ಅನುದಾನ ಸಮರ್ಪಕ ಬಳಕೆ : ಉಸ್ತುವಾರಿ ಕಾರ್ಯದರ್ಶಿ ಸೂಚನೆ, ಹಣ ಬಾಕಿ ಉಳಿಸಿಕೊಳ್ಳುವಂತಿಲ್ಲ

17CBP1ZPMeeting
Published on

ಚಿಕ್ಕಬಳ್ಳಾಪುರ: ಪ್ರಸಕ್ತ ಆರ್ಥಿಕ ವಷರ್ದಲ್ಲಿ ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನವನ್ನು ನಿಗದಿತ ಯೋಜನೆಗಳಿಗೆ ಸಮರ್ಪಕವಾಗಿ ಬಳಸುವಂತೆ ಸೂಚಿಸಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಏಕ್ ರೂಪ್ ಕೌರ್, ಯಾವುದೇ ಕಾರಣಕ್ಕೂ ಅನುದಾನ ಬಾಕಿ ಉಳಿಸಿಕೊಳ್ಳದಂತೆಯೂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಯಾವುದೇ ಯೋಜನೆಗಳು ಜಾರಿಯಾದ ತಕ್ಷಣ ಆಯಾ ಇಲಾಖೆ ಅಧಿಕಾರಿಗಳು ಕ್ರಿಯಾ ಯೋಜನೆ ತಯಾರಿಸಬೇಕು. ಅರ್ಜಿ ಆಹ್ವಾನ, ಟ್ರೆಂಡರ್ ಪ್ರಕ್ರಿಯೆ, ಆರ್ಥಿಕ ಬಿಡ್ ತೆರೆಯುವಿಕೆ ಸೇರಿ ವಿವಿಧ ಪ್ರಕ್ರಿಯೆಗಳನ್ನು ಸಕಾಲಕ್ಕೆ ಕೈಗೊಳ್ಳಬೇಕು. ಅನುದಾನ ಬಳಕೆಯಾಗದೇ ಸರ್ಕಾರಕ್ಕೆ ವಾಪಸಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕರೊನಾ ಸಾಂಕ್ರಾಮಿಕದ ಪ್ರಮಾಣ ಗಣನೀಯವಾಗಿ ತಗ್ಗಿರುವುದರಿಂದ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಒತ್ತು ನೀಡಿದ್ದಾರೆ. ಶೈಕ್ಷಣಿಕ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆ ಮಂಚೂಣಿಯಲ್ಲಿದ್ದು, ಕಳೆದ ಎರಡು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರುತ್ತಿದೆ ಎಂದು ಜಿಪಂ ಸಿಇಒ ಪಿ.ಶಿವಶಂಕರ್ ತಿಳಿಸಿದರು.

ಜಿಲ್ಲೆಯಲ್ಲಿರುವ 2,221 ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದ್ದು ಶೇ.87% ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ನವೆಂಬರ್‌ನಿಂದ ಅಕ್ಷರ ದಾಸೋಹ ಕಾರ್ಯಕ್ರಮ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಶೇ 100% ರಷ್ಟು ವಿದ್ಯಾರ್ಥಿಗಳು ಹಾಜರಾತಿಯ ನಿರೀಕ್ಷೆ ಹೊಂದಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯರಾಮರೆಡ್ಡಿ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್ ಅಮರೇಶ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ಮತ್ತಿತರರು ಇದ್ದರು.

ಅಂತರ್ಜಲವೃದ್ಧಿಗೆ ಆದ್ಯತೆ: ನರೇಗಾ ಯೋಜನೆಯಡಿ 55 ಲಕ್ಷ ಮಾನವ ದಿನಗಳ ಸೃಜನೆಯ ವಾರ್ಷಿಕ ಗುರಿ ಹೊಂದಿದ್ದು ಈಗಾಗಲೇ 51,22,468 ದಿನಗಳ ಗುರಿಯೊಂದಿಗೆ ಶೇ.93.14 ರಷ್ಟು ಸಾಧನೆ ಮಾಡಲಾಗಿದೆ. ಅದರಲ್ಲೂ ಮಳೆ ನೀರು ಸಂಗ್ರಹಿಸಿ ಅಂತರ್ಜಲವೃದ್ಧಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದ್ದು, 195 ಕೋಟಿ ಲೀಟರ್ ಮಳೆ ನೀರನ್ನು ಶೇಖರಿಸಿ, ಅಂತರ್ಜಲ ವೃದ್ಧಿಗೆ ಶ್ರಮಿಸಲಾಗಿದೆ ಎಂದು ಜಿಪಂ ಸಿಇಒ ಪಿ.ಶಿವಶಂಕರ್ ತಿಳಿಸಿದರು.

