

ಬೆಂಗಳೂರು: ಭಾರತೀಯ ಜನತಾ ಪಕ್ಷದ 40ನೇ ಸಂಸ್ಥಾಪನಾ ದಿನದ ಅಂಗವಾಗಿ ಪಕ್ಷ ನೀಡಿರುವ ಸೂಚನೆಯಂತೆ ಸೋಮವಾರ ಒಂದು ಹೊತ್ತಿನ ಊಟ ತ್ಯಜಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಕರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್ಡೌನ್ ಮಾಡಿದ ನಂತರ ಜನರು ತೊಂದರೆ ಎದುರಿಸುತ್ತಿದ್ದು ಅವರ ಪರವಾಗಿ ಒಗ್ಗಟ್ಟು ತೋರಲು ಬಿಜೆಪಿ ಕಾರ್ಯಕರ್ತರಿಗೆ ಸೋಮವಾರ ಒಂದು ಹೊತ್ತಿನ ಊಟ ತೊರೆಯುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸೂಚಿಸಿದ್ದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯನ್ನು ಪಾಲಿಸುವುದಾಗಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿ ಊಟ ತ್ಯಜಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ನಾನು ಕೂಡ ಊಟ ತ್ಯಜಿಸುತ್ತೇನೆ. ಬಿಜೆಪಿ ಕಾರ್ಯಕರ್ತರು ಊಟ ತ್ಯಜಿಸುವಂತೆ ಮನವಿ ಮಾಡುತ್ತೇನೆ ಲಾಕ್ಡೌನ್ನಿಂದ ತೊಂದರೆ ಅನುಭವಿಸುತ್ತಿರುವ ಜನರ ಪರವಾಗಿ ನಿಲ್ಲೋಣ ಎಂದು ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷ ಆರಂಭವಾಗಿ 40 ವರ್ಷ ಕಳೆದಿದೆ. ಕರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಸರಳವಾಗಿ ಈ ದಿನವನ್ನು ಆಚರಿಸೋಣ. ವೈರಸ್ ಸೋಂಕು ತಡೆಯಲು, ವೈದ್ಯರು, ದಾದಿಯರು, ಪೊಲೀಸರು, ಸರ್ಕಾರಿ ನೌಕರರು, ಆಶಾ ಕಾರ್ಯಕರ್ತರು ತಮ್ಮ ಜೀವವನ್ನು ಪಣಕ್ಕೆ ಇಟ್ಟು ಹೋರಾಡುತ್ತಿದ್ದಾರೆ. ಇವರ ಪರವಾಗಿ ನಾವು ಇದ್ದೇವೆ ಎಂದು ಹೇಳಲು ನಮ್ಮ ಪಕ್ಷ ಮುಂದಾಗಿದೆ. ಇದಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಎಲ್ಲ ಕಾರ್ಯಕರ್ತರು ಹಾಗೂ ನಾಯಕರಿಗೆ ಸೋಮವಾರ ಒಂದು ಹೊತ್ತಿನ ಊಟ ತ್ಯಜಿಸುವಂತೆ ಸೂಚನೆ ನೀಡಿದ್ದಾರೆ. ಇದನ್ನು ಎಲ್ಲರೂ ಪಾಲಿಸೋಣ ಎಂದು ಅವರು ಹೇಳಿದರು. (ಏಜೆನ್ಸೀಸ್)