾಬ್ದಾರಿ ನಿಗದಿ ಆಗಬೇಕಾಗಿದೆ
  • ನೇಮಕವಾಗಿರುವ 58,400 ಬಾಲ್ಯ ವಿವಾಹ ತಡೆ ಅಧಿಕಾರಿಗಳಿಗೆ ಹೊಣೆ

ಕಾನೂನು ತಿದ್ದುಪಡಿ ಏಕೆ?

  • ಬಾಲ್ಯ ವಿವಾಹ ನಿಷೇಧ ಕಾಯ್ದೆ ಸಾಮಾಜಿಕ ಕಾಯ್ದೆ. ಅಧಿಕಾರಿಗಳಿಗೆ ಕರ್ತವ್ಯಗಳನ್ನು ನಿಗದಿ ಮಾಡಬೇಕಾಗಿದೆ.
  • ಸ್ವಯಂ ದೂರು ದಾಖಲಿಸುವ ಅಧಿಕಾರ ಅಗತ್ಯ. ಎಫ್​ಐಆರ್ ನಂತರ ಶಿಕ್ಷೆ ಆಗುತ್ತಿಲ್ಲ, ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕಾಗಿದೆ.
  • ಸ್ಥಳೀಯ ಅಧಿಕಾರಿಗಳಿಗೆ ತಡೆಗೆ ಬೇಕಾದ ಜವಾಬ್ದಾರಿಗಳನ್ನು ನಿಗದಿಪಡಿಸಬೇಕು.
  • ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿದರೆ ಅವರಿಗೂ ಶಿಕ್ಷೆ ನೀಡುವಂತಾಗಬೇಕಾಗಿದೆ.
  • ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗಳಿಗೆ ಪ್ರಮುಖ ಜವಾಬ್ದಾರಿ ನೀಡಬೇಕಾಗಿದೆ. ಶಾಲಾ ವಿದ್ಯಾರ್ಥಿಗಳು ಬಾಲ್ಯ ವಿವಾಹವಾದರೆ ಮುಖ್ಯೋಪಾಧ್ಯಾಯರು ಗಮನಿಸುವಂತಾಗಬೇಕು. ಹೆರಿಗೆಗೆ ಬರುವವರ ವಯಸ್ಸಿನ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಗಮನ ಹರಿಸಬೇಕು.
  • ಶಿಕ್ಷೆಯ ಪ್ರಮಾಣ ಹೆಚ್ಚಾಗಬೇಕು
  • ಬಾಲ್ಯ ವಿವಾಹವಾದ ನಂತರ ವಿಚ್ಛೇದನ ಆಗುವ, ವಿಧವೆ ಆಗುವ, ದೌರ್ಜನ್ಯಕ್ಕೆ ಒಳಗಾಗುವ ಹೆಣ್ಣು ಮಕ್ಕಳಿಗೆ ಕೌಶಲ ತರಬೇತಿ ನೀಡುವುದು, ಸ್ವ ಉದ್ಯೋಗಕ್ಕೆ ಅವಕಾಶ ನೀಡುವ ಅಗತ್ಯವಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net