ಬಾಲ್ಯ ವಿವಾಹಕ್ಕೆ ಸಹಕರಿಸಿದ ಎಲ್ಲರ ಮೇಲೂ ದೂರು: ಶಿವಮೊಗ್ಗ ಜಿಲ್ಲಾಡಳಿತ ತೀರ್ಮಾನ

dc
Published on

ಶಿವಮೊಗ್ಗ: ಹಲವು ಕ್ರಮಗಳನ್ನು ಕೈಗೊಂಡರೂ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇನ್ನು ಮುಂದೆ ಬಾಲ್ಯವಿವಾಹ ನಡೆಯುವ ಕಲ್ಯಾಣ ಮಂದಿರ, ದೇವಸ್ಥಾನಗಳ ಸಮಿತಿ ಪ್ರಮುಖರು, ವಿವಾಹ ಮಾಡಿಸುವ ಅರ್ಚಕರು, ಆಮಂತ್ರಣ ಪತ್ರಿಕೆ ಮುದ್ರಿಸುವವರ ವಿರುದ್ಧವೂ ಪ್ರಕರಣ ದಾಖಲಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಶುಕ್ರವಾರ ಏರ್ಪಡಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯಲ್ಲಿ ಈ ಬಗ್ಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಇನ್ನು ಮುಂದೆ ಬಾಲ್ಯವಿವಾಹಕ್ಕೆ ಸಹಕರಿಸುವ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸುವಂತೆ ತಿಳಿಸಿದರು.

ಬಾಲ್ಯವಿವಾಹದ ಕುರಿತು ಜಾಗೃತಿ ಮೂಡಿಸಲು ಡಿಡಿಪಿಐ ಹಾಗೂ ಡಿಡಿಪಿಯು ಅವರು ಪ್ರಾಚಾರ್ಯರು, ಮುಖ್ಯ ಶಿಕ್ಷಕರನ್ನು ಕರೆಯಿಸಿ ಮಕ್ಕಳ ಕಲ್ಯಾಣ ಸಮಿತಿ ಸಹಯೋಗದಲ್ಲಿ ಸಭೆ ನಡೆಸಬೇಕು. ಮಕ್ಕಳಲ್ಲಿ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ಮೂಡಿಸಬೇಕೆಂದರು.

ಮಕ್ಕಳ ಸಹಾಯವಾಣಿ (1098)ಗೆ ತುರ್ತು ಕರೆಗಳು ಬಂದಾಗ ಚೈಲ್ಡ್‌ಲೈನ್ ಅಧಿಕಾರಿಗಳು 112 ಗೆ ಕರೆ ಮಾಡಿ ಪೊಲೀಸರ ನೆರವು ಪಡೆದು ಕಾರ್ಯಪ್ರವೃತ್ತರಾಗಬೇಕು. ಮಕ್ಕಳ ಸಹಾಯವಾಣಿ ಸೇರಿದಂತೆ ಮಕ್ಕಳ ಹಕ್ಕುಗಳು ಮತ್ತು ಮಹಿಳೆಯರ ಸಂರಕ್ಷಣೆ ಕುರಿತಾದ ಎಲ್ಲ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ಹೆಚ್ಚಿನ ಅರಿವು ಮೂಡಿಸಬೇಕೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net