

ಚಿಕ್ಕೋಡಿ: ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ ಹಿನ್ನೆಲೆಯಲ್ಲಿ ನದಿ ಬಿಟ್ಟು ನಾಡಿನ ಕಡೆ ಮೊಸಳೆಗಳು ಹೆಜ್ಜೆ ಹಾಕಿವೆ. ಇದರಿಂದ ಕೃಷ್ಣಾ ನದಿ ತೀರದ ಜನ ಆತಂಕದಲ್ಲಿ ದಿನ ದೂಡುವಂತಾಗಿದೆ.
ಇಂದು ಬೆಳಂಬೆಳಗ್ಗೆ ಸವದಿ ದರ್ಗಾ ಗ್ರಾಮದ ಬಳಿಯ ಕೃಷ್ಣಾ ನದಿ ತೀರದಿಂದ ತೋಟದ ವಸತಿಗೆ ಮೊಸಳೆಯೊಂದು ಆಹಾರ ಅರಸಿಕೊಂಡು ಬಂದಿದೆ. ಪ್ರಕಾಶ ಸನದಿ ಎಂಬುವರ ತೋಟದ ಮನೆಗೆ ನಸುಕಿನ ಜಾವ 3 ಗಂಟೆ ಸುಮಾರಿಗೆ ಆಹಾರ ಅರಸಿ ಬಂದಿದೆ.
ಬೆಳಗ್ಗೆ ಮೇಕೆಗಳ ಕಿರಿಚಾಟದಿಂದ ಪ್ರಕಾಶ ಸನದಿ ಕುಟುಂಬಸ್ಥರು ಎಚ್ಚರಗೊಂಡು ನೋಡಿದಾಗ ಮೊಸಳೆ ದಾಳಿ ಮಾಡಿರುವುದನ್ನು ನೋಡಿ ಬಡಗಿಯಿಂದ ಹೊಡೆದು ಮೇಕೆಯನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಮೊಸಳೆಯನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ.
ಇಷ್ಟೆಲ್ಲ ಆದರೂ ಕೂಡಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಇನ್ನೂ ಆಗಮಿಸಿಲ್ಲ. ಹೀಗಾಗಿ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಕೃಷ್ಣಾ ನದಿ ಬತ್ತಿದ ಬೆನ್ನಲ್ಲೆ ನದಿಯಲ್ಲಿರುವ ಮೊಸಳೆಗಳು ನಾಡಿನತ್ತ ಹೆಜ್ಜೆ ಹಾಕ್ಕಿದ್ದು, ನದಿ ತೀರದ ಜನರು ರಾತ್ರಿ ಹೊತ್ತು ತಿರುಗಾಡಲು ಭಯ ಭೀತರಾಗಿದ್ದಾರೆ. (ದಿಗ್ವಿಜಯ ನ್ಯೂಸ್)