

| ಕೀರ್ತಿನಾರಾಯಣ ಸಿ. ಬೆಂಗಳೂರು
ಸರ್ಕಾರದ ಇಲಾಖೆಗಳು ಹಾಗೂ ಯೋಜನೆಗಳಲ್ಲಿ ಮುಖ್ಯ ಇಂಜಿನಿಯರ್ ಮತ್ತು ಪ್ರಧಾನ ಇಂಜಿನಿಯರ್ ಹುದ್ದೆಗಳನ್ನು ಬೇಕಾಬಿಟ್ಟಿಯಾಗಿ ಸೃಷ್ಟಿಸಿ ಕಾನೂನುಬಾಹಿರವಾಗಿ ‘ಮುಂಬಡ್ತಿ’ ಕೊಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ನಿಯಮ ಇಲ್ಲದೆಯೇ ಹುಟ್ಟಿಕೊಂಡ ಈ ಪ್ರಮುಖ ಹುದ್ದೆಗಳಿಗೇರಲು ರಾಜಕೀಯ ಕೃಪಾಕಟಾಕ್ಷದ ಜತೆಗೆ ಕೋಟಿ ಕೋಟಿ ಲಂಚದ ರೇಟ್ ಕೂಡ ನಿಗದಿಯಾಗಿದೆ. ಪ್ರಸ್ತುತ ವಿವಿಧ ಇಲಾಖೆಗಳು ಹಾಗೂ ಯೋಜನೆಗಳಲ್ಲಿ 150ಕ್ಕೂ ಅಧಿಕ ಮುಖ್ಯ ಇಂಜಿನಿಯರ್ ಹಾಗೂ ಪ್ರಧಾನ ಇಂಜಿನಿಯರ್ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರೂ ಅಧೀಕ್ಷಕ ಇಂಜಿನಿಯರ್ ವೃಂದದ ಹುದ್ದೆಯಿಂದ ಚೀಫ್ ಇಂಜಿನಿಯರ್, ಇಂಜಿನಿಯರ್ ಇನ್ ಚೀಫ್ ಹುದ್ದೆಗಳಿಗೆ ಮುಂಬಡ್ತಿ ಹೊಂದಿದ್ದಾರೆ. ಆದರೆ, ಕಾನೂನು ಬಾಹಿರವಾಗಿ ಇಂಥ ಮುಂಬಡ್ತಿ ಕೊಡಲಾಗಿದೆ. ಇಲಾಖೆಯ ಯಾವುದೇ ಹುದ್ದೆಗೆ ನೇಮಕ ಹಾಗೂ ಮುಂಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮ ರೂಪಿಸಿರಬೇಕು. ಆ ಇಲಾಖೆಗೆ ಮಂಜೂರಾದ ಶಾಶ್ವತ, ತಾತ್ಕಾಲಿಕ ಹುದ್ದೆಗಳ ಸಂಖ್ಯೆ, ಅದಕ್ಕೆ ಬೇಕಿರುವ ಅರ್ಹತೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕಡ್ಡಾಯವಾಗಿ ನಮೂದಿಸಿರಬೇಕು.
ಆದರೆ, ಈಗ ಸೃಷ್ಟಿಯಾಗಿರುವ ಮುಖ್ಯ ಇಂಜಿನಿಯರ್ ಹಾಗೂ ಪ್ರಧಾನ ಇಂಜಿನಿಯರ್ಗಳ ಹುದ್ದೆಗಳಿಗೆ ವೃಂದ ಮತ್ತು ನೇಮಕಾತಿ ನಿಯಮಗಳೇ ಇಲ್ಲದಿರುವ ಸಂಗತಿ ಬಹಿರಂಗವಾಗಿದೆ. ನಿಯಮ ಇಲ್ಲದೆ ಮುಂಬಡ್ತಿ ನೀಡಿರುವುದಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳು ‘ವಿಜಯವಾಣಿ’ಗೆ ಲಭ್ಯವಾಗಿವೆ.