9 ಸಾವಿರ ಟನ್ ಮೀನು ಉತ್ಪಾದನೆ :ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯ 214 ಕೆರೆಗಳಲ್ಲಿ ಮೀನು ಸಾಗಾಣಿಕೆ ನಡೆಯುತ್ತಿದೆ. ಈ ಹಿಂದೆ ವಾರ್ಷಿಕ 3 ರಿಂದ 4 ಸಾವಿರ ಟನ್ ಮೀನು ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ 9 ಸಾವಿರ ಟನ್ ಮೀನು ಉತ್ಪಾದನೆಯಾಗಿ, ಜಿಲ್ಲೆ ರಾಜ್ಯದಲ್ಲೇ 5ನೇ ಸ್ಥಾನಕ್ಕೆ ಜಿಗಿದಿದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕಿ ತೇಜಸ್ವಿನಿ ವಿವರಿಸಿದರು.

ಬಹುತೇಕ ಕರೊನಾ ನಿಯಂತ್ರಣ: ಪ್ರಸ್ತುತ ಜಿಲ್ಲೆಯಲ್ಲಿ ಕರೊನಾ 11 ಸಕ್ರಿಯ ಪ್ರಕರಣಗಳಿದ್ದು, ಸೋಂಕು ಹರಡುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ ಮಾಹಿತಿ ನೀಡಿದರು. 18 ವರ್ಷ ಮೇಲ್ಪಟ್ಟ ಶೇ.90 ರಷ್ಟು ಜನರಿಗೆ ಮೊದಲ ಡೋಸ್, ಶೇ.56 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರತಿ ಮನೆ ಮನೆಗೂ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಸಮೀಕ್ಷೆ ಕೈಗೊಂಡಿದ್ದಾರೆ ಎಂದರು. ಆದಷ್ಟು ಬೇಗ 2ನೇ ಡೋಸ್ ಪಡೆಯಲು ಎದುರು ನೋಡುತ್ತಿರುವವರಿಗೆ ಲಸಿಕೆ ಹಾಕಿಸಲು ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು.

ಜಿಲ್ಲೆಯಲ್ಲಿ ಉತ್ತಮ ಮಳೆ: ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 700.6 ಮಿ.ಮೀ ಇದ್ದು, ಪ್ರಸ್ತುತ ವರ್ಷದಲ್ಲಿ ಇಲ್ಲಿಯವರೆಗೆ 1065.7 ಮಿ.ಮೀ ಮಳೆಯಾಗಿದೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ ವ್ಯಾಪ್ತಿಗೆ ಸೇರಿದ ಬರುವ 169 ಕೆರೆಗಳ ಪೈಕಿ 82 ಕೆರೆಗಳು ಪೂರ್ಣ ಪ್ರಮಾಣದಲ್ಲಿ, 24 ಕೆರೆಗಳು ಶೇ.51 ರಿಂದ 99 ರಷ್ಟು, 33 ಕೆರೆಗಳು ಶೇ.31 ರಿಂದ 50 ರಷ್ಟು, 29 ಕೆರೆಗಳು ಶೇ.30 ರಷ್ಟು ತುಂಬಿವೆ ಎಂದ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು. ಜಿಲ್ಲೆಗೊಂದು ಗೋಶಾಲೆ ಯೋಜನೆಯಡಿ ಶಿಡ್ಲಘಟ್ಟ ತಾಲೂಕಿನ ನಾಗಿರೆಡ್ಡಿಹಳ್ಳಿಯಲ್ಲಿ ಗೋಶಾಲೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net