ದೇವೀರಮ್ಮನ ದರ್ಶನ ಪಡೆದ ಭಕ್ತಸಾಗರ

deverama
ಚಿಕ್ಕಮಗಳೂರು ತಾಲೂಕಿನ ಬಿಂಡಿಗ ಶ್ರೀ ದೇವೀರಮ್ಮನ ದರ್ಶನ ಪಡೆಯಲು ಬರಿಗಾಲಿನಲ್ಲಿ ಬೆಟ್ಟಹತ್ತುತ್ತಿರುವ ಭಕ್ತರು.
Published on

ಚಿಕ್ಕಮಗಳೂರು: ಕಗ್ಗತ್ತಲ ರಾತ್ರಿಯಲ್ಲಿ ಟಾರ್ಚ್ ಹಿಡಿದು ಬೆಟ್ಟವನ್ನು ಹತ್ತುವ ಸಾವಿರಾರು ಜನ. ಎಲ್ಲಿ ನೋಡಿದರಲ್ಲಿ ನೂಕುನುಗ್ಗಲು. ಇದೇನು ರಾತ್ರಿ ವೇಳೆ 50 ಸಾವಿರಕ್ಕೂ ಹೆಚ್ಚು ಜನ ಟ್ರೆಕ್ಕಿಂಗ್‌ಗೆ ಹೊರಟಿದ್ದಾರೆಯೇ ಎಂದುಕೊಂಡಿದ್ದರೆ ಅದು ತಪ್ಪು. ಇದೆಲ್ಲವೂ ದೇವೀರಮ್ಮ ಜಾತ್ರೋತ್ಸವದ ಝಲಕ್.
ದೀಪಾವಳಿಯ ನರಕಚತುದರ್ಶಿ ದಿನವಾದ ಭಾನುವಾರ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವೀರಮ್ಮನ ಜಾತ್ರೋತ್ಸವದಲ್ಲಿ ಕಂಡುಬಂದ ದೃಶ್ಯ ವೈಭವವಿದು. ನರಕಚತುರ್ದಶಿ ಹಿಂದಿನ ದಿನ ರಾತ್ರಿಯೇ ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜನ ಬರಿಗಾಲಿನಲ್ಲಿಯೇ ಬೆಟ್ಟವನ್ನು ಹತ್ತಿ ಬೆಳಗಿನ ಜಾವ ದೇವಿಯ ದರ್ಶನ ಪಡೆದು ಪುನೀತರಾದರು.
ಜಲಮೇಲಗಿರಿ, ಚಂದ್ರದ್ರೋಣ ಪರ್ವತ ಸೇರಿ ಹಲವು ನಾಮಧೇಯ ಹೊಂದಿರುವ ಪರ್ವತ ಶ್ರೇಣಿಯೇ ಶ್ರೀ ದೇವೀರಮ್ಮನ ಆವಾಸ ಸ್ಥಾನ. ಬೆಟ್ಟದ ತುದಿಯಲ್ಲಿ ದೇವರ ದರ್ಶನಕ್ಕೆ ನಿಂತರೆ ಆಕಾಶಕ್ಕೆ ಮೂರೇ ಗೇಣು. ಎತ್ತ ನೋಡಿದರೂ ಪಾತಾಳ. ಉತ್ತರಾಭಿಮುಖವಾಗಿರುವ ದೇವತೆ ನೋಡಿ ಧನ್ಯರಾಗುವುದೇ ಸ್ವರ್ಗ. ಇಲ್ಲಿ ಬೇಡಿಕೊಂಡಿದ್ದೆಲ್ಲವೂ ಈಡೇರುತ್ತದೆ ಎಂಬ ಕಾರಣಕ್ಕೆ ಪ್ರತಿ ವರ್ಷ ಇಲ್ಲಿನ ಜಾತ್ರೆಗೆ 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿ ದೇವಿ ದರ್ಶನ ಪಡೆಯುತ್ತಾರೆ. ಭಾನುವಾರವೂ ಸಹ 60 ಸಾವಿರಕ್ಕೂ ಅಧಿಕ ಜನ ದೇವಿಯ ದರ್ಶನ ಪಡೆದು ಧನ್ಯರಾದರು.
ಭಾನುವಾರ ಬೆಳಗಿನ ಜಾವ 1 ಗಂಟೆಯಿಂದ ಭಾನುವಾರ ಮಧ್ಯಾಹ್ನ 3 ಗಂಟೆವರೆಗೆ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ಬರಿಗಾಲಿನಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಮಧ್ಯರಾತ್ರಿ, ಬೆಳಗಿನ ಜಾವ ಎನ್ನದೆ ಮಲ್ಲೇನಹಳ್ಳಿ, ಮಾಣಿಕ್ಯಧಾರ, ಅರಿಶಿನಗುಪ್ಪೆ ಕಡೆಗಳಿಂದ ಸಾಗರೋಪಾದಿಯಲ್ಲಿ ಜನ ಬೆಟ್ಟವನ್ನು ಹತ್ತಿ ದೇವಿ ದರ್ಶನಕ್ಕೆ ದಾಂಗುಡಿ ಇಟ್ಟಿದ್ದರು.
ಮೂರು ಹಾದಿಗಳಲ್ಲಿ ಕೆಲವೊಂದು ಕಡೆ ಕ್ಲಿಷ್ಟಕರವಾದ ಜಾಗವಿದ್ದರೂ ಹೆದರಿಕೆ ಇಲ್ಲದೆ ಸಲೀಸಾಗಿ ಬೆಟ್ಟ ಹತ್ತುವ ಮಕ್ಕಳು, ಯುವಸಮೂಹ, ವೃದ್ಧರೆನ್ನದೆ ಎಲ್ಲ ಭಕ್ತ ಸಮೂಹ ಒಬ್ಬರ ಹಿಂದೊಬ್ಬರಂತೆ ಸಾಗುವಾಗ ದೂರದಿಂದ ನೋಡುವವರಿಗೆ ಭಕ್ತ ಸಮೂಹ ಇರುವೆಗಳ ಸಾಲಿನಂತೆ ಕಾಣುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net