ನಿಯಮ ಉಲ್ಲಂಘಿಸಿದ್ರೆ ನಿರ್ದಾಕ್ಷಿಣ್ಯ ಕ್ರಮ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಎಚ್ಚರಿಕೆ

29CBP1
Published on

ಚಿಕ್ಕಬಳ್ಳಾಪುರ: ನಿಗದಿತ ಅವಧಿಯೊಳಗೆ ನಿಯಮಾನುಸಾರ ಜನನ, ಮರಣ ಪತ್ರ ನೀಡಲು ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜನನ ಮರಣ ನೋಂದಣಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಗದಿತ ಕಾಲಮಿತಿಯೊಳಗೆ ನಿಗದಿತ ತಂತ್ರಾಂಶಗಳಲ್ಲಿ ಜನನ ಮತ್ತು ಮರಣ ಪ್ರಕರಣಗಳ ನೋಂದಣಿ, ಫಲಾನುಭವಿಗಳಿಗೆ ಪ್ರಮಾಣ ಪತ್ರಗಳನ್ನು ಸಮರ್ಪಕವಾಗಿ ವಿತರಿಸುವ ಸುವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ನಗರ, ಗ್ರಾಮೀಣ ಪ್ರದೇಶಗಳಲ್ಲಿನ ಸ್ಥಳೀಯಾಡಳಿತದ ಸಂಸ್ಥೆಗಳಲ್ಲಿನ ಸಕ್ಷಮ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವೈಖರಿಯನ್ನು ಕಾಲ ಕಾಲಕ್ಕೆ ಪರಿಶೀಲಿಸಲಾಗುವುದು ಎಂದು ಸೂಚಿಸಿದರು.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವರದಿಯಾಗುವ ಜನನ, ಮರಣ ಪ್ರಕರಣಗಳನ್ನು ಸಂಬಂಧಪಟ್ಟ ತಂತ್ರಾಂಶಗಳಲ್ಲಿ ನಮೂದಿಸಿದ ಬಳಿಕ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆನ್‌ಲೈನ್ ಮೂಲಕ ಮಾಹಿತಿಯನ್ನು ರವಾನಿಸಬೇಕು. ಆಸ್ಪತ್ರೆಗಳನ್ನು ಹೊರತುಪಡಿಸಿದಂತೆ ಜನನ, ಮರಣ ಪ್ರಕರಣಗಳನ್ನು ಸ್ಥಳೀಯ ಆಡಳಿತದ ಅಧಿಕಾರಿಗಳು ಹಾಗೂ ಗ್ರಾಮಲೆಕ್ಕಿಗರು ಕಾರ್ಯವ್ಯಾಪ್ತಿಯಲ್ಲಿ ಮಾಹಿತಿ ಪಡೆದು ಪರಿಶೀಲಿಸಬೇಕು ಎಂದರು.
ದಾಖಲೆಗಳ ನಿರ್ವಹಣೆಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಲಾಗುತ್ತದೆ. ಇನ್ನು ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳಲ್ಲಿನ ನಮೂದು ಪ್ರಕ್ರಿಯೆ ಮೇಲೆ ಹೆಚ್ಚು ನಿಗಾವಹಿಸಬೇಕು. ಉಸ್ತುವಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾ ಅಪರ ಜನನ, ಮರಣ ನೋಂದಣಾಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಯೋಜನಾ ನಿರ್ದೇಶಕಿ ಧನುರೇಣುಕ ಮಾತನಾಡಿ, ಮಹಾಲನೋಬಿಸ್ ಭಾರತ ಕಂಡ ಮಹಾನ್ ಸಂಖ್ಯಾಶಾಸ್ತ್ರಜ್ಞ. ಸ್ವತಂತ್ರ ಭಾರತದ ಪ್ರಥಮ ಯೋಜನಾ ಆಯೋಗದ ಸದಸ್ಯರಾಗಿದ್ದರು. ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸಿಟ್ಯೂಟ್ ಸ್ಥಾಪಿಸಿ, ಮಾಡಿ ದೊಡ್ಡ ಪ್ರಮಾಣದ ಮಾದರಿ ಸಮೀಕ್ಷೆಗಳ ವಿನ್ಯಾಸ, ಕೃಷಿ ಕ್ಷೇತ್ರದಲ್ಲಿ ಬೆಳೆ ಇಳುವರಿ ಅಂದಾಜು ಪದ್ದತಿ, ಬೆಳೆ ಸಮೀಕ್ಷೆ, ಬೆಳೆ ಕಟಾವು ಪ್ರಯೋಗಳ ಕುರಿತು ವೈಜ್ಞಾನಿಕ ತಿಳಿವಳಿಕೆ ನೀಡಿದ್ದು 2 ನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಸೇವೆಯನ್ನು ಗುರುತಿಸಿದ ಕೇಂದ್ರ ಸರ್ಕಾರವು ಪದ್ಮ ವಿಭೂಷಣ ಪ್ರಶಸ್ತಿ ನೀಡಿದ್ದು ಪ್ರತಿ ವರ್ಷ ಇವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಸಾಂಖ್ಯಿಕ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಪಂ ಸಿಇಒ ಪಿ.ಶಿವಶಂಕರ್ ಮಾತನಾಡಿ, ವಿವಿಧ ಯೋಜನೆಗಳು ಮತ್ತು ಪ್ರಗತಿಪರ ಕೆಲಸಗಳಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳ ಸಂಗ್ರಹಣೆಯು ಹೊಸ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ಇದಕ್ಕೆ ವಾಸ್ತವಾಂಶ ಮಾಹಿತಿ ವರದಿ ತಯಾರಿಸಲು ವಿಶೇಷ ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಅಪರ ಜನನ ಮರಣ ನೊಂದಣಾಧಿಕಾರಿ ಪ್ರಕಾಶ್ ರಾಯ್ಕರ್, ಸಹಾಯಕ ನಿರ್ದೇಶಕ ಶಿವಕುಮಾರ್ ಮತ್ತಿತರರು ಇದ್ದರು.

ಬೆಳೆ ಅಂದಾಜು ಸಮೀಕ್ಷೆ ಪಟ್ಟಿ ಬಿಡುಗಡೆ: ಸಭೆಯಲ್ಲಿ 2020-21ನೇ ಸಾಲಿನ ಜಿಲ್ಲಾ ಅಂಕಿ ಅಂಶಗಳ ನೋಟ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಅವಲೋಕನ ಪುಸ್ತಕ ಹಾಗೂ 2022-23ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ಅಂದಾಜು ಸಮೀಕ್ಷೆಯ ಕಾರ್ಯಯೋಜನಾ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು. ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ ಮತ್ತು ಪ್ರೊ.ಪಿ.ಸಿ.ಮಹಾಲನೋಬಿಸ್ ಅವರ 129ನೇ ಜನ್ಮ ದಿನಾಚರಣೆಯ ಅಂಗವಾಗಿ.ಪಿ.ಸಿ.ಮಹಾಲನೋಬಿಸ್ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಸೇರಿ ಹಲವರು ಪುಷ್ಟನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net