ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನ ಮಾರಬೇಡಿ

22 nrp 1
ಎನ್.ಆರ್.ಪುರ ತಾಲೂಕಿನ ಮೂಡಬಾಗಿಲು ಗ್ರಾಮದಲ್ಲಿ ಧೂಮಪಾನ ನಿಷೇಧ ಫಲಕ ಹಾಕುವಂತೆ ಮಾಲೀಕರಿಗೆ ಸೂಚಿಸಲಾಯಿತು. ಆರ್.ಕೇಶವಮೂರ್ತಿ, ಎಚ್.ಎ.ಶ್ರೀಧರ್, ಗಿರೀಶ್ ನಾಯಕ, ಎಲ್.ಎಂ.ದರ್ಶನಾಥ ಇತರರಿದ್ದರು.
Published on

ಎನ್.ಆರ್.ಪುರ: ಮೂಡಬಾಗಿಲು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶಾಲೆಗಳ ಆವರಣದಲ್ಲಿ ತಂಬಾಕು ಉತ್ಪನ್ನ ಮಾರುತ್ತಿದ್ದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ 2,200 ರೂ. ದಂಡ ವಿಧಿಸಿ, 6 ಪ್ರಕರಣ ದಾಖಲಿಸಿದರು.

ಆರೋಗ್ಯ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮೂಡಬಾಗಿಲು ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿನ ಅಂಗಡಿಗಳ ಮೇಲೆ ದಾಳಿ ಮಾಡಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡರು.

ಎನ್.ಆರ್.ಪುರ ಪೊಲೀಸ್ ಠಾಣೆ ಎಎಸ್‌ಐ ಎಚ್.ಎ.ಶ್ರೀಧರ್ ಮಾತನಾಡಿ, ಮಾಲೀಕರು ಅಂಗಡಿ ಮುಂದೆ ಧೂಮಪಾನ ನಿಷೇಧ ಹಾಗೂ 18 ವರ್ಷದ ಒಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ ಎಂದು ಕಡ್ಡಾಯವಾಗಿ ನಾಮಫಲಕ ಹಾಕಿಸಬೇಕು. ಬಹಿರಂಗವಾಗಿ ತಂಬಾಕು ಉತ್ಪನ್ನ ಪ್ರದರ್ಶಿಸುವುದು, ಸೇವಿಸಲು ಉತ್ತೇಜಿಸುವುದು ಹಾಗೂ ಶಾಲೆಯ 100 ಮೀ. ಅಂತರದಲ್ಲಿ ಮಾರಾಟ ಮಾಡುವುದು ಅಪರಾಧ ಎಂದು ಎಚ್ಚರಿಸಿದರು.

ಶಿಕ್ಷಣ ಇಲಾಖೆಯ ಸಿಆರ್‌ಪಿ ಗಿರೀಶ್ ನಾಯಕ್ ಮಾತನಾಡಿ, ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಸರ್ಕಾರ ನಿಷೇಧಿಸಿದೆ ಎಂದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ಎಂ.ದರ್ಶನಾಥ, ಸಾರ್ವಜನಿಕ ಆಸ್ಪತ್ರೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆರ್.ಕೇಶವಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net