

ತುಮಕೂರು: ಭೀಕರ ಅಪಘಾತವೊಂದರಲ್ಲಿ ಮೂರು ವರ್ಷದ ಮಗು ಸ್ಥಳದಲ್ಲೇ ಸಾವಿಗೀಡಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಹಾಗೂ ಆಟೋ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ನಿನ್ನೆಯಷ್ಟೇ ನಾಲ್ಕು ಅಪಘಾತಗಳಲ್ಲಿ ನಾಲ್ವರು ಬಲಿಯಾಗಿದ್ದ ತುಮಕೂರು ಜಿಲ್ಲೆಯಲ್ಲೇ ಇಂದು ಈ ಅಪಘಾತ ಸಂಭವಿಸಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗವಿಮಠ ಬಳಿ ಲಾರಿ ಹಾಗೂ ಆಟೋ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಆಟೋದಲ್ಲಿದ್ದ ಮೂರು ವರ್ಷದ ಮಗು, ಬೆಂಗಳೂರಿನ ಹೆಗ್ಗೆರೆ ಮೂಲದ ತನ್ವಿಕಾ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಬೆಂಗಳೂರು ಮೂಲದ ಶಿವರಾಜು ಕುಟುಂಬ ಕುಣಿಗಲ್ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಮದ್ದೂರು ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿಯು ಆಟೋರಿಕ್ಷಾಗೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ತನ್ವಿಕಾ ಸ್ಥಳದಲ್ಲೇ ಸಾವಿಗೀಡಾದರೆ, ಐಶ್ವರ್ಯ, ಸರಸ್ವತಿ, ಮುನಿಯಮ್ಮ, ಶಿವರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.