

ಚಿಕ್ಕಬಳ್ಳಾಪುರ : ದುಶ್ಚಟಗಳಿಗೆ ದಾಸರಾಗದೆ ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಭೈರಪ್ಪ ಶಿವಲಿಂಗ ನಾಯಿಕ ಸಲಹೆ ನೀಡಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಮಾನವ ಕಳ್ಳ ಸಾಗಾಣಿಕೆ ವಿರೋಧಿ ಸಪ್ತಾಹ ಅಂಗವಾಗಿ ಸೋಮವಾರ ಆಯೋಜಿಸಿದ್ದ ಆರೋಗ್ಯ ಮತ್ತು ಅರಿವು ಕಾರ್ಯಕ್ರಮದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹಾಳಾಗುವುದರ ಜತೆಗೆ ಕುಟುಂಬ ಮತ್ತು ಸಮಾಜವು ಅನೇಕ ರೀತಿಯ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕ್ಷಣಿಕ ಸುಖಕ್ಕಾಗಿ ಕೆಟ್ಟ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲೂ ಯುವ ಜನರದ್ದೇ ಬಹುಪಾಲು ಎಂದು ವಿಷಾಧಿಸಿದರು.
ವಿಶ್ವದಲ್ಲಿ 53 ಕೋಟಿ ವಯಸ್ಕರು ಕನಿಷ್ಠ ಒಂದು ಬಾರಿಯಾದರೂ ಮಾದಕ ವಸ್ತುಗಳನ್ನು ಬಳಸುತ್ತಿದ್ದು 24.6 ಕೋಟಿ ಜನ ಮದ್ಯ ಸೇವನೆ ಮಾಡುತ್ತಿದ್ದು ಇದರಲ್ಲಿ 2.9 ಕೋಟಿ ಮದ್ಯ, 25 ಲಕ್ಷ ಜನ ಗಾಂಜಾ, 28 ಲಕ್ಷ ಜನ ಅಫೀಮು ವ್ಯಸನಿಗಳಾಗಿದ್ದಾರೆ ಎಂದು ತಿಳಿಸಿದರು.
ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ, ಮತ್ತೆ ಹೊರ ಬರುವುದು ತುಂಬಾ ಕಷ್ಟ ಎಂಬುದನ್ನು ತಿಳಿದುಕೊಳ್ಳಬೇಕು. ಮದ್ಯ, ತಂಬಾಕು, ಡ್ರಗ್ಸ್, ಗಾಂಜಾ, ಅಫೀಮು ಮತ್ತಿತರ ಮಾದಕ ವಸ್ತುಗಳ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ. ದೈಹಿಕ ಮತ್ತು ಮಾನಸಿಕವಾಗಿ ದುರ್ಬಲಗೊಳಿಸುತ್ತವೆ. ಸ್ವಯಂ ನಿಯಂತ್ರಣ ಕಳೆದುಕೊಳ್ಳುವ ದುಸ್ಥಿತಿ ಬರುತ್ತದೆ ಎಂದರು.
ಜಿಪಂ ಸಿಇಒ ಪಿ.ಶಿವಶಂಕರ್ ಮಾತನಾಡಿ, ಮಾದಕ ವಸ್ತುಗಳ ಸೇವನೆಯ ನಿಯಂತ್ರಣದ ಜವಾಬ್ದಾರಿ ಕೇವಲ ಕೆಲವರಿಗೆ ಸೀಮಿತವಾಗಿಲ್ಲ. ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ. ಎಲ್ಲರೂ ಕೈ ಜೋಡಿಸಿದಾಗ ವ್ಯಸನ ಮುಕ್ತ ಸಮಾಜ ನಿರ್ಮಿಸಬಹುದು ಎಂದರು.
ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಕಾಂತ್ ಜಾನಕಿ ರಾಮ್ ಮಿಸ್ಕಿನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಶಿವಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ ಮತ್ತಿತರರು ಇದ್ದರು.