ಅಡಕೆ ಬೆಳೆಗಾರರಿಗೆ ಮುಖ್ಯಮಂತ್ರಿ ಅಭಯ

Areca Task Porse
Published on

ಬೆಂಗಳೂರು: ಗುಟ್ಖಾ, ಪಾನ್ ಮಸಾಲಾ ನಿಷೇಧ ಬಗ್ಗೆ ಅಡಕೆ ಬೆಳೆಗಾರರು ಆತಂಕಗೊಳ್ಳುವ ಅಗತ್ಯವಿಲ್ಲ. ಬೆಳೆಗಾರರಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಯ ನೀಡಿದ್ದಾರೆ.

ಶಾಸಕ ಹಾಗೂ ಅಡಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗ ಬುಧವಾರ ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿತು. ‘ಗುಟ್ಕಾ ನಿಷೇಧ ಹಾಗೂ ಅಡಕೆ ಬೆಳೆಗಾರರ ಸಂಕಷ್ಟ ಕುರಿತು ಕೇಳಿಬರುತ್ತಿರುವ ವದಂತಿಗಳ ಬಗ್ಗೆ ಚಿಂತೆ, ಆತಂಕ ಅನಗತ್ಯ. ನಾನು ಕೂಡ ಅಡಕೆ ಬೆಳೆಯುವ ಜಿಲ್ಲೆಯಿಂದ ಬಂದವ. ಬೆಳೆಗಾರರ ಹಿತಚಿಂತಕನಾಗಿದ್ದು, ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ನೋಡಿಕೊಳ್ಳಲಿದೆ’ ಎಂದು ಸಿಎಂ ಭರವಸೆ ನೀಡಿದರು. ಎಂ.ಎಸ್. ರಾಮಯ್ಯ ವಿ.ವಿ. ತಜ್ಞರು ಆರಂಭಿಸಿರುವ ಅಡಕೆ ಬೆಳೆ ಅಧ್ಯಯನ ಹಾಗೂ ಸಂಶೋಧನೆ, ಕಾನೂನು ಹೋರಾಟ, ಇತ್ಯಾದಿ ಚಟುವಟಿಕೆಗಳಿಗೆ 2 ಕೋಟಿ ರೂ. ಅನುದಾನಕ್ಕೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.

ಆತಂಕ ಏಕೆ?: ಡ್ರಗ್ಸ್ ಪ್ರಕರಣ ಹಿನ್ನೆಲೆಯಲ್ಲಿ ಸರ್ಕಾರ ಪಾನ್ ಮಸಾಲಾ ಹಾಗೂ ಗುಟ್ಖಾ ನಿಷೇಧಿಸುವ ಸಂಬಂಧ ಸುಗ್ರೀವಾಜ್ಞೆ ತರುವ ಚಿಂತನೆ ನಡೆಸಿದೆ ಎಂಬ ಮಾತು ಕೇಳಿಬಂದಿತ್ತು. ಈ ವಿಷಯ ಅಡಕೆ ಬೆಳೆಯುವ ಪ್ರದೇಶದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅಡಕೆ ಕಾರ್ಯಪಡೆ ಸದಸ್ಯರು ಸಿಎಂ ಭೇಟಿಯಾಗಿ ಪಾನ್ ಮಸಾಲಾ ನಿಷೇಧದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಹರತಾಳು ಹಾಲಪ್ಪ, ಕಾರ್ಯಪಡೆ ಸದಸ್ಯರಾದ ಹರಿಪ್ರಕಾಶ್ ಕೋಣೆಮನೆ, ಎಡೆಗೆರೆ ಸುಬ್ರಮಣ್ಯ, ಶಿವಕುಮಾರ್ ನಿಯೋಗದಲ್ಲಿ ಇದ್ದರು.

ಹೊಸ ಅಡಕೆಗೆ ದಾಖಲೆ ಧಾರಣೆ

ಪುತ್ತೂರು: ಹೊಸ ಕೊಯ್ಲಿನ ಅಡಕೆ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಧಾರಣೆಯಲ್ಲಿ ದಾಖಲೆ ಸೃಷ್ಟಿಸಿದೆ. ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಆರಂಭದಲ್ಲಿ ಹೊಸ ಅಡಕೆ ಕ್ವಿಂಟಾಲ್​ಗೆ 27,300-27,500 ರೂ. ಧಾರಣೆ ಇತ್ತು. ತಾಜಾ ಅಡಕೆ ಮಾರುಕಟ್ಟೆಗೆ ಪ್ರವೇಶಿಸಿದ 2ನೇ ವಾರದಲ್ಲೇ ಪ್ರತಿ ಕೆ.ಜಿ.ಗೆ 25 ರೂ. ಏರಿಕೆಯಾಗುವ ಮೂಲಕ 300 ರೂಪಾಯಿ ತಲುಪಿದೆ. ಖಾಸಗಿ ವರ್ತಕರು, ಪ್ರತಿ ಕೆ.ಜಿ. ಅಡಕೆಯನ್ನು ಗರಿಷ್ಠ 305 ರೂ.ವರೆಗೂ ಖರೀದಿಸುತ್ತಿದ್ದಾರೆ. ಮಂಗಳೂರು ಎಪಿಎಂಸಿಯಲ್ಲಿ 310 ಗರಿಷ್ಠ ಧಾರಣೆ (ವಾಡಿಕೆ 280 ರೂ.) ನೀಡಲಾಗಿದೆ. ಮಳೆಗಾಲದ ಅಡಕೆಗೆ ಈ ಪರಿ ಧಾರಣೆ ಏರಿಕೆ ಕಂಡಿರುವುದು ಇದೇ ಮೊದಲು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net