ಚಿಕ್ಕತಿರುಪತಿ ಹುಂಡಿಯಲ್ಲಿ 53 ಲಕ್ಷ ರೂ. ಸಂಗ್ರಹ:  86 ಗ್ರಾಂ ಚಿನ್ನ, 510 ಗ್ರಾಂ ಬೆಳ್ಳಿ ಸೇರಿ ವಿದೇಶಿ ನೋಟುಗಳು ಪತ್ತೆ

17 LKR 3A
Published on

ಲಕ್ಕೂರು : ಪ್ರಸಿದ್ಧ ಯಾತ್ರಾ ಸ್ಥಳವಾದ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ ಹುಂಡಿಗಳಲ್ಲಿನ ಹಣವನ್ನು ಬುಧವಾರ ಎಣಿಕೆ ಮಾಡಲಾಗಿದ್ದು, 53 ಲಕ್ಷ ರೂ. ಗೂ ಹೆಚ್ಚಿನ ನಗದು ಸಂಗ್ರಹವಾಗಿದೆ.

ಚಿಕ್ಕತಿರುಪತಿಯ ಶ್ರೀಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಎಣಿಕೆ ಕಾರ್ಯಕ್ಕೂ ಮೊದಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ 3 ಹುಂಡಿ ತೆರೆದು ಎಣಿಕೆ ಮಾಡಲಾಯಿತು. ಬುಧವಾರ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಹುಂಡಿ ಎಣಿಕೆಯು ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಎಣಿಕೆ ಕಾರ್ಯದಲ್ಲಿ 53,25,703 ಲಕ್ಷ ರೂ., ಚಿನ್ನ 86 ಗ್ರಾಂ, ಬೆಳ್ಳಿ 510 ಗ್ರಾಂ ಸೇರಿ ವಿದೇಶಿ ನೋಟುಗಳು ಸಂಗ್ರಹವಾಗಿವೆ.

ಕರೊನಾ ಹಿನ್ನೆಲೆಯಲ್ಲಿ ದೇಗುಲವನ್ನು 8 ತಿಂಗಳಿಗೂ ಹೆಚ್ಚು ಕಾಲ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಕಳೆದ ಜುಲೈ ತಿಂಗಳ ಅಂತ್ಯದಲ್ಲಿ ಎಣಿಕೆ ಕಾರ್ಯ ನಡೆಸಿದಾಗ ಒಟ್ಟು ನಗದು 78,63,162 ಲಕ್ಷ ರೂ, ಬೆಳ್ಳಿ 1 ಕೆಜಿ, ಚಿನ್ನ 97 ಗ್ರಾಂ ಸೇರಿ ಅಮೆರಿಕಾದ 13, ನ್ಯೂಜಿಲ್ಯಾಂಡ್ ದೇಶದ 20, ನೇಪಾಳದ 2 ನೋಟು ಹಾಗೂ ಅರಬ್ ದೇಶದ 1 ನೋಟು ಸಂಗ್ರಹವಾಗಿತ್ತು.

ಆಗಸ್ಟ್ ತಿಂಗಳಿಂದ ನವೆಂಬರ್ 17ರವರೆಗೂ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮ, ಹಬ್ಬ ಹರಿದಿನ ಸೇರಿ ವಿಶೇಷ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಆಗಮಿಸಿದ್ದರು.

ಕಂದಾಯ ಇಲಾಖೆ ಸಿಬ್ಬಂದಿ, ದೇವಾಲಯ ಸಿಬ್ಬಂದಿ, ಐಒಬಿ ಬ್ಯಾಂಕ್ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಟಿ.ನಾರಾಯಣಸ್ವಾಮಿ, ಕೆ.ದಿವಾಕರ್, ಮಂಜುಳಾ ಸೋಮಶಂಕರ್, ಲಕ್ಷ್ಮೀನಾರಾಯಣಾಚಾರ್ಯ, ಡಿಸಿ ಕಚೇರಿ ಅಧೀಕ್ಷಕ ನಾಗರಾಜ್, ಪದ್ಮಾವತಿ, ಗುಟ್ಟಹಳ್ಳಿ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಬ್ರಮಣಿ, ಪೇಷ್ಕಾರ್ ವೀರಭದ್ರಪ್ಪ, ಮುಜರಾಯಿ ಇಲಾಖೆ ಹರಿಪ್ರಸಾದ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಟಿ.ಆರ್.ವೆಂಕಟೇಶ್‌ಗೌಡ, ನಂದನ್ ವಿ.ಗೌಡ, ಮಾಜಿ ಸದಸ್ಯರಾದ ಸುರೇಶ್‌ಬಾಬು, ಶ್ರೀನಿವಾಸ್, ಲಕ್ಕೂರು ಠಾಣೆಯ ಮುಖ್ಯಪೇದೆ ವೆಂಕೊಬ್‌ರಾವ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net