

ಪ್ಯಾರಿಸ್: ಫ್ರೆಂಚ್ ಹಿಂದೂ ಮಹಾಸಾಗರದ ಪ್ರದೇಶವಾದ ಮಯೊಟ್ಟೆ ಶನಿವಾರ (ಡಿ.14) ಅಪ್ಪಳಿಸಿದ ಚಿಡೋ ಚಂಡಮಾರುತಕ್ಕೆ ಸಂಪೂರ್ಣ ತತ್ತರಿಸಿದ್ದು, ಚಂಡಮಾರುತದ ಹೊಡೆತಕ್ಕೆ ಕನಿಷ್ಠ 14 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿತ್ತು. ಆದರೆ, ಇಂದು ಸೈಕ್ಲೋನ್ ಹೊಡೆತಕ್ಕೆ 1000ಕ್ಕೂ ಅಧಿಕ ಮಂದಿ ಸಾವಿಗೀಡಾರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ ಫ್ರೆಂಚ್ ಆಂತರಿಕ ಸಚಿವಾಲಯ ಹೊಸ ಮಾಹಿತಿ ಹಂಚಿಕೊಂಡಿದ್ದು, ಈ ಹಂತದಲ್ಲಿ ಸಾವಿನ ಸಂಖ್ಯೆ ಇಷ್ಟೇ ಇದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಸುಮಾರು ಒಂದು ಶತಮಾನದ ಅತ್ಯಂತ ಶಕ್ತಿಶಾಲಿ ಚಂಡಮಾರುತ ಇದಾಗಿದೆ. ಸಾವಿನ ಸಂಖ್ಯೆ ಪ್ರಾಯಶಃ ಸಾವಿರಾರು ಇರಬಹುದು ಎಂದು ಹೇಳಲಾಗಿದೆಯೇ ವಿನಃ ಅದೇ ನಿಖರವಾದ ಸಂಖ್ಯೆ ಎಂದು ಈ ಹಂತದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಫ್ರೆಂಚ್ ಆಂತರಿಕ ಸಚಿವಾಲಯ ಸ್ಪಷ್ಟವಾಗಿ ತಿಳಿಸಿದೆ. ಚಿಡೋ ಚಂಡಮಾರುತವು ಮಾಯೊಟ್ಟೆಗೆ ರಾತ್ರಿಯಿಡೀ ಅಪ್ಪಳಿಸಿದ್ದು, 200 ಕಿಮೀಗಿಂತಲೂ (124 mph) ಹೆಚ್ಚಿನ ವೇಗದ ಗಾಳಿಯಲ್ಲಿ ಮೆಟಿಯೊ-ಫ್ರಾನ್ಸ್ನ ವಸತಿ, ಸರ್ಕಾರಿ ಕಟ್ಟಡಗಳು ಮತ್ತು ಆಸ್ಪತ್ರೆಗಳನ್ನು ಧ್ವಂಸಗೊಳಿಸಿದೆ.
"ಪ್ರಸ್ತುತ ನಾವು ಎದುರಿಸುತ್ತಿರುವ ಪರಿಸ್ಥಿತಿ ನಿಜಕ್ಕೂ ದುರಂತ. ನೀವು ಪರಮಾಣು ಯುದ್ಧದ ನಂತರದ ಸ್ಥಿತಿ ಹೇಗಿರುತ್ತದೆ ಎಂದು ನೋಡಿದ್ದೀರಿ. ಈಗ ನಾವಿರುವ ಸ್ಥಿತಿಯೂ ಹಾಗೆಯೇ ಇದೆ. ನಮ್ಮ ನೆರೆಹೊರೆಯು ಸಂಪೂರ್ಣವಾಗಿ ಕಣ್ಮರೆಯಾಗಿರುವುದನ್ನು ನಾನು ನೋಡ್ತಿದ್ದೀನಿ" ಎಂದು ಮಯೊಟ್ಟೆಯ ರಾಜಧಾನಿಯ ಮಾಮೌಡ್‌ಜೌ ನಿವಾಸಿ ಮೊಹಮ್ಮದ್ ಇಸ್ಮಾಯೆಲ್ ದೂರವಾಣಿ ಕರೆ ಮೂಲಕ ರಾಯಿಟರ್ಸ್‌ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ,(ಏಜೆನ್ಸೀಸ್).