

ದಿಸ್ಪುರ: ಮಗು ಸತ್ತಿದೆ ಎಂದು ಆಸ್ಪತ್ರೆಯಿಂದ ಮನೆಗೆ ಕರೆತಂದು ಶವ ಸಂಸ್ಕಾರಕ್ಕೆ ಸಿದ್ಧತೆ ಮಾಡುವಾಗ, ಮಗು ಎದ್ದು ಹಾಲು ಕುಡಿದಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಹೀಗೆ ದಿಢೀರನೆ ಎದ್ದ ಮಗು ಮತ್ತೆ ಕೆಲ ಗಂಟೆಗಳಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ.
ಒಂದು ವರ್ಷದ ಮಗುವಿಗೆ ಆರೋಗ್ಯ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಅಸ್ಸಾಂನ ದಿಬ್ರುಗಢದ ಟೀ ಗಾರ್ಡನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಭಾನುವಾರದಂದು ಮಗು ಸಾವನ್ನಪ್ಪಿರುವುದಾಗಿ ಆಸ್ಪತ್ರೆಯ ಕಾಂಪೌಂಡರ್ ಹೇಳಿದ್ದಾನೆ. ಮಗುವಿನ ಶವವನ್ನು ಮನೆಗೆ ತೆಗೆದುಕೊಂಡು ಹೋವುವಂತೆ ಸೂಚಿಸಲಾಗಿದೆ. ಅದರಂತೆ ಶವದೊಂದಿಗೆ ಮನೆಗೆ ಬಂದ ಕುಟುಂಸ್ಥರು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಆರಂಭಿಸಿದ್ದಾರೆ.
ಆದರೆ ಮನೆಗೆ ಬಂದ ನಂತರ ಮಗು ಉಸಿರಾಡುತ್ತಿರುವುದು ಗೊತ್ತಾಗಿದೆ. ಎಚ್ಚರಗೊಂಡ ಮಗು, ತಾಯಿಯ ಎದೆ ಹಾಲನ್ನು ಕುಡಿದಿದೆ ಎಂದು ಕುಟುಂಬ ಹೇಳಿದೆ. ನಂತರ ಮಗುವನ್ನು ಅಸ್ಸಾಂ ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲಾಗಿದೆ. ಅಲ್ಲಿಗೆ ತಲುಪುವುದರೊಳಗೆ ಮಗು ಸಾವನ್ನಪ್ಪಿದ್ದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ಜೀವಂತವಿದ್ದ ಮಗುವನ್ನು ಸತ್ತಿದೆ ಎಂದು ವರದಿ ನೀಡಿದ್ದಕ್ಕಾಗಿ ಕಾಂಪೌಂಡರ್ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ವೈದ್ಯರ ಅನುಪಸ್ಥಿತಿಯಲ್ಲಿ ಈ ಘಟನೆ ನಡೆದಿದೆ. ಕಾಂಪೌಂಡರ್ಗೆ ಸಾವಿನ ವರದಿ ಕೊಡುವ ಅಧಿಕಾರವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್)