ಶೇ.1 ಕಮೀಷನ್!: ಮುಖ್ಯ ಇಂಜಿನಿಯರ್ ಅಥವಾ ಪ್ರಧಾನ ಇಂಜಿನಿಯರ್ ಹುದ್ದೆಗೇರಿದವರ ಅಧಿಕಾರ ವ್ಯಾಪ್ತಿ ವಿಸ್ತಾರಗೊಳ್ಳುತ್ತದೆ. ಸಾವಿರಾರು ಕೋಟಿ ರೂ.ಗಳ ಯೋಜನೆಯ ಮುಖ್ಯಸ್ಥರಾದರೆ ಶೇ.1ರಿಂದ 2 ಕಮಿಷನ್ ಸಿಗುತ್ತದೆ. ಆದ್ದರಿಂದಲೇ ಈ ಹುದ್ದೆ ಗಿಟ್ಟಿಸಿಕೊಳ್ಳಲು ಭಾರೀ ಪೈಪೋಟಿ ಇದೆ. ಇಲಾಖೆಯ ಪ್ರಮುಖ ನಿರ್ಧಾರಗಳು ಸೇರಿ ಅನುದಾನ ನಿರ್ವಹಣೆ ಹಾಗೂ ಅನುಮೋದನೆ ಅಧಿಕಾರ ಇರುತ್ತದೆ. 1 ರಿಂದ 2 ಕೋಟಿ ರೂ.ವರೆಗೆ ತಲಾ ಹುದ್ದೆಗೆ ಲಂಚ ನಿಗದಿ ಪಡಿಸಲಾಗಿದೆ ಎಂದು ಖುದ್ದು ಅಧಿಕಾರಿಗಳೇ ಮಾಹಿತಿ ನೀಡುತ್ತಾರೆ.
ಸ್ಮಾರ್ಟ್ ಸಿಟಿಗೇ 40 ಹುದ್ದೆ?: ಬರೀ ಸ್ಮಾರ್ಟ್ಸಿಟಿ ಯೋಜನೆ ಅನುಷ್ಠಾನಕ್ಕಾಗಿಯೇ 40 ಅಧೀಕ್ಷಕ ಇಂಜಿನಿಯರ್ಗಳಿಗೆ ಮುಖ್ಯ ಇಂಜಿನಿಯರ್ ಹುದ್ದೆಗೆ ಮುಂಬಡ್ತಿ ಕೊಡಲಾಗಿದೆ. ಕೇಂದ್ರ ಸರ್ಕಾರದಿಂದಲೇ ಅನುಮತಿ ದೊರೆತಿರುವುದರಿಂದ ಬಡ್ತಿ ಕೊಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇಷ್ಟೊಂದು ಮುಖ್ಯ ಇಂಜಿನಿಯರ್ಗಳ ಅಗತ್ಯವಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಯೋಜನೆ ಪೂರ್ಣಗೊಂಡ ನಂತರ ಹೊಸದಾಗಿ ಸೃಷ್ಟಿಸಿರುವ ಹುದ್ದೆಗಳನ್ನು ರದ್ದುಪಡಿಸಬೇಕಿದೆ.
ಅಧಿಕಾರಿಗಳು ಹೇಳೋದೇನು?: ಜಲಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗೆ ರೂಪಿಸಿರುವ ವೃಂದ ಮತ್ತು ನೇಮಕಾತಿ ನಿಯಮ ಆಧರಿಸಿ ಬಡ್ತಿ ಕೊಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ನಿಯಮದ ಪ್ರಕಾರ ಪ್ರತಿ ಇಲಾಖೆಗೂ ಪ್ರತ್ಯೇಕ ವೃಂದ ಮತ್ತು ನೇಮಕ ನಿಯಮ ಇರಬೇಕು. ಈ ಬಗ್ಗೆ ಪ್ರಶ್ನಿಸಿದರೆ ಇಲಾಖೆ ಮಟ್ಟದಲ್ಲೇ ರ್ಚಚಿಸಿ, ಸೂಕ್ತ ನಿಯಮಾವಳಿಗಳನ್ನು ರೂಪಿಸಿಕೊಂಡೇ ಬಡ್ತಿ ಕೊಡಲಾಗುತ್ತದೆ. ಯೋಜನೆ ಪೂರ್ಣಗೊಂಡ ನಂತರ ಆ ಹುದ್ದೆಗಳನ್ನು ರದ್ದುಪಡಿಸಲಾಗುತ್ತದೆ ಎಂದು ಉತ್ತರಿಸುತ್ತಾರೆ. ಆದರೆ, ಇಲಾಖಾ ಮಟ್ಟದಲ್ಲಿ ರೂಪಿಸಿಕೊಂಡಿರುವ ನಿಯಮಾವಳಿಗಳ ದಾಖಲೆ ಕೇಳಿದರೆ ಇಲ್ಲ ಎನ್ನುತ್ತಾರೆ.
32 ಯೋಜನೆ ಪ್ರಗತಿ: ಪ್ರಸ್ತುತ ರಾಜ್ಯದಲ್ಲಿ ವಿಶ್ವೇಶ್ವರಯ್ಯ ಜಲನಿಗಮ (ವಿಜೆಎನ್ಎಲ್), ಕರ್ನಾಟಕ ನೀರಾವರಿ ನಿಗಮ (ಕೆಎನ್ಎನ್ಎಲ್), ಕಾವೇರಿ ನೀರಾವರಿ ನಿಗಮ (ಸಿಎನ್ಎನ್ಎಲ್), ಕೃಷ್ಣ ಭಾಗ್ಯ ಜಲ ನಿಗಮ (ಕೆಬಿಟಿಎನ್ಎಲ್) ಸೇರಿ 32 ಯೋಜನೆಗಳು ಪ್ರಗತಿಯಲ್ಲಿವೆ. ನಗರಾಭಿವೃದ್ಧಿ, ಇಂಧನ, ಆರ್ಡಿಪಿಆರ್, ಬಿಬಿಎಂಪಿ, ನೀರಾವರಿ, ವಸತಿ, ಬಿಡಿಎ ಸೇರಿ ಬಹುತೇಕ ಇಲಾಖೆಗಳಲ್ಲಿ ಮುಖ್ಯ ಇಂಜಿನಿಯರ್ ಹುದ್ದೆಗಳಿವೆ.
ಬಡ್ತಿ ನಿಯಮ ಏನಿದೆ?: ಕರ್ನಾಟಕ ನಾಗರಿಕ ಸೇವೆಗಳ ನಿಯಮಾವಳಿಗಳ (ಕೆಸಿಎಸ್ಆರ್) ಪ್ರಕಾರ ನಿಯಮ 42ರಡಿ ಅರ್ಹತೆ ಹಾಗೂ ಜೇಷ್ಠತೆ ಅನ್ವಯ ಅಧೀಕ್ಷಕ ಇಂಜಿನಿಯರ್ ಹುದ್ದೆಯಿಂದ ಚೀಫ್ ಇಂಜಿನಿಯರ್ ಅಥವಾ ಇಂಜಿನಿಯರ್ ಇನ್ ಚೀಫ್ ಹುದ್ದೆಗೆ ಪದೋನ್ನತಿ ನೀಡಬೇಕು. ಒಂದು ವೇಳೆ ಸ್ಥಾನಪನ್ನ ಬಡ್ತಿಗೆ ಹುದ್ದೆ ಖಾಲಿ ಇರದಿದ್ದರೆ ಕೆಸಿಎಸ್ಆರ್ ನಿಯಮ 32ರ ಅನ್ವಯ ಸ್ವತಂತ್ರ ಪ್ರಭಾರ ಹುದ್ದೆಯಲ್ಲಿರಿಸಬೇಕು. ಖಾಯಂ ಹುದ್ದೆಗಳು ನಿವೃತ್ತಿ ಅಥವಾ ಬೇರೆ ಕಾರಣಗಳಿಂದಾಗಿ ಖಾಲಿಯಾದರೆ ಪುನಃ ನಿಯಮ 42ರ ಅನ್ವಯ ಅಧಿಕಾರಿಯನ್ನು ವರ್ಗಾಯಿಸಿ ಖಾಯಂ ಮುಂಬಡ್ತಿ ಕೊಡಬೇಕು